ADVERTISEMENT

ಚಾಮರಾಜನಗರ: ಆಶ್ರಮ ವಸತಿ ಶಾಲೆ ಹೊರಗುತ್ತಿಗೆ ಶಿಕ್ಷಕರಿಗೆ ಬಾರದ ವೇತನ

ಗಿರಿಜನ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳ ಅಡುಗೆ ಸಹಾಯಕರಿಗೂ ಮಾರ್ಚ್‌ನಿಂದ ಆಗಿಲ್ಲ ಸಂಬಳ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 12:51 IST
Last Updated 25 ನವೆಂಬರ್ 2020, 12:51 IST
ಹನೂರು ತಾಲ್ಲೂಕಿನ ಕೋಣನಕೆರೆ ಗ್ರಾಮದಲ್ಲಿರುವ ಗಿರಿಜನ ಆಶ್ರಮ ವಸತಿ ಶಾಲೆ
ಹನೂರು ತಾಲ್ಲೂಕಿನ ಕೋಣನಕೆರೆ ಗ್ರಾಮದಲ್ಲಿರುವ ಗಿರಿಜನ ಆಶ್ರಮ ವಸತಿ ಶಾಲೆ   

ಮಹದೇಶ್ವರ ಬೆಟ್ಟ: ಜಿಲ್ಲೆಯ ಗಿರಿಜನ ಆಶ್ರಮ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಹಾಗೂ ಶಾಲೆ ಹಾಗೂ ವಸತಿ ನಿಲಯಗಳ ಅಡುಗೆ ಸಹಾಯಕಿಯರಿಗೆ ಒಂಬತ್ತು ತಿಂಗಳುಗಳಿಂದ ವೇತನ ಬಂದಿಲ್ಲ.

ಇದರಿಂದಾಗಿ ಸಂಬಳವನ್ನೇ ನಂಬಿ ಜೀವನ ನಡೆಸುತ್ತಿರುವುವರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಉದ್ಯೋಗದಲ್ಲಿದ್ದರೂ ನಿರುದ್ಯೋಗಿಗಳಂತೆ ಜೀವನ ನಡೆಸುವಂತಾಗಿದೆ.

ಹನೂರು ತಾಲ್ಲೂಕಿನಲ್ಲಿ ಎಂಟು ಆಶ್ರಮ ಶಾಲೆಗಳಿವೆ. ಕಾಯಂ ಶಿಕ್ಷಕರು ಇಲ್ಲದೇ ಇರುವುದರಿಂದ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ತಾಲ್ಲೂಕಿನ ಆಶ್ರಮ ಶಾಲೆಗಳಲ್ಲಿ 26 ಮಂದಿ ಶಿಕ್ಷಕರಿದ್ದಾರೆ. 48 ಮಂದಿ ಅಡುಗೆ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ ಹಾವಳಿ ಆರಂಭವಾಗಿ ಲಾಕ್‌ಡೌನ್‌ ಜಾರಿಗೊಳಿಸಿದ ನಂತರ ಇವರಿಗೆ ಸಂಬಳ ಬಂದಿಲ್ಲ. ‌

ADVERTISEMENT

‘ಒಂಬತ್ತು ತಿಂಗಳುಗಳಿಂದ ವೇತನ ಬಾರದೇ ಇರುವುದರಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ಕೋವಿಡ್‌ ಸಮಯದಲ್ಲೂ ಇಲಾಖೆ ನಮಗೆ ಯಾವುದೇ ರೀತಿಯಾದ ನೆರವು ನೀಡಿಲ್ಲ. ಸರ್ಕಾರಿ ಶಿಕ್ಷಕರಿಗೆ ಸರಿ ಸಮನಾಗಿ ಕೆಲಸ ಮಾಡುತ್ತಿದ್ದೇವೆ. ಅವರಿ‌ಗಿಂತ ಹೆಚ್ಚೇ ತೊಡಗಿಕೊಳ್ಳುತ್ತೇವೆ. ವಿದ್ಯಾಗಮ ಕಾರ್ಯಕ್ರಮದಲ್ಲೂ ಸಂಪೂರ್ಣವಾಗಿ ಕೆಲಸ ಮಾಡಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಇಬ್ಬರು ಶಿಕ್ಷಕರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವಿಚಾರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಲಾಗಿದೆ. ಪರಿಶೀಲಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಅಷ್ಟೂ ತಿಂಗಳ ವೇತನ ನೀಡಿದರೆ ನಮಗೆ ಅನುಕೂಲವಾಗುತ್ತದೆ’ ಎಂದು ಅವರು ಹೇಳಿದರು.

‘ಆಶ್ರಮ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಿಕೊಡುವಂತಹ ಬೋಧಕರಿಗೆ ವೇತನ ನೀಡದೇ ಇರುವುದು ಖಂಡನೀಯ. ಇತರ ಶಾಲೆಗಳಲ್ಲಿರುವ ಶಿಕ್ಷಕರಿಗೆ, ಕಾಲೇಜುಗಳ ಉಪಾನ್ಯಾಸಕರಿಗೆ ಸರ್ಕಾರವು ವೇತನ ನೀಡುತ್ತಿದೆ. ಅವರಿಗೆ ಕೊಡುತ್ತಿರುವಾಗ ಗಿರಿಜನ ಆಶ್ರಮ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗೆ ಯಾಕೆ ಪಾವತಿ ಮಾಡುತ್ತಿಲ್ಲ? ಇದು ಸರಿಯಲ್ಲ. ಸಂಬಳ ಬಾರದಿದ್ದರೆ ಅವರು ಕುಟುಂಬ ನಿರ್ವಹಿಸುವುದಾದರೂ ಹೇಗೆ? ಅಧಿಕಾರಿಗಳು, ಸಚಿವರು ತಕ್ಷಣವೇ ಇತ್ತ ಕಡೆ ಗಮನ ಹರಿಸಿ ಶಿಕ್ಷಕರು ಹಾಗೂ ಅಡುಗೆ ಸಹಾಯಕಿಯರು ಮತ್ತು ಭದ್ರತೆ ಸಿಬ್ಬಂದಿಗಳಿಗೆ ವೇತನ ನೀಡಲು ಮುಂದಾಗಬೇಕು’ ಎಂದು ಸೋಲಿಗಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ದೊಡ್ಡಯ್ಯ ಅವರು ಒತ್ತಾಯಿಸಿದರು.

ಜಿಲ್ಲೆ ಮಾತ್ರ ಅಲ್ಲ, ರಾಜ್ಯದ ಸಮಸ್ಯೆ

ಜಿಲ್ಲೆ ಮಾತ್ರ ಅಲ್ಲ, ಇಡೀ ರಾಜ್ಯದಲ್ಲಿ ಈ ಸಮಸ್ಯೆ ಉಂಟಾಗಿದೆ. ಆದರೂ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ ಎಂಬುದು ಶಿಕ್ಷಕರ ಆರೋಪ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ‍ಪರಿಶಿಷ್ಟ ವರ್ಗಗಳ ಜಿಲ್ಲಾ ಕಲ್ಯಾಣ ಅಧಿಕಾರಿ ಹೊನ್ನೇಗೌಡ ಅವರು, ‘ಏಪ್ರಿಲ್ ತಿಂಗಳಿನಿಂದ ಶಿಕ್ಷಕರು ಹಾಗೂ ಅಡುಗೆ ಸಹಾಯಕಿಯರಿಗೆ ಇಡೀ ರಾಜ್ಯದಲ್ಲೇ ವೇತನವಾಗಿಲ್ಲ. ನಮ್ಮ ಜಿಲ್ಲೆಯಲ್ಲಿ 166 ಮಂದಿ ಕೆಲಸ ನಿರ್ವಹಿಸುತ್ತಿದ್ದು ಯಾರೊಬ್ಬರಿಗೂ ವೇತನ ಮಂಜೂರಾಗಿಲ್ಲ. ಜೂನ್ ತಿಂಗಳಿನಲ್ಲೇ ನಾವು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಇತ್ತೀಚೆಗೆ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ’ ಎಂದರು.

‘ವೇತನ ಪಾವತಿಗೆ ಅನುದಾನದ ಕೊರ‌ತೆ ಇಲ್ಲ.ಸರ್ಕಾರದ ಮಟ್ಟದಲ್ಲಿ ಜಾರಿಯಾಗಬೇಕಿದೆ. ಅಲ್ಲಿ ಅನುಮತಿ ನೀಡಿದರೆ ವೇತನ ಪಾವತಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.