ADVERTISEMENT

ಮಲೆ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ

ಸಾವಿರಾರು ಭಕ್ತರು ಭಾಗಿ, ಹರಕೆ, ಕಾಣಿಕೆ ಸಲ್ಲಿಸಿ ಪುನೀತರಾದ ಭಕ್ತರು

ಜಿ.ಪ್ರದೀಪ್ ಕುಮಾರ್
Published 21 ಸೆಪ್ಟೆಂಬರ್ 2025, 4:35 IST
Last Updated 21 ಸೆಪ್ಟೆಂಬರ್ 2025, 4:35 IST
ಮಲೆ ಮಹದೇಶ್ವರನ ದೇವಾಲಯದಲ್ಲಿ ಶನಿವಾರ ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು
ಮಲೆ ಮಹದೇಶ್ವರನ ದೇವಾಲಯದಲ್ಲಿ ಶನಿವಾರ ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು   

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರನ ದೇವಾಲಯದಲ್ಲಿ ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನೆರವೇರಿತು.

ಫಲಪುಷ್ಪಗಳಿಂದ ಅಲೃಂಕತಗೊಂಡಿದ್ದ ಮಾದಪ್ಪನಿಗೆ ಮುಂಜಾನೆಯ ನುಸುಕಿನಲ್ಲಿ ಮಹಾ ಮಂಗಳಾರತಿ ಮಾಡಿ ಬಿಲ್ವಾರ್ಚನೆ, ಗಂಗಾಭಿಷೇಕ, ಕ್ಷೀರಾಭಿಷೇಕ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಬೆಳಿಗ್ಗೆ 10 ಗಂಟೆಗೆ ವಡ್ಡನಹಳ್ಳಿ ಗೌರಮ್ಮ ಹಾಗೂ ಶಿವಣ್ಣ ಸಿದ್ದಗಂಗಮ್ಮ ಕುಟುಂಬದಿಂದ ಮಾದಪ್ಪನಿಗೆ ಎಣ್ಣೆ ಮಜ್ಜನ ಹಾಗೂ ವಿಶೇಷ ಸೇವೆ ನೆರವೇರಿತು.

ADVERTISEMENT

ಸಂಜೆ 7 ಗಂಟೆಗೆ ಮೈಸೂರಿನ ನೇತ್ರಸಿಂಹ ಕುಟುಂಬ ವಿಶೇಷ ಸೇವೆ ಹಾಗೂ ಉತ್ಸವಾದಿಗಳನ್ನು ಸ್ವಾಮಿಗೆ ಅರ್ಪಿಸಿದರು. ಎಣ್ಣೆ ಮಜ್ಜನದ ಅಂಗವಾಗಿ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು. ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ, ಬೆಳ್ಳಿ ರಥೋತ್ಸವ, ಪಂಜಿನ ಸೇವೆ ದೂಪದ ಸೇವೆ, ಉರುಳುಸೇವೆ ನೆರವೇರಿಸಿ ಮಾದಪ್ಪನಿಗೆ ಮುಡಿ ಅರ್ಪಿಸಿದರು.

ದೇವರ ಧರ್ಶನಕ್ಕೆ ಧರ್ಮದರ್ಶನದ ವ್ಯವಸ್ಥೆಯ ಜೊತೆಗೆ ಶೀಘ್ರ ದರ್ಶನ (₹500, ₹200 ಟಿಕೆಟ್‌) ವ್ಯವಸ್ಥೆ ಇತ್ತು. ವೃದ್ಧರು ಅಂಗವಿಕಲರು ಪ್ರತ್ಯೇಕ ಸಾಲಿನಲ್ಲಿ ನೇರ ದರ್ಶನ ಮಾಡಿದರು. ಆಗಾಗ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು.‌

ಮುಗಿಯದ ಕಾಮಗಾರಿ: ಮಹದೇಶ್ವರ ದೇವಸ್ಥಾನದಲ್ಲಿ ತಿರುಪತಿ ಮಾದರಿಯಲ್ಲಿ ಒಳ ಪ್ರವೇಶಕ್ಕೆ ಸುರಂಗ ಮಾರ್ಗದ ಕಾಮಗಾರಿ ನಡೆಯುತಿದ್ದು ದರ್ಶನಕ್ಕೆ ತೊಂದರೆಯಾಗುತ್ತಿದೆ ಎಂದು ಭಕ್ತರು ದೂರಿದ್ದಾರೆ. ಮಾದಪ್ಪನ ಕ್ಷೇತ್ರಕ್ಕೆ ಭೇಟಿ ನೀಡಿದರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆ ಇದ್ದು  ದೇವಾಲಯ ಪ್ರದಕ್ಷಿಣೆ ಹಾಕಿ, ಹರಕೆ ಹಾಗೂ ಕಾಣಿಕೆ ಸಲ್ಲಿಸುವುದು ರೂಢಿ. ಆದರೆ, ಅಪೂರ್ಣ ಕಾಮಗಾರಿಯಿಂದ ‌ಹರಕೆ ಸಲ್ಲಿಕೆಗೆ ಅಡ್ಡಿಯಾಗುತ್ತಿದೆ. ಕ್ಷೇತ್ರ ಅಭಿವೃದ್ಧಿಯಾಗುತ್ತಿರುವುದು ಸ್ವಾಗತಾರ್ಹ, ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಸಿದರೆ ಒಳಿತು ಎಂದು ಮೈಸೂರಿನಿಂದ ಬಂದಿದ್ದ ಭಕ್ತ ಮಹೆಶ್ ತಿಳಿಸಿದರು. 

ದೇವಾಲಯದ ದಕ್ಷಿಣ ಗೋಪುರದಿಂದ ಪಂಜು, ದೂಪ ಹಾಕಿ ಉರುಳು ಸೇವೆ ಪ್ರಾರಂಭಿಸಿದರೆ ಉತ್ತರ ಭಾಗದಲ್ಲಿರುವ ಬಸವೇಶ್ವರನ ದೇವಾಲಯ ತಲುಪಿ ಮತ್ತೆ ಮರಳಿ ಬರಬೇಕಾಗಿದೆ. ಕಾಮಗಾರಿ ಪೂರ್ಣಗೊಳ್ಳದೆ ದೇವಾಲಯವನ್ನು ಪೂರ್ತಿ ಪ್ರದಕ್ಷಿಣೆ ಹಾಕಲು ಸಾಧ್ಯವಾಗದೆ ಹರಕೆ ಪೂರ್ಣಗೊಳ್ಳುತ್ತಿಲ್ಲ. ಮುಂಬರುವ ಜಾತ್ರಾ ಮಹೋತ್ಸವದೊಳಗೆ ಕಾಮಗಾರಿ ಪೂರ್ಣಗೊಳಿಸಿದರೆ ಹರಕೆ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಭಕ್ತರು ಮನವಿ ಮಾಡಿದ್ದಾರೆ.

ಉರುಳುಸೇವೆ ಮೂಲಕ ಭಕ್ತರು ಹರಕೆ ಸಲ್ಲಿಸಿದರು 
ದೇವರಿಗೆ ದೂಪ ಸೇವೆ ಸಲ್ಲಿಸಿದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.