ADVERTISEMENT

ಕೋವಿಡ್‌: ಒಬ್ಬರು ಸಾವು, 49 ಪ್ರಕರಣಗಳು ದೃಢ

900ಕ್ಕೆ ತಲುಪಿದ ಸೋಂಕಿತರ ಸಂಖ್ಯೆ, ಮೃತಪಟ್ಟವರು 12, ಸಕ್ರಿಯ ಪ್ರಕರಣಗಳು 318

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 14:08 IST
Last Updated 5 ಆಗಸ್ಟ್ 2020, 14:08 IST
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ   

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿಗೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿದೆ. ಹೊಸದಾಗಿ 49 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಕೋವಿಡ್‌ ಪ್ರಕರಣಗಳ ಸಂಖ್ಯೆ 900ಕ್ಕೆ ತಲುಪಿದೆ.

ಬುಧವಾರ 21 ಮಂದಿ ಗುಣಮುಖರಾಗಿದ್ದಾರೆ. ಸೋಂಕು ಮುಕ್ತರಾದರ ಒಟ್ಟು ಸಂಖ್ಯೆ 568ಕ್ಕೆ ಏರಿದೆ. 318 ಸಕ್ರಿಯ ಪ್ರಕರಣಗಳಿವೆ. 11 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿನಿಂದಾಗಿ ಮೃತಪಟ್ಟವರು ಕೊಳ್ಳೇಗಾಲದ ಕಾಂಗ್ರೆಸ್‌ ಮುಖಂಡ ಡಿ.ಸಿದ್ದರಾಜು. 71 ವರ್ಷದ ಅವರಿಗೆ ಜುಲೈ 29ರಂದು ಕೋವಿಡ್‌–19 ಇರುವುದು ಪತ್ತೆಯಾಗಿತ್ತು. ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಚಿಕಿತ್ಸೆ‌ಗೆ ಸ್ಪಂದಿಸದ ಅವರು ಮಂಗಳವಾರ ತಡರಾತ್ರಿ 2.15ರ ಸುಮಾರಿಗೆ ಮೃತಪಟ್ಟರು.

ADVERTISEMENT

ಕೊಳ್ಳೇಗಾಲ ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದ ದಲಿತರ ಸ್ಮಶಾನದಲ್ಲಿ ಅವರ ಜಮೀನಿನಲ್ಲಿ ಸರ್ಕಾರದ ಶಿಷ್ಟಾಚಾರದಂತೆ ಅಂತ್ಯ ಸಂಸ್ಕಾರ ನಡೆಯಿತು. ಅವರ ಕುಟುಂಬಸ್ಥರು, ಸ್ನೇಹಿತರು ದೂರದಲ್ಲೇ ನಿಂತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ಜಿಲ್ಲೆಯಲ್ಲಿ ಬುಧವಾರ 695 ಕೋವಿಡ್‌–19 ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ ಪ್ರಯೋಗಾಲಯದಲ್ಲಿ 453, ರ‍್ಯಾಪಿಡ್‌ ಆ್ಯಂಟಿಜೆನ್‌ 236 ಹಾಗೂ ಟ್ರುನಾಟ್‌ ವಿಧಾನದಲ್ಲಿ ಆರು‍ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ 28 ಮಂದಿಗೆ, ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ 21 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ 25,128 ಗಂಟಲುದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, 24,215 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ಬುಧವಾರ ಸೋಂಕು ದೃಢಪಟ್ಟ 49 ಪ್ರಕರಣಗಳಲ್ಲಿ ಚಾಮರಾನಗರ ತಾಲ್ಲೂಕಿನಲ್ಲಿ 16, ಕೊಳ್ಳೇಗಾಲದಲ್ಲಿ 14, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂಬತ್ತು, ಹನೂರು ತಾಲ್ಲೂಕಿನಲ್ಲಿ ಆರು, ಯಳಂದೂರು ನಾಲ್ಕು ಪ್ರಕರಣಗಳು ವರದಿಯಾಗಿವೆ.

ಗುಣಮುಖರಾದ 21 ಮಂದಿಯ ಪೈಕಿ ಚಾಮರಾಜನಗರ ತಾಲ್ಲೂಕಿನ ಏಳು, ಕೊಳ್ಳೇಗಾಲ ತಾಲ್ಲೂಕಿನ ಆರು, ಗುಂಡ್ಲುಪೇಟೆ, ಯಳಂದೂರು ತಾಲ್ಲೂಕಿನ ಮೂವರು, ಹನೂರು ತಾಲ್ಲೂಕಿನ ಒಬ್ಬರು, ಹೊರ ಜಿಲ್ಲೆಯ ಒಬ್ಬರು ಇದ್ದಾರೆ.

ಸಕ್ರಿಯ 318 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 90, ಕೊಳ್ಳೇಗಾಲ ತಾಲ್ಲೂಕಿನ 86, ಗುಂಡ್ಲುಪೇಟೆ ತಾಲ್ಲೂಕಿನ 69, ಯಳಂದೂರು ತಾಲ್ಲೂಕಿನ 50 ಹಾಗೂ ಹನೂರು ತಾಲ್ಲೂಕಿನ 23 ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.