ADVERTISEMENT

ಬಿಳಿಗಿರಿರಂಗನಾಥಸ್ವಾಮಿ ಹುಲಿಸಂರಕ್ಷಿತ ಪ್ರದೇಶದಲ್ಲಿ ಹಲ್ಲಿಯ ಹೊಸ ಪ್ರಬೇಧ ಪತ್ತೆ

ಇಬ್ಬರು ಸಂಶೋಧಕರಿಂದ ಅಧ್ಯಯನ, ವಿಜ್ಞಾನ ನಿಯತಕಾಲಿಕದಲ್ಲಿ ವರದಿ ಪ್ರಕಟ

ಸೂರ್ಯನಾರಾಯಣ ವಿ
Published 14 ಸೆಪ್ಟೆಂಬರ್ 2022, 3:58 IST
Last Updated 14 ಸೆಪ್ಟೆಂಬರ್ 2022, 3:58 IST
ಬಿಆರ್‌ಟಿ ಅರಣ್ಯದಲ್ಲಿ ಪತ್ತೆಯಾಗಿರುವ ಕುಬ್ಜ ಹಲ್ಲಿಗಳು. ಹೆಣ್ಣು ಹಲ್ಲಿ (ಎಡಚಿತ್ರ). ಗಂಡು ಹಲ್ಲಿ
ಬಿಆರ್‌ಟಿ ಅರಣ್ಯದಲ್ಲಿ ಪತ್ತೆಯಾಗಿರುವ ಕುಬ್ಜ ಹಲ್ಲಿಗಳು. ಹೆಣ್ಣು ಹಲ್ಲಿ (ಎಡಚಿತ್ರ). ಗಂಡು ಹಲ್ಲಿ   

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿಸಂರಕ್ಷಿತ ಪ್ರದೇಶದಲ್ಲಿ (ಬಿಆರ್‌ಟಿ) ಹಲ್ಲಿಯ ಹೊಸ ಪ್ರಭೇದ ಪತ್ತೆಯಾಗಿದೆ.

ಅಶೋಕ ಟ್ರಸ್ಟ್‌ ಫಾರ್‌ ರಿಸರ್ಚ್‌ ಇನ್‌ ಇಕಾಲಜಿ ಅಂಡ್ ದಿ ಎನ್ವಿರಾನ್‌ಮೆಂಟ್‌ (ಏಟ್ರೀ) ಸಂಶೋಧಕ ಡಾ.ಅರವಿಂದ್‌ ಎನ್‌.ಎ. ಹಾಗೂ ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್‌ ಅವರು ಹಲ್ಲಿಯ ಹೊಸ ಪ್ರಬೇಧವನ್ನು ಪತ್ತೆ ಮಾಡಿದ್ದು, ಅಧ್ಯಯನ ನಡೆಸಿ ಅದನ್ನು ‘ಕುಬ್ಜ ಹಲ್ಲಿ’ ಎಂದು ಗುರುತಿಸಿದ್ದಾರೆ.

ಹಲ್ಲಿಯು 2.57 ಸೆಂ.ಮೀನಷ್ಟು (25.7 ಮಿ.ಮೀ) ಉದ್ದವಿದೆ. ಗಂಡು ಹಲ್ಲಿಯ ದೇಹ ಕಂದು ಬಣ್ಣ ಹಾಗೂ ಬಾಲ ಕಪ್ಪಾಗಿದೆ. ಹೆಣ್ಣು ಹಲ್ಲಿಯ ಪೂರ್ತಿ ದೇಹ ಕಂದು ಬಣ್ಣದಿಂದ ಕೂಡಿದೆ.

ADVERTISEMENT

ಅಧ್ಯಯನ ವರದಿಯು ಪ್ರಾಣಿ ವಿಜ್ಞಾನಕ್ಕೆ ಸಂಬಂಧಿಸಿದ ಜರ್ಮನಿಯ ನಿಯತಕಾಲಿಕ ವರ್ಟೆಬ್ರೆಟ್‌ ಝೂಲಾಜಿಯಲ್ಲಿ ಪ್ರಕಟಗೊಂಡಿದೆ.

2021ರ ಆಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಬಿಳಿಗಿರಿ ರಂಗನಬೆಟ್ಟ, ಕೆ.ಗುಡಿ ವ್ಯಾಪ್ತಿಯಲ್ಲಿ ಹಲ್ಲಿಯ ಬಗ್ಗೆ ಇಬ್ಬರೂ ಮಾಹಿತಿ ಸಂಗ್ರಹಿಸಿದ್ದರು. ಹಲ್ಲಿಯ ದೇಹ ರಚನೆ ಹಾಗೂ ಡಿಎನ್‌ಎ ಪರೀಕ್ಷೆಯ ದತ್ತಾಂಶಗಳನ್ನು ಅಧ್ಯಯನ ಮಾಡಿ, ಇದು ಹಲ್ಲಿಯ ಪ್ರತ್ಯೇಕ ಪ್ರಭೇದ ಎಂಬುದನ್ನು ನಿರೂಪಿಸಿದ್ದಾರೆ.

ಪತ್ತೆ ಅನಿರೀಕ್ಷಿತ: ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸಂಶೋಧಕ ಡಾ.ಅರವಿಂದ್‌, ‘ಬಿಳಿಗಿರಿರಂಗನಬೆಟ್ಟದ ಕಾಫಿ ತೋಟಗಳಲ್ಲಿ ಕಂಡು ಬರುವ ಹಕ್ಕಿಗಳು, ಸರೀಸೃಪಗಳ ಬಗ್ಗೆ ಮಾಹಿತಿ ಕಲೆ ಹಾಕುವುದಕ್ಕಾಗಿ ಬಿಳಿಗಿರಿರಂಗನಬೆಟ್ಟಕ್ಕೆ ಬಂದಿದ್ದೆವು. ಅಲ್ಲಿನ ಏಟ್ರೀ ಕಚೇರಿಯಲ್ಲಿ ರಾತ್ರಿ ಚರ್ಚೆ ಮಾಡುತ್ತಿರ ಬೇಕಾದರೆ, ಹಲ್ಲಿ ಕಂಡು ಬಂತು. ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದರಿಂದ ಗಮನ ಸೆಳೆಯಿತು. ಮೊದಲೆಲ್ಲೂ ಇಂತಹ ಹಲ್ಲಿಯನ್ನು ನೋಡಿರಲಿಲ್ಲ. ಹಾಗಾಗಿ, ಇದು ಹೊಸ ಪ್ರಭೇದವಿರಬಹುದು ಎಂಬ ಅನುಮಾನ ಬಂತು. ತಕ್ಷಣವೇ ಅರಣ್ಯದಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಬೇಕು ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿದೆವು. ಇಲಾಖೆಯ ಸಹಕಾರದಿಂದ ಅಧ್ಯಯನ ಸಾಧ್ಯವಾಯಿತು’ ಎಂದರು.

‘ಇದುವರೆಗೆ 70ರಿಂದ 80ರಷ್ಟು ಹಲ್ಲಿ ಪ್ರಬೇಧಗಳನ್ನು ಗುರುತಿಸಲಾಗಿದೆ. ಪತ್ತೆಯಾಗಿರುವ ಹಲ್ಲಿಯ ದೇಹರಚನೆ ಹಾಗೂ ಡಿಎನ್‌ಎ ಪರೀಕ್ಷೆಯ ಮಾಹಿತಿಗಳನ್ನು ಕ್ರೋಡೀಕರಿಸಿ ಅಧ್ಯಯನ ಮಾಡಿದ್ದೇವೆ. ಈವರೆಗೆ ಪತ್ತೆಯಾಗಿರುವ ಹಲ್ಲಿಯ ಪ್ರಭೇದಗಳಿಗಿಂತ ಭಿನ್ನವಾಗಿರುವುದು ದೃಢಪಟ್ಟಿದೆ’
ಎಂದರು.

‘ರಾತ್ರಿ ಹೊತ್ತು ಕಾಣುವ ಈ ಹಲ್ಲಿಗಳು ಕಲ್ಲು, ಬಂಡೆಗಳ ಸಂದಿಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಮೂರ್ನಾಲ್ಕು ಹೆಣ್ಣು ಹಲ್ಲಿಗಳು ಒಂದೇ ಕಡೆ ಮೊಟ್ಟೆ ಇಡುತ್ತವೆ. ಸದ್ಯಕ್ಕೆ ಬಿಳಿಗಿರಿರಂಗನಬೆಟ್ಟದ ಅರಣ್ಯ ಬಿಟ್ಟು ಬೇರೆಲ್ಲೂ ಈ ಕುಬ್ಜ ಹಲ್ಲಿ ಇರುವುದು ವರದಿಯಾಗಿಲ್ಲ’ ಎಂದರು.

ವಿಜ್ಞಾನಿ ಉಮಾಶಂಕರ್‌ ಹೆಸರು

ಹೊಸ ಹಲ್ಲಿ ಪ್ರಬೇಧಕ್ಕೆ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಏಟ್ರೀ ಸಂಸ್ಥಾಪಕರಲ್ಲಿ ಒಬ್ಬರಾದ ಡಾ.ಉಮಾಶಂಕರ್‌ ಅವರ ಹೆಸರನ್ನು ಸೇರಿಸಿ ‘ಉಮಾಶಂಕರ್‌ ಕುಬ್ಜ ಹಲ್ಲಿ’ (umashankar's dwarf gecko) ಎಂದು ಹೆಸರಿಡಲಾಗಿದೆ.

‘ಡಾ.ಉಮಾಶಂಕರ್‌ ಅವರು ಸಸ್ಯ ಹಾಗೂ ಜೀವ ಸಂಕಲಗಳ ಉಗಮದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಪರಿಸರ ಹಾಗೂ ಜೀವ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಗೌರವ ಸಲ್ಲಿಸುವ ಉದ್ದೇಶದಿಂದ ಅವರ ಹೆಸರನ್ನೇ ಇಡಲಾಗಿದೆ’ ಎಂದು ಡಾ.ಅರವಿಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.