ADVERTISEMENT

ಸಚಿವರ ಭರವಸೆ ಹುಸಿ, ತಪ್ಪದ ಪಡಿತರ ಹೊರುವ ಕೆಲಸ

ಮಹದೇಶ್ವರ ಬೆಟ್ಟ: ಪಡಸಲನತ್ತ ಗ್ರಾಮಸ್ಥರಿಗೆ ತಪ್ಪದ ಗೋಳು, ನಾಲ್ಕೈದು ಕಿ.ಮೀ ನಡಿಗೆ ಕಾಯಂ

ಬಿ.ಬಸವರಾಜು
Published 18 ಫೆಬ್ರುವರಿ 2021, 19:30 IST
Last Updated 18 ಫೆಬ್ರುವರಿ 2021, 19:30 IST
ಕಾಲ್ನಡಿಗೆಯಲ್ಲಿ ಪಡಿತರ ಹೊತ್ತು ಸಾಗುತ್ತಿರುವ ಮಹಿಳೆಯರು ವೃದ್ಧರು
ಕಾಲ್ನಡಿಗೆಯಲ್ಲಿ ಪಡಿತರ ಹೊತ್ತು ಸಾಗುತ್ತಿರುವ ಮಹಿಳೆಯರು ವೃದ್ಧರು   

ಹನೂರು: ‘ಸರ್ಕಾರ ಕೊಡುವ ಉಚಿತ ಅಕ್ಕಿ ಪಡೆಯಲು ಕೂಲಿ ಕೆಲಸಬಿಟ್ಟು ಪ್ರತಿ ತಿಂಗಳು ನಾಲ್ಕೈದು ಕಿ.ಮೀ ನಡೆಯಬೇಕು. ಸಚಿವರು ಬಂದು ಇನ್ನು ಮುಂದೆ ಮನೆ ಮನೆಗಳಿಗೆ ಪಡಿತರ ಕೊಡುವುದಾಗಿ ಹೇಳಿದ್ದರು. ಆದರೆ, ನಾಲ್ಕು ತಿಂಗಳಾದರೂ ನಮಗೆ ಈ ಅಲೆದಾಟ ತಪ್ಪಿಲ್ಲ’ ಎಂದು ಪಡಸಲನತ್ತ ಗ್ರಾಮದ ಪಾರ್ವತಮ್ಮ ಅವರು ಅಸಹಾಯಕರಾಗಿ ನುಡಿದರು.

ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಪಡಸಲನತ್ತ ಗ್ರಾಮದ ಜನರು ಇಂದಿಗೂ ಪಡಿತರ ಪಡೆಯಲು ದಟ್ಟಾರಣ್ಯದೊಳಗೆ ಪ್ರತಿ ತಿಂಗಳು ನಾಲ್ಕೈದು ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಬೇಕು. ಇಲ್ಲಿನ ಇಂಡಿಗನತ್ತ, ತೇಕಾಣೆ, ಮೆದಗನಾಣೆ, ತುಳಸಿಕೆರೆ ಮುಂತಾದ ಗ್ರಾಮಗಳ ಜನರು ಮೊದಲು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರು. ಸದ್ಯ ಅದು ನಿವಾರಣೆಯಾಗಿದೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಂಡಿಗನತ್ತ ಹಾಗೂ ಪಡಸಲನತ್ತ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಜೊತೆ ಸಮಾಲೋಚನೆ ನಡೆಸಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಸಚಿವರು ಬಂದು ಹೋಗಿ ನಾಲ್ಕು ತಿಂಗಳಾದರೂ ನೀಡಿದ ಭರವಸೆಗಳು ಕೇವಲ ಭರವಸೆಯಾಗಿಯೇ ಉಳಿದಿವೆ ಎಂಬುದು ಇಲ್ಲಿನ ಗ್ರಾಮಗಳ ಜನರ ಆರೋಪ.

ADVERTISEMENT

ಸಂಚಾರಿ ನ್ಯಾಯಬೆಲೆ ಅಂಗಡಿ ಪಡಸಲನತ್ತ ಗ್ರಾಮಕ್ಕೆ ಬರುತ್ತಿಲ್ಲ.ಪಾಲಾರ್ ಮುಖ್ಯ ರಸ್ತೆಯಿಂದ ಹೊಸಾಣೆಅಡಿ ಎಂಬ ಸ್ಥಳದವರೆಗೆ ನ್ಯಾಯಬೆಲೆ ಅಂಗಡಿ ಬರುತ್ತದೆ. ಅಲ್ಲಿಂದ ಗ್ರಾಮಕ್ಕೆ ನಾಲ್ಕೈದು ಕಿ.ಮೀ ದೂರವಿದೆ. ಊರು ಬೆಟ್ಟದ ಮೇಲಿರುವುದರಿಂದ ಫಲಾನುಭವಿಗಳು ಕೆಳಗೆ ಇಳಿದು ಬಂದು ಪಡಿತರ ಪಡೆದುಕೊಂಡು ಮತ್ತೆ ಬೆಟ್ಟ ಏರಬೇಕು.

‘ಸಚಿವರು ಭರವಸೆ ನೀಡಿ ಹೋದರು ಅಷ್ಟೆ. ನಾವು ಮಾತ್ರ ಪಡಿತರ ಹೊತ್ತು ಬರುವುದು ತಪ್ಪಲಿಲ್ಲ. ಗಂಡಸರು ಹೇಗೋ ಹೊತ್ತು ತರುತ್ತೇವೆ. ಆದರೆ, ಮಹಿಳೆಯರು ಮತ್ತು ವೃದ್ಧರ ಪಾಡೇನು’ ಎಂದು ಗ್ರಾಮದ ಲಿಂಗರಾಜು ಅವರು ಪ್ರಶ್ನಿಸಿದರು.

‘ಪಡಿತರ ತರುವುದಕ್ಕೆ ಹೊರಟರೆ ಅರ್ಧ ದಿನ ಬೇಕು. ಇದಕ್ಕಾಗಿ ಆ ದಿನ ಕೂಲಿ ಕೆಲಸಕ್ಕೆ ರಜೆ ಹಾಕಬೇಕಾಗುತ್ತದೆ. ಪಡಿತರಕ್ಕಾಗಿ ಒಂದು ದಿನದ ಸಂಪಾದನೆ ಹೋಗುತ್ತದೆ. ಬೇಸಿಗೆ ಕಾಲದಲ್ಲಿ ಗಂಡಸರಿಗೆ ನಡೆಯುವುದಕ್ಕೇ ಕಷ್ಟವಾಗುತ್ತದೆ. ಮಹಿಳೆಯರ ಪರಿಸ್ಥಿತಿ ಹೇಗಿರಬಹುದು? ನಾಲ್ಕೈದು ಕಿ.ಮೀ ಬೆಟ್ಟ ಗುಡ್ಡ ಹತ್ತಿ ಬರುವಷ್ಟರೊಳಗೆ ಸಾಕಾಗಿ ಹೋಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

‘ದಶಕಗಳಿಂದಲೂ ನಾವು ಇದೇ ರೀತಿ ಬದುಕುತ್ತಿದ್ದೇವೆ. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ. ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಗೂ ಸಂಚಾರ ನ್ಯಾಯಬೆಲೆ ಅಂಗಡಿ ಹೋಗುತ್ತದೆ. ಆದರೆ ನಮ್ಮ ಗ್ರಾಮಕ್ಕೆ ಮಾತ್ರ ಬರುವುದಿಲ್ಲ. ಕೇಳಿದರೆ ರಸ್ತೆ ಸರಿಯಿಲ್ಲ ಎಂದು ಹೇಳುತ್ತಾರೆ. ನಾವು ಇನ್ನೂ ಎಷ್ಟು ದಿನ ಹೀಗೆ ಬದುಕಬೇಕು ಎಂಬುದೇ ಚಿಂತೆಯಾಗಿದೆ’ ಎಂದು ಗ್ರಾಮದ ನಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ಇಲ್ಲ, ವಾಹನ ಹೋಗುವುದಿಲ್ಲ‘

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಚಂದ್ರನಾಯ್ಕ್ ಅವರು, ‘ಸಂಚಾರಿ ನ್ಯಾಯಬೆಲೆ ಅಂಗಡಿಯು ಪಡಸಲನತ್ತ ಗ್ರಾಮಕ್ಕೆ ತೆರಳಲು ಸಮರ್ಪಕ ರಸ್ತೆಯಿಲ್ಲ. ರಸ್ತೆ ಚೆನ್ನಾಗಿದ್ದಾರೆ ತೆಗೆದುಕೊಂಡು ಹೋಗಿ ಗ್ರಾಮದಲ್ಲೇ ವಿತರಣೆ ಮಾಡುವುದಕ್ಕೆ ಯಾವುದೇ ತೊಂದರೆ ಇಲ್ಲ. ವಾಹನ ಹೋಗುವ ಕಡೆಗಳಿಗೆಲ್ಲ ಗ್ರಾಮಕ್ಕೆ ಹೋಗಿ ವಿತರಣೆ ಮಾಡುತ್ತಿದ್ದೇವೆ. ರಸ್ತೆ ಸರಿಯಾದ ತಕ್ಷಣ ಅಲ್ಲಿಗೇ ತೆರಳಿ ವಿತರಣೆ ಮಾಡುತ್ತೇವೆ’ ಎಂದು ಹೇಳಿದರು.

ಅನುದಾನ ಕೊರತೆ?

‘ಸಂಚಾರಿ ನ್ಯಾಯಬೆಲೆ ಅಂಗಡಿ ಹೋಗದ ಕಡೆಗಳಿಗೆ ಜೀಪ್‌ ಮೂಲಕ ವಿತರಣೆ ಮಾಡಬಹುದು. ಆದರೆ, ಜೀಪಿಗೆ ಬಾಡಿಗೆ ಕೊಡಲು ತಮ್ಮ ಬಳಿ ಅನುದಾನ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂಬುದು ಗ್ರಾಮಸ್ಥರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.