ADVERTISEMENT

ಚಾಮರಾಜನಗರ: ಒಂದೇ ದಿನ ದಾಖಲೆಯ 90 ಪ್ರಕರಣ ದೃಢ

1000 ಸನಿಹಕ್ಕೆ ಸೋಂಕಿತರ ಸಂಖ್ಯೆ, 27 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 13:34 IST
Last Updated 6 ಆಗಸ್ಟ್ 2020, 13:34 IST
ಚಾಮರಾಜನಗರದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಸಿಬ್ಬಂದಿಯೊಬ್ಬರಿಗೆ ಕೋವಿಡ್‌–19 ದೃಢಪಟ್ಟಿರುವುದರಿಂದ ಬ್ಯಾಂಕ್‌ ಅನ್ನು ಸೀಲ್‌ಡೌನ್‌ ಮಾಡಲಾಗಿದೆ
ಚಾಮರಾಜನಗರದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ಸಿಬ್ಬಂದಿಯೊಬ್ಬರಿಗೆ ಕೋವಿಡ್‌–19 ದೃಢಪಟ್ಟಿರುವುದರಿಂದ ಬ್ಯಾಂಕ್‌ ಅನ್ನು ಸೀಲ್‌ಡೌನ್‌ ಮಾಡಲಾಗಿದೆ   

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ 90 ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ. ಒಂದೇ ದಿನದಲ್ಲಿ ಈ ಪ್ರಮಾಣದಲ್ಲಿ ಸೋಂಕು ದೃಢಪಡುತ್ತಿರುವುದು ಇದೇ ಮೊದಲು. ಈ ಹಿಂದೆ ಒಂದು ದಿನ ಗರಿಷ್ಠ ಎಂದರೆ 54 ಪ್ರಕರಣ ದಾಖಲಾಗಿತ್ತು.

ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 1,000 ಸನಿಹಕ್ಕೆ ಬಂದಿದೆ. 990 ಮಂದಿಗೆ ಸೋಂಕು ತಗುಲಿದೆ. ಗುರುವಾರ 27 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸೋಂಕು ಮುಕ್ತರಾದವರ ಒಟ್ಟು ಸಂಖ್ಯೆ 595ಕ್ಕೆ ತಲುಪಿದೆ. 381 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 12 ಮಂದಿ ಮೃತಪಟ್ಟಿದ್ದಾರೆ. 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ 638 ಗಂಟಲು ದ್ರವದ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 422 ಆರ್‌ಟಿಪಿಸಿಆರ್‌, 216 ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ 81 ಮಂದಿಗೆ ಹಾಗೂ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಒಂಬತ್ತು ಮಂದಿಗೆ ಸೋಂಕು ದೃಢಪಟ್ಟಿದೆ. 548 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ADVERTISEMENT

ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು: ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳ 34 ಮಂದಿಗೆ ಸೋಂಕು ತಗುಲಿದೆ. ಎರಡನೇ ಸ್ಥಾನದಲ್ಲಿ ಕೊಳ್ಳೇಗಾಲ ತಾಲ್ಲೂಕು ಇದೆ. ಇಲ್ಲಿ 27 ಮಂದಿಗೆ ಸೋಂಕು ಇರುವುದು ವರದಿಯಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 15, ಯಳಂದೂರು ತಾಲ್ಲೂಕಿನಲ್ಲಿ 13, ಹನೂರು ತಾಲ್ಲೂಕಿನಲ್ಲಿ ಒಬ್ಬರಲ್ಲಿ ಕೋವಿಡ್‌–19 ಇರುವುದು ದೃಢಪಟ್ಟಿದೆ.

ಗುಣಮುಖರಾದವರಲ್ಲಿ ಕೊಳ್ಳೇಗಾಲ ತಾಲ್ಲೂಕಿನವರು (12) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಏಳು, ಯಳಂದೂರು ತಾಲ್ಲೂಕಿನ ಐವರು, ಗುಂಡ್ಲುಪೇಟೆ ತಾಲ್ಲೂಕಿನ ಇಬ್ಬರು, ಹನೂರು ತಾಲ್ಲೂಕಿನ ಒಬ್ಬರು ಸೋಂಕು ಮುಕ್ತರಾಗಿದ್ದಾರೆ.

ಸಕ್ರಿಯ ಪ್ರಕರಣಗಳು: ಚಾಮರಾಜನಗರ ತಾಲ್ಲೂಕಿನಲ್ಲಿ 117, ಕೊಳ್ಳೇಗಾಲದಲ್ಲಿ 101, ಗುಂಡ್ಲುಪೇಟೆಯಲ್ಲಿ 82, ಯಳಂದೂರಿನಲ್ಲಿ 58 ಹಾಗೂ ಹನೂರು ತಾಲ್ಲೂಕಿನಲ್ಲಿ 23 ಸಕ್ರಿಯ ಪ್ರಕರಣಗಳಿವೆ.

17,528 ಜನರ ಮೇಲೆ ನಿಗಾ: ಸೋಂಕಿತರ 8,269 ಪ್ರಾಥಮಿಕ ಸಂಪರ್ಕಿತರು ಹಾಗೂ ದ್ವಿತೀಯ ಸಂಪರ್ಕಿತರು 9,259 ಸೇರಿದಂತೆ 17,528 ಮಂದಿ ಮನೆ ಕ್ವಾರಂಟೈನ್‌ನಲ್ಲಿದ್ದಾರೆ.

ಹೆಚ್ಚಿದ ಆರ್‌ಟಿಪಿಸಿಆರ್‌ ಪರೀಕ್ಷೆ

ಈ ಮಧ್ಯೆ, ಕೆಲವು ದಿನಗಳಿಂದೀಚೆಗೆ ಜಿಲ್ಲೆಯಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೂ ಮೊದಲು ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.

‘ಆ್ಯಂಟಿಜೆನ್‌ ಕಿಟ್‌ಗಳು ಮುಗಿಯುತ್ತಾ ಬಂದಿವೆ. ಹೊಸದಾಗಿ ಪೂರೈಕೆಯಾಗಿಲ್ಲ. ತುರ್ತು ಸಂದರ್ಭದ ಅಗತ್ಯಕ್ಕಾಗಿ ಈ ಕಿಟ್‌ಗಳನ್ನು ಉಳಿಸಿಕೊಂಡು, ಆರ್‌ಟಿಪಿಸಿಆರ್‌ ಪ್ರಯೋಗಾಲಯದಲ್ಲಿ ಹೆಚ್ಚು ಪರೀಕ್ಷೆಗಳಿಗೆ ಒತ್ತು ನೀಡಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.