ADVERTISEMENT

ಪಾದಯಾತ್ರೆ: ಭಕ್ತರಿಗೆ ರಸ್ತೆ ಸುರಕ್ಷತೆ ಆತಂಕ

ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ; ಪಾದಯಾತ್ರಿಗಳಿಗಿಲ್ಲ ಸೌಲಭ್ಯ

ಅವಿನ್ ಪ್ರಕಾಶ್
Published 25 ಫೆಬ್ರುವರಿ 2025, 6:33 IST
Last Updated 25 ಫೆಬ್ರುವರಿ 2025, 6:33 IST
ಕಾಲ್ನಡಿಗೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿರುವ ಭಕ್ತರು 
ಕಾಲ್ನಡಿಗೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿರುವ ಭಕ್ತರು    

ಕೊಳ್ಳೇಗಾಲ: ಮಲೆಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಆರಂಭವಾಗುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಪಾದಯಾತ್ರೆ ಮೂಲಕ ಬರುತ್ತಿರುವ ಭಕ್ತರು ಜೀವ ಕೈಲಿ ಹಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ರಾತ್ರಿ ವೇಳೆ ಕಾಡಿನ ಮೂಲಕ ಪಾದಯಾತ್ರೆ ಮಾಡಬಾರದು’ ಎಂಬ ಅರಣ್ಯ ಇಲಾಖೆಯ ಸೂಚನೆಯನ್ನು ಭಕ್ತರು ಉಲ್ಲಂಘಿಸುತ್ತಿರುವುದು ಸಮಸ್ಯೆಗಳಿಗೆ ದಾರಿ ಮಾಡಿದೆ.

ಭಕ್ತರು ಪಾದಯಾತ್ರೆಯಲ್ಲಿ ಸಾಗುವ ಮಾರ್ಗಗಳಲ್ಲಿ, ಹಳ್ಳಕೊಳ್ಳಗಳು ಸೇರಿದಂತೆ ಅಪಾಯಕಾರಿ ತಿರುವುಗಳಲ್ಲಿ ಸೂಚನಾ ಹಾಗೂ ಎಚ್ಚರಿಕೆಯ ಫಲಕಗಳು ಇಲ್ಲದಿರುವುದು ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ. ಸ್ಥಳೀಯ ವಾಹನ ಸವಾರರಿಗೂ ಇದು ತೊಂದರೆ ಉಂಟುಮಾಡುತ್ತಿದೆ.

ADVERTISEMENT

‘ಮಾದಪ್ಪನ ಸನ್ನಿಧಿಗೆ ಹರಕೆ ತೀರಿಸಲು ಹಗಲು ರಾತ್ರಿ ಎನ್ನದೆ ಲಕ್ಷಾಂತರ ಭಕ್ತರು ಪಾದಯಾತ್ರೆಯಲ್ಲಿ ಸಾಗುತ್ತಿದ್ದು ಭಕ್ತರ ಸುರಕ್ಷತೆಗೆ ಒತ್ತು ನೀಡಬೇಕು. ಪಾದಯಾತ್ರೆಯಲ್ಲಿ ಸಾಗುವ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಸಬೇಕು’ ಎಂದು ಪಾದಯಾತ್ರಿಗಳು ಆಗ್ರಹಿಸುತ್ತಾರೆ.

ಮಹದೇಶ್ವರ ಬೆಟ್ಟದಲ್ಲಿ ನಡೆಯುವ ವರ್ಷದ ಮೊದಲ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಬಸ್, ಕಾರು, ಬೈಕ್, ಎತ್ತಿನ ಗಾಡಿ ಸಹಿತ ಹಲವು ವಾಹನಗಳ ಮೂಲಕ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ವಾಹನಗಳಲ್ಲಿ ಬರುವ ಭಕ್ತರಿಗಿಂತ ಹೆಚ್ಚಾಗಿ ಕಾಲ್ನಡಿಗೆಯಲ್ಲೂ ನೂರಾರು ಕಿಲೋಮೀಟರ್ ದೂರದಿಂದ ಬರುವ ಭಕ್ತರು ಹರಕೆ ಸಲ್ಲಿಸುತ್ತಾರೆ.

‘ಬೆಂಗಳೂರು, ತುಮಕೂರು, ಕೋಲಾರ, ರಾಮನಗರ, ಕನಕಪುರ, ಚನ್ನಪಟ್ಟಣ, ಮಂಡ್ಯ, ಮೈಸೂರು, ಹಾಸನ, ಕೆ.ಆರ್.ನಗರ, ಅರಸೀಕೆರೆ, ಹೊಳೆನರಸೀಪುರ, ಪಿರಿಯಾಪಟ್ಣಣ, ಮಡಿಕೇರಿ, ಕುಶಾಲನಗರ ಮುಂತಾದ ಜಿಲ್ಲೆಗಳಿಂದ ವಿವಿಧ ವಯೋಮಾನದ ಪಾದಯಾತ್ರಿಗಳು ಬೆಟ್ಟಕ್ಕೆ ಬರುತ್ತಾರೆ. ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದ್ದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಮೂಲಸೌಕರ್ಯಗಳನ್ನು ಒದಗಿಸಿಲ್ಲ, ರಸ್ತೆ ಸುರಕ್ಷತಾ ಕ್ರಮಗಳು ಪಾಲನೆಯಾಗಿಲ್ಲ ಎಂದು ಭಕ್ತರು ಅಸಮಾಧಾನ ಹೊರಹಾಕುತ್ತಿದ್ದಾರೆ.

‘ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ತಾಳುಬೆಟ್ಟದವರೆಗೂ ರಸ್ತೆಯಲ್ಲಿ ಕುಡಿಯುವ ನೀರು, ಕುಳಿತುಕೊಳ್ಳಲು ಆಶ್ರಯ ಸೇರಿದಂತೆ ಯಾವುದೇ ಮೂಲಸೌಕರ್ಯಗಳನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಮಲೆ ಮಹದೇಶ್ವರ ಪ್ರಾಧಿಕಾರ ಕಲ್ಪಿಸಿಲ್ಲ. ಇದರಿಂದ ಭಕ್ತರಿಗೆ ತುಂಬಾ ಕಷ್ಟವಾಗುತ್ತಿದೆ’ ಎಂದು ಕನಕಪುರದ ನಿವಾಸಿ ಕನಕರಾಜು ಬೇಸರ ವ್ಯಕ್ತಪಡಿಸುತ್ತಾರೆ.

‘ಹನೂರು, ರಾಮಾಪುರ, ಕೊಳ್ಳೇಗಾಲ, ಕೌದಳ್ಳಿಯ ಸೂಕ್ತ ಸ್ಥಳದಲ್ಲಿ ನೀರಿನ ವ್ಯವಸ್ಥೆ ಹಾಗೂ ವಿಶ್ರಾಂತಿ ವ್ಯವಸ್ಥೆ ಮಾಡಬೇಕು’ ಎಂಬುದು ಭಕ್ತರ ಒತ್ತಾಯ.

ಕಾಲ್ನಡಿಗೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿರುವ ಭಕ್ತರು 

ಹನೂರು, ರಾಮಾಪುರ, ಕೊಳ್ಳೇಗಾಲ, ಕೌದಳ್ಳಿಯಲ್ಲಿ ವ್ಯವಸ್ಥೆ ಕಲ್ಪಿಸಿ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಸಂಖ್ಯೆ ಪ್ರತಿವರ್ಷ ಹೆಚ್ಚಳ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹ

ಕೆ.ಆರ್.ನಗರದಿಂದ ಪ್ರತಿ ವರ್ಷ ಕುಟುಂಬ ಸಮೇತರಾಗಿ ಕಾಲ್ನಡಿಗೆಯಲ್ಲಿ ಬಂದು ಹರಕೆ ತೀರಿಸಿ ಹೋಗುತ್ತೇವೆ. ನಮ್ಮ ಜೊತೆ ಮಹಿಳಾ ಸಂಘದವರೂ ಬರುತ್ತಾರೆ. ಸಾಧ್ಯವಾದ ಸ್ಥಳದಲ್ಲಿ ಕನಿಷ್ಠ ಸೌಕರ್ಯವಾದರೂ ಕಲ್ಪಿಸಿ
ಕರಿಗೌಡ ಕೆ.ಆರ್.ನಗರ
ರಸ್ತೆಯಲ್ಲಿ ಬರುವವರಿಗೆ ರಸ್ತೆ ಸುರಕ್ಷತೆ ಸೇರಿದಂತೆ ಅರಿವು ಮೂಡಿಸುವಲ್ಲಿ ಪೊಲೀಸ್ ಇಲಾಖೆ ನಿರತವಾಗಿದೆ. ರಾತ್ರಿ ಕಾಲ್ನಡಿಗೆಯಲ್ಲಿ ಬರುವುದು ಬೇಡ ಎಂಬುದು ನಮ್ಮ ಮನವಿ
ಧರ್ಮೇಂದ್ರ ಡಿವೈಎಸ್‌ಪಿ

‘ರಾತ್ರಿ ಪಾದಯಾತ್ರೆ ಬೇಡ’ ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟದವರೆಗೆ ಪ್ರಾಣಿಗಳ ಕಾಟ ಹೆಚ್ಚಾಗಿದೆ. ಅದರಲ್ಲೂ ಹನೂರು ಭಾಗದ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಒಳಗೆ ಬೆಟ್ಟವಿರುವುದರಿಂದ ಭಕ್ತರು ಕಾಡಿನ ಒಳಗೇ ಸಂಚರಿಸಬೇಕಾಗುತ್ತದೆ. ಹನೂರು– ಅಜೀಪುರ ರಸ್ತೆ ರಾಮಪುರ ರಸ್ತೆ ತಾಳ ಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ 20 ಕಿಲೋ ಮೀಟರ್ ಅರಣ್ಯದೊಳಗೆ ಸಂಚರಿಸಬೇಕು. ‘ರಾತ್ರಿ ಕಾಲ್ನಡಿಗೆಯಲ್ಲಿ ಬರಬಾರದು’ ಎಂದು ಅರಣ್ಯ ಇಲಾಖೆ ಹಾಗೂ ಮಲೈ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ಭಕ್ತರು ರಾತ್ರಿವೇಳೆಯಲ್ಲೇ ಹೆಚ್ಚಾಗಿ ಪಾದಯಾತ್ರೆಗಳನ್ನು ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನಾಹುತಗಳಾಗಬಹುದು’ ಎಂದು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಮುನ್ನೆಚ್ಚರಿಕೆ ಫಲಕವೇ ಇಲ್ಲ! ಪಾದಯಾತ್ರೆ ಮಾರ್ಗದಲ್ಲಿ ಹಳ್ಳಕೊಳ್ಳಗಳ ಜೊತೆಗೆ ಅನೇಕ ಕಡೆ ಅಪಾಯಕಾರಿ ತಿರುವುಗಳೂ ಇವೆ. ಶನಿವಾರ ರಾತ್ರಿ ಹರಕೆ ತೀರಿಸಲು ಕಾಲ್ನಡಿಗೆ ಮೂಲಕ ಹೋಗುತ್ತಿದ್ದ ಮೈಸೂರಿನ ರಮ್ಮನಹಳ್ಳಿಯ ನಿವಾಸಿ ಸ್ವಾಮಿ ಅವರು ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲಿ ಮೃತಪಟ್ಟು ಬೈಕ್‌ ಸವಾರರು ಸೇರಿ ನಾಲ್ವರಿಗೆ ಗಾಯವಾಗಿದೆ. ಕಳೆದ ವರ್ಷವೂ ಅದೇ ಸ್ಥಳದಲ್ಲಿ ಲಾರಿ ಡಿಕ್ಕಿ ಹೊಡೆದು ನಂಜನಗೂಡಿನ ಇಬ್ಬರು ಪಾದಯಾತ್ರಿ ಭಕ್ತರು ಮೃತಪಟ್ಟಿದ್ದರು. ಅಷ್ಟಾಗಿಯೂ ಸ್ಥಳದಲ್ಲಿ ಸ್ಥಳೀಯ ಆಡಳಿತವಾಗಲೀಪೊಲೀಸ್‌ ಇಲಾಖೆಯಾಗಲೀ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಆ ಸ್ಥಳದಲ್ಲಿ ವಿದ್ಯುತ್ ದೀಪವೂ ಇಲ್ಲ. ‘ಅನಾಹುತಗಳು ಹೆಚ್ಚಾಗುತ್ತಿದ್ದರೂ ರಸ್ತೆ ಪ್ರಾಧಿಕಾರ ಕ್ರಮ ಕೈಗೊಂಡಿಲ್ಲ. ಶಿವರಾತ್ರಿ ಪಾದಯಾತ್ರೆಯ ಐದು ದಿನವೂ ಪ್ರತಿ ಹಳ್ಳಿಯಲ್ಲೀ ಇರಬೇಕಿದ್ದ ಪೊಲೀಸರು ಸಿಬ್ಬಂದಿ ಕೊರತೆಯಿಂದಾಗಿ ಸರಿಯಾಗಿ ಕೆಲಸಗಳನ್ನು ಮಾಡುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಪೊಲೀಸ್ ಇಲಾಖೆ ಹಾಗೂ ರಸ್ತೆ ಪ್ರಾಧಿಕಾರದವರು ಇದರ ಬಗ್ಗೆ ಕೂಡಲೇ ಗಮನ ಹರಿಸಬೇಕು’ ಎಂದು ಲೇಖಕ ಮಹದೇವ ಶಂಕನಪುರ ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.