ADVERTISEMENT

ಖರೀದಿ ಕೇಂದ್ರಗಳತ್ತ ಸುಳಿಯದ ಭತ್ತ ಬೆಳೆಗಾರರು

ಬೆಂಬಲ ಬೆಲೆ ಯೋಜನೆಯಡಿ ನಿಗದಿಪಡಿಸಿರುವ ದರ ತೀರಾ ಕಡಿಮೆ; ಮಧ್ಯವರ್ತಿಗಳ ಮೂಲಕ ಹೊರ ರಾಜ್ಯಗಳಿಗೆ ಜಿಲ್ಲೆಯ ಭತ್ತ ರವಾನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:49 IST
Last Updated 21 ಡಿಸೆಂಬರ್ 2025, 4:49 IST
ಭತ್ತದ ಒಕ್ಕಣೆ ಸಂಗ್ರಹ ಚಿತ್ರ
ಭತ್ತದ ಒಕ್ಕಣೆ ಸಂಗ್ರಹ ಚಿತ್ರ   

ಚಾಮರಾಜನಗರ/ಸಂತೇಮರಹಳ್ಳಿ: ಭತ್ತಕ್ಕೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನಿಗದಿಪಡಿಸಿರುವ ದರಕ್ಕಿಂತ ಮಾರುಕಟ್ಟೆ ದರವೇ ಹೆಚ್ಚಾಗಿರುವುದರಿಂದ ಜಿಲ್ಲೆಯ ರೈತರು ಖರೀದಿ ಕೇಂದ್ರಗಳತ್ತ ಸುಳಿಯುತ್ತಿಲ್ಲ.

ಜಿಲ್ಲೆಯಲ್ಲಿ ಚಾಮರಾಜನಗರ, ಹನೂರು, ಸಂತೇಮರಹಳ್ಳಿ ಹಾಗೂ ಕೊಳ್ಳೇಗಾಲ ಎಪಿಎಂಸಿ ಆವರಣಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ಇದುವರೆಗೂ ಮೂವರು ರೈತರು ಮಾತ್ರ ಭತ್ತ ಮಾರಾಟ ಮಾಡಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮೂವರು ಬೆಳೆಗಾರರು ಹೊರತುಪಡಿಸಿದರೆ ಚಾಮರಾಜನಗರ, ಹನೂರು ಹಾಗೂ ಯಳಂದೂರು–ಸಂತೇಮರಹಳ್ಳಿ ಭಾಗಗಳಿಂದ ಯಾರೊಬ್ಬರೂ ನೋಂದಾಯಿಸಿಕೊಂಡಿಲ್ಲ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ವಸುಂಧರಾ.

ADVERTISEMENT

ಬೆಂಬಲ ಬೆಲೆ ಕಡಿಮೆ:

ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿ ಮಾಡುವ ಭತ್ತಕ್ಕೆ ತೀರಾ ಕಡಿಮೆ ದರ ನಿಗದಿಪಡಿಸಿರುವುದರಿಂದ ರೈತರು ಖರೀದಿ ಕೇಂದ್ರಗಳಿಗೆ ಭತ್ತ ಮಾರಾಟ ಮಾಡಲು ಉತ್ಸಾಹ ತೋರುತ್ತಿಲ್ಲ. ಕೇಂದ್ರ ಸರ್ಕಾರ ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ ₹ 2,369, ‘ಎ’ ದರ್ಜೆಯ ಭತ್ತಕ್ಕೆ ₹ 2,389 ದರ ನಿಗದಿಪಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಕ್ವಿಂಟಲ್ ಭತ್ತಕ್ಕೆ ₹ 2,700 ರಿಂದ ₹ 2,900ರವರೆಗೂ ದರ ಇದೆ. ಹೀಗಿರುವಾಗ ರೈತರು ಖರೀದಿ ಕೇಂದ್ರಗಳಿಗೆ ಭತ್ತ ಮಾರಾಟ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ರೈತರು.

ಜಿಲ್ಲೆಯಲ್ಲಿ ನೀರಾವರಿ ಆಶ್ರಿತ ಕೃಷಿ ಭೂಮಿ ಇರುವ ಸಂತೇಮರಹಳ್ಳಿ ಹೋಬಳಿ, ಯಳಂದೂರು, ಕೊಳ್ಳೇಗಾಲ ಹಾಗೂ ಚಾಮರಾಜನಗರದ ಭಾಗಶಃ ಪ್ರದೇಶಗಳಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತದೆ. ಕಬಿನಿ ಹಾಗೂ ಕಾವೇರಿ ಅಚ್ಚುಕಟ್ಟು ಭಾಗಗಳಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗಿದ್ದು ಕಟಾವು ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಆದರೆ, ಬೆಂಬಲ ಬೆಲೆ ಯೋಜನೆಯ ದರ ತೀರಾ ಕಡಿಮೆ ಇರುವುದರಿಂದ ಜಿಲ್ಲೆಯ ಭತ್ತ ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳ ಪಾಲಾಗುತ್ತಿದೆ.

ಜಿಲ್ಲೆಯಲ್ಲಿ ಬೆಳೆಯಲಾದ‌ ಬಹುಪಾಲು ಭತ್ತ ಹೊರ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಭತ್ತ ಕಟಾವು ಸ್ಥಳಕ್ಕೆ ವ್ಯಾಪಾರಿಗಳು ಲಗ್ಗೆ ಇಡುತ್ತಿದ್ದು ರೈತರಿಂದ ನೇರವಾಗಿ ಭತ್ತ ಖರೀದಿಸುತ್ತಿದ್ದಾರೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ 2,700, ಜ್ಯೋತಿ ಭತ್ತ ₹ 2,800ರವರೆಗೆ ಖರೀದಿ ನಡೆಯುತ್ತಿದೆ.

ಗಿರಣಿ ಮಾಲೀಕರು ಕೂಡ ಖರೀದಿಯಲ್ಲಿ ತೊಡಗಿಸಿಕೊಂಡಿದ್ದು ಮೈಸೂರು, ಮಂಡ್ಯ ಹಾಗೂ ತಿ.ನರಸೀಪುರದಲ್ಲಿರುವ ಅಕ್ಕಿ ಗಿರಣಿಗಳನ್ನು ಸೇರುತ್ತದೆ. ಬಳಿಕ ದಲ್ಲಾಳಿಗಳ ಮೂಲಕ ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಭತ್ತ ಸಾಗಣೆಯಾಗುತ್ತಿದೆ ಎನ್ನುತ್ತಾರೆ ರೈತರು.

ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡಲು ಹಲವು ಷರತ್ತುಗಳನ್ನು ಹೇರಲಾಗಿದೆ. ಭತ್ತವನ್ನು ಚೆನ್ನಾಗಿ ಒಣಗಿಸಿರಬೇಕು, ಫ್ರೂಟ್‌ ಐಡಿ ಇರಬೇಕು, ಆಧಾರ್ ಕಾರ್ಡ್, ರೈತರ ನೋಂದಣಿ ಸಂಖ್ಯೆ ಹಾಗೂ ಬ್ಯಾಂಕ್ ಪಾಸ್ ಪುಸ್ತಕಗಳ ಜೆರಾಕ್ಸ್  ಪ್ರತಿನೀಡಬೇಕು. ಎಲ್ಲ ದಾಖಲೆಗಳನ್ನು ಕೊಟ್ಟು ಭತ್ತ ಪೂರೈಕೆ ಮಾಡಿ ಹಲವು ದಿನಗಳ ಬಳಿಕ ರೈತರ ಖಾತೆಗೆ ಹಣ ಸಂದಾಯವಾಗುತ್ತದೆ. ಮಾರುಕಟ್ಟೆಗಿಂತಲೂ ದರ ಕಡಿಮೆ ಇರುವುದರಿಂದ ಸಹಜವಾಗಿ ಯಾರೂ ಮಾರಾಟ ಮಾಡಲು ಮುಂದಾಗುವುದಿಲ್ಲ ಎನ್ನುತ್ತಾರೆ ರೈತರಾದ ಮುನಿಯಪ್ಪ.

ಸರ್ಕಾರ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರ ನಿಗದಪಡಿಸಿದರೆ ಹಾಗೂ ನಿಯಮಗಳನ್ನು ಸಡಿಲಗೊಳಿಸಿದರೆ ರೈತರು ಭತ್ತ ಮಾರಾಟ ಮಾಡಲು ಮುಂದೆ ಬರುತ್ತಾರೆ ಎಂದು ರೈತರಾದ ಮಹದೇವಸ್ವಾಮಿ ಹಾಗೂ ಬಾಣಹಳ್ಳಿಯ ರೈತ ಶಿವಶಂಕರ್ ಹೇಳುತ್ತಾರೆ.

ಸಂತೇಮರಹಳ್ಳಿಯ ಕೃಷಿ ಉಪ ಉತ್ಪನ್ನ ಮಾರುಕಟ್ಟೆಯಲ್ಲಿ ಭತ್ತ ಹಾಗೂ ರಾಗಿ ಖರೀದಿ ಕೇಂದ್ರ ತೆರೆಯಲಾಗಿದ್ದು ರೈತರಿಗೆ ಅರಿವು ಮೂಡಿಸಿದ್ದರೂ ಭತ್ತ ಮಾರಾಟ ಮಾಡಲು ಯಾವ ರೈತರು ಹೆಸರು ನೋಂದಾಯಿಸಿಕೊಂಡಿಲ್ಲ ಎಂದು ಭತ್ತ ಖರೀದಿ ಕೇಂದ್ರದ ವ್ಯವಸ್ಥಾಪಕ ಶರವಣ್ ಪ್ರಜಾವಾಣಿಗೆ ತಿಳಿಸಿದರು.

‘ಕಳೆದ 3 ವರ್ಷಗಳಿಂದ ಭತ್ತ ಖರೀದಿ ಇಲ್ಲ’ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಹಾಗೂ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಡಿಸೆಂಬರ್ ಅಂತ್ಯದವರೆಗೂ ನೋಂದಣಿ ನಡೆಯಲಿದ್ದು ಜನವರಿಯಿಂದ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಆದರೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಯಾವ ರೈತರೂ ಖರೀದಿ ಕೇಂದ್ರಗಳಿಗೆ ಭತ್ತ ಮಾರಾಟ ಮಾಡಿಲ್ಲ. ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಮಾರುಕಟ್ಟೆ ದರ ಹೆಚ್ಚಿರುವುದು ಹಾಗೂ ಜಿಲ್ಲೆಯಲ್ಲಿ ಜಯ ತಳಿ ಸಹಿತ ಸಣ್ಣ ಭತ್ತದ ತಳಿಗಳನ್ನು ಹೆಚ್ಚಾಗಿ ಬೆಳೆದಿರುವುದರಿಂದ ರೈತರು ಭತ್ತ ಮಾರಾಟ ಮಾಡಲು ಉತ್ಸಾಹ ತೋರಿಲ್ಲ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ವಸುಂಧರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.