ADVERTISEMENT

ಮಹದೇಶ್ವರ ಬೆಟ್ಟ: ರಂಗಮಂದಿರಕ್ಕೆ ಹೊಸ ರೂಪ, ಶುಚಿತ್ವಕ್ಕೆ ಒತ್ತು

ಭಕ್ತರ ಅನುಕೂಲಕ್ಕಾಗಿ ಕ್ರಮ, ನೆಲಕ್ಕೆ ಬಣ್ಣ, ಸಭಾಂಗಣ ಸ್ವಚ್ಛ

ಪ್ರಜಾವಾಣಿ ವಿಶೇಷ
Published 26 ಫೆಬ್ರುವರಿ 2024, 5:00 IST
Last Updated 26 ಫೆಬ್ರುವರಿ 2024, 5:00 IST
ಮಹದೇಶ್ವರ ಬೆಟ್ಟದಲ್ಲಿರುವ ರಂಗಮಂದಿರದ ನೆಲಕ್ಕೆ ಬಣ್ಣ ಬಳಿಯಲಾಗಿದ್ದು, ಆವರಣವನ್ನು ಸ್ವಚ್ಛಗೊಳಿಸಲಾಗಿದೆ
ಮಹದೇಶ್ವರ ಬೆಟ್ಟದಲ್ಲಿರುವ ರಂಗಮಂದಿರದ ನೆಲಕ್ಕೆ ಬಣ್ಣ ಬಳಿಯಲಾಗಿದ್ದು, ಆವರಣವನ್ನು ಸ್ವಚ್ಛಗೊಳಿಸಲಾಗಿದೆ   

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧಯಾತ್ರಾ ಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯವು ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಸಜ್ಜುಗೊಳ್ಳುತ್ತಿದೆ. ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವುದರಿಂದ, ಅವರಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸವನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿದೆ. 

ಇತ್ತೀಚೆಗಷ್ಟೇ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವ ರಘು ಎ.ಈ ಅವರು ಖುದ್ದಾಗಿ ಸಿದ್ಧತೆಯ ಪರಿಶೀಲನೆ ನಡೆಸುತ್ತಿದ್ದು, ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ತಂಗುವ ಬಯಲು ರಂಗಮಂದಿರಕ್ಕೆ ಹೊಸ ರೂಪ ನೀಡಲು ಪ್ರಯತ್ನ ಪಟ್ಟಿದ್ದಾರೆ. 

ರಂಗಮಂದಿರದಲ್ಲಿ ಯಾವಾಗಲೂ ಸ್ವಚ್ಛತೆ ಕಡಿಮೆ ಇರುತ್ತದೆ. ಬರುವ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ತಿಂಡಿ ತಿನಿಸುಗಳನ್ನು ತಿಂದು ಅಲ್ಲೇ ಕೈತೊಳೆಯುವುದು, ಉಗಿಯುವುದು ಎಲ್ಲ ಮಾಡುತ್ತಾರೆ. ಮಕ್ಕಳು ಮಲ ಮೂತ್ರವನ್ನು ವಿಸರ್ಜನೆಯನ್ನೂ ಮಾಡುತ್ತಾರೆ. 

ADVERTISEMENT

ಇಡೀ ರಂಗಮಂದಿರವನ್ನು ನೀರು ಹಾಕಿ ತೊಳೆದು ಸ್ವಚ್ಛಗೊಳಿಸಲಾಗಿದ್ದು, ನೆಲಕ್ಕೆ ಹಸಿರು ಬಣ್ಣವನ್ನು ಬಳಿಯಲಾಗಿದೆ. ಕಸ ಎಸೆಯಲು ಪ್ರತ್ಯೇಕ ಡಬ್ಬ ಇಡಲಾಗಿದೆ. ರಂಗ ಮಂದಿರದ ಆವರಣದಲ್ಲಿ ನೈರ್ಮಲ್ಯ ಕಾಪಾಡಲು ಒತ್ತು ನೀಡಲಾಗಿದೆ. 

ಅಧಿಕಾರಿಗಳಿಗೆ ಸೂಚನೆ: ‘ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಬಂದು ದೇವಾಲಯದ ಆವರಣಗಳಲ್ಲಿ ಇರುವ ಭಕ್ತರ ತಂಗುದಾಣಗಳಲ್ಲಿ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ, ಕಸವನ್ನು ವಿಲೇವಾರಿ ಮಾಡಲು ಪ್ರತ್ಯೇಕ ಬುಟ್ಟಿಗಳನ್ನು ಇಡಬೇಕು. ಸನ್ನಿಧಿಗೆ ಬರುವ ಭಕ್ತರು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಬಳಕೆ ಮಾಡದಂತೆ ಅಲ್ಲಲ್ಲಿ ಸಾಧ್ಯವಾದಷ್ಟು ಸೂಚನಾ ಫಲಕಗಳನ್ನು ಅಳವಡಿಸಬೇಕು’ ಎಂದು ರಘು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಪ್ರಾಧಿಕಾರದ ಪ್ರಯತ್ನಕ್ಕೆ ಭಕ್ತರು ಮೆಚ್ಚುಗೆ ಸೂಚಿಸಿದ್ದಾರೆ. ರಂಗಮಂದಿರದಲ್ಲಿ ಅನೈರ್ಮಲ್ಯ ಮಾಡುವವರ ಮೇಲೆ ನಿಗಾ ಇಡಲು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ಹೊಸ ಪ‍್ರಯತ್ನದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ರಘು, ‘ಜಾತ್ರೆ ಸಂದರ್ಭದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿದ್ದರೆ, ಭಕ್ತರಿಗೆ ಸೋಂಕು ತಗುಲುವುದನ್ನು ತಪ್ಪಿಸಬಹುದು’ ಎಂದರು. 

‘ಇದೇ ಉದ್ದೇಶದಿಂದ ರಂಗ ಮಂದಿರ ಸೇರಿದಂತೆ ಇತರೆ ಸ್ಥಳಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ರಂಗಮಂದಿರವನ್ನು ಪೂರ್ಣವಾಗಿ ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಗಿದೆ. ಎಲ್ಲ ಶೌಚಾಲಯಗಳಲ್ಲಿ ಶುಚಿತ್ವವನ್ನು ಕಾಪಾಡಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಜನ ಸಂದಣಿಯಾಗುವಂತಹ ಸ್ಥಳಗಳಿಗೆ ಸೋಂಕು ತಡೆಗಳನ್ನು ಸಿಂಪಡಿಸಿ, ಹಾಗಾಗಿ, ಶುಚಿಯಾಗಿಡುವಂತೆ ನೌಕರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೆ ಎಲ್ಲ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ’ ಎಂದು ತಿಳಿಸಿದರು.

ಬೆಟ್ಟ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗುತ್ತಿದೆ. ಭಕ್ತರಿಗೆ ಅನುಕೂಲ ಕಲ್ಪಿಸಲು ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುವುದು
-ರಘು, ಪ್ರಾಧಿಕಾರದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.