ADVERTISEMENT

‘ವೃದ್ಧಾಶ್ರಮಗಳಿಗೆ ದೂಡದೆ ಹೆತ್ತವರ ಆರೈಕೆ ಮಾಡಿ’

ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಸರ್ಕಾರದಿಂದ ಹಲವು ಯೋಜನೆ, ಕಾರ್ಯಕ್ರಮಗಳ ಜಾರಿ: ಶಾಸಕ ಸಿ.ಪುಟ್ಟರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 7:26 IST
Last Updated 31 ಅಕ್ಟೋಬರ್ 2025, 7:26 IST

ಚಾಮರಾಜನಗರ: ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ವೃದ್ಧಾಪ್ಯ ವೇತನ, ವಿಧವಾ ವೇತನ, ರಿಯಾಯಿತಿ ದರದಲ್ಲಿ ಬಸ್ ಪ್ರಯಾಣ ಸೌಲಭ್ಯ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು ಅರ್ಹರಿಗೆ ತಲುಪಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸ್ಥಳೀಯ ಸ್ವಯಂ–ಸೇವಾಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಧ್ಯಾಕಾಲದಲ್ಲಿ ಮಕ್ಕಳು ಆಸರೆಯಾಗುತ್ತಾರೆ ಎಂಬ ಸಣ್ಣ ನಿರೀಕ್ಷೆ ಭರವಸೆಯೊಂದಿಗೆ ಪೋಷಕರು ಮಕ್ಕಳ ಪಾಲನೆ, ಪೋಷಣೆ ಮಾಡುತ್ತಾರೆ. ಪೋಷಕರ ಭಾವನೆಗಳಿಗೆ ನೋವುಂಟು ಮಾಡದೆ ಮಕ್ಕಳು ಗೌರವದಿಂದ ನಡೆಸಿಕೊಳ್ಳಬೇಕು, ಜೀವನದ ಇಳಿಹೊತ್ತಿನಲ್ಲಿ ಹೆತ್ತವರನ್ನು ಕಡೆಗಣಿಸಬಾರದು ಎಂದು ಕಿವಿಮಾತು ಹೇಳಿದರು.

ADVERTISEMENT

ಸಮಾಜದಲ್ಲಿ ತಂದೆ ತಾಯಿಗಳನ್ನು ಕಡೆಗಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹಿರಿಯರಿಗೆ ಅಗೌರವ ತೋರಲಾಗುತ್ತಿದೆ. ಇಂತಹ ನಡವಳಿಕೆ ಸರಿಯಲ್ಲ, ಹಿರಿಯರ ಮಾರ್ಗದರ್ಶನ ಬದುಕಿಗೆ ದಾರಿದೀಪವಾಗಬಲ್ಲದು ಎಂದರು.

ವಯಸ್ಸಾದ ನಂತರ ಹಿರಿಯ ನಾಗರಿಕರು ಚಿಕ್ಕ ಮಕ್ಕಳಂತಾಗುವುದು ಸಹಜ. ಇಂತಹ ಹೊತ್ತಿನಲ್ಲಿ ಹಿರಿಯರನ್ನು ಆರೈಕೆ ಮಾಡದೆ ವೃದ್ಧಾಶ್ರಮಕ್ಕೆ ದೂಡುವುದು ಅನ್ಯಾಯ. ಹಿರಿಯರ ಪಾಲನೆ, ಪೋಷಣೆ ಮಕ್ಕಳ ಕರ್ತವ್ಯದ ಜೊತೆಗೆ ಸಮಾಜದ ಜವಾಬ್ದಾರಿಯೂ ಹೌದು. ಹಿರಿಯ ನಾಗರಿಕರ ನೆರವಿಗೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಹಲವು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಮಾಜಿ ಪ್ರಧಾನಿ ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಹಿರಿಯ ನಾಗರಿಕರಿಗೆ ನೆರವಾಗಿದ್ದರು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ‘ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಲು ಹಗಲು-ರಾತ್ರಿ ಶ್ರಮಿಸುವ ತಂದೆ-ತಾಯಿಗಳನ್ನು ಮುಪ್ಪಿನಲ್ಲಿ ಕಡೆಗಣಿಸುವುದು ಸರಿಯಲ್ಲ. ಕೊನೆಯಗಾಲದಲ್ಲಿ ಹಿರಿಯರನ್ನು ವೃದ್ಧಾಶ್ರಮಗಳಿಗೆ ದೂಡದೆ ಪ್ರೀತಿ, ವಾತ್ಸಲ್ಯದಿಂದ ನೋಡಬೇಕು ಎಂದರು.

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸರ್ಕಾರ ಗುರುತಿನ ಚೀಟಿ ನೀಡಿದೆ. ಪ್ರತಿ ತಾಲ್ಲೂಕಿನಲ್ಲಿ ವೃದ್ಧಾಶ್ರಮ ತೆರೆದು ಉಚಿತ ಊಟ, ವಸತಿ ವ್ಯವಸ್ಥೆ, ಆರೋಗ್ಯ ಸೇವೆ ಒದಗಿಸುತ್ತಿದೆ. ಸರ್ಕಾರಿ ಬಸ್, ರೈಲು, ವಿಮಾನದಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ನೀಡಿದೆ. ಕೆಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ 10 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿಯೂ ಇಂತಹ ವ್ಯವಸ್ಥೆ ಆಗಬೇಕು. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ನಾಗರಿಕರಾದ ನಾದಸ್ವರ ಕಲಾವಿದ ಕಿಲಗೆರೆ ಗ್ರಾಮದ ಚೌಡಯ್ಯ ಹಾಗೂ ಶತಾಯುಷಿ ಮಸಗಾಪುರದ ದೀನ ಮಣಿಯಮ್ಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಆರ್. ಸುರೇಶ್, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ರಮೇಶ್, ಹಿರಿಯ ನಾಗರಿಕರ ಸಂಘದ ಜಿಲ್ಲಾಧ್ಯಕ್ಷ ಪದ್ಮಾಕ್ಷಿ ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.