ಯಳಂದೂರು: ಅಗರ ಮಾಂಬಳ್ಳಿ ಅಚ್ಚುಕಟ್ಟು ಪ್ರದೇಶದಲ್ಲಿ ನಾಟಿ ಮಾಡಿದ್ದ ಕಾರು (ಬೇಸಿಗೆ) ಭತ್ತ ಕೊಯ್ಲಿಗೆ ಬಂದಿದೆ. ಇದೇ ಸಮಯದಲ್ಲಿ ತುಂತುರು ಮಳೆ, ಗಾಳಿ, ಮೋಡದ ವಾತಾವರಣವೂ ಆತಂಕ ತಂದಿತ್ತಿದೆ. ತರಾತುರಿಯಲ್ಲಿ ಸಿದ್ಧತೆ ನಡೆಸಿರುವ ಬೇಸಾಯಗಾರರು ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದಾರೆ.
ತಾಲ್ಲೂಕಿನ ನೀರಾವರಿ ಪ್ರದೇಶ ವ್ಯಾಪ್ತಿಯಲ್ಲಿ 150 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಭತ್ತ ನಾಟಿಯಾಗಿದೆ. ಬಿತ್ತನೆ ಸಮಯದಲ್ಲಿ ಬಿಸಿಲಿನ ತೀವ್ರತೆ ಕಡಿಮೆ ಇದ್ದ ಪರಿಣಾಮ ಬೆಳೆ ಸಮೃದ್ಧವಾಗಿ ಬೆಳೆದಿದೆ. ಇದರಿಂದ ಎಕರೆವಾರು ಉತ್ಪಾದನೆ ಹೆಚ್ಚಾಗಿದ್ದು, ಭತ್ತ ನಂಬಿದವರ ಕೈ ಹಿಡಿದಿದೆ. ಗುಣಮಟ್ಟದ ಭತ್ತಕ್ಕೆ ಬೆಲೆ ಮತ್ತು ಬೇಡಿಕೆಯೂ ಹೆಚ್ಚಿದ್ದು, ಭತ್ತದ ಸುಗ್ಗಿ ಎಗ್ಗಿಲ್ಲದೆ ನಡೆದಿದೆ.
‘ಕಳೆದ 2 ವರ್ಷಗಳಿಂದ ಬರದ ಬೇಗೆ ಕಾಡಿತ್ತು. ಹಿಡುವಳಿದಾರರು ಮತ್ತು ಜಾನುವಾರು ಸಾಕಣೆದಾರರು ಆಹಾರ ಮತ್ತು ಮೇವು ಸಂಗ್ರಹಿಸಲು ಪರದಾಡಿದ್ದರು. ನಾಲೆ ನೀರಿನ ಹರಿವಿನ ಪ್ರಮಾಣವೂ ಕುಸಿದಿತ್ತು. ಕೆರೆ, ಕಟ್ಟೆಯಲ್ಲಿ ಜಲ ಮೂಲಗಳು ಬತ್ತಿತ್ತು. ಆದರೆ, ಕೊಳವೆಬಾವಿ ನಂಬಿಕೊಂಡು ನಾಟಿ ಮಾಡಿ ಬಿತ್ತನೆ ಮಾಡಿದ್ದವರು ಸಮೃದ್ಧ ಫಸಲು ಪಡೆದಿದ್ದಾರೆ ಎಂದು ರೈತ ಅಗರ ರಾಜಣ್ಣ ಹೇಳಿದರು.
ಸಣ್ಣ ಹಿಡುವಳಿದಾರರು ಜಾನುವಾರು ಹೊಂದಿದ್ದಾರೆ. ಇವರು ಕಳೆದ ಬಾರಿ ಮೇವು ಸಿಗದೆ ಪರದಾಡಿದ್ದರು. ಹಣ ಕೊಟ್ಟು ಖರೀದಿಸಬೇಕಾದ ಸ್ಥಿತಿಗೆ ತಲುಪಿದ್ದರು. ಹಾಗಾಗಿ, ಅಂಚಿನ ಕೃಷಿಕರು ಬೀಳು ಬಿದ್ದ ಭೂಮಿಗೆ ಭತ್ತ ಬಿತ್ತನೆ ಮಾಡಿ ಹುಲ್ಲು ಮತ್ತು ಮನೆ ವಾರ್ತೆಗೆ ಧಾನ್ಯ ಸಂಗ್ರಹಿಸಲು ಮುಂದಾಗಿದ್ದರು. ಆದರೆ, ಉತ್ತಮ ಹವಾಮಾನ ಮತ್ತು ಕಟ್ಟು ನೀರಾವರಿ ರಾಸುಗಳಿಗೆ ಬೇಕಿದ್ದ ಮೇವಿನ ಕೊರತೆಯನ್ನು ನೀಗಿದೆ ಎನ್ನುತ್ತಾರೆ ಮಾಂಬಳ್ಳಿ ಶಿವಣ್ಣ.
ಉತ್ತಮ ಧಾರಣೆ
ಕೊಯ್ಲಾದ ಫಸಲು ಜಮೀನಿನಲ್ಲಿ ಮಾರಾಟವಾಗುತ್ತಿದೆ. ವ್ಯಾಪಾರಿಗಳು ಉತ್ತಮ ಬೆಲೆಗೆ ಕೊಳ್ಳುತ್ತಿದ್ದಾರೆ. ದರ ಕ್ವಿಂಟಲ್‌ಗೆ ₹2800-₹3000ದವರೆಗೆ ಏರಿಕೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಭತ್ತದ ದರ ಕುಸಿದಿತ್ತು. ಭತ್ತದ ಆವಕ ಕಡಿಮೆಯಾಗಿದ್ದು, ಸಹಜವಾಗಿ ಧಾರಣೆಯಲ್ಲಿ ಹೆಚ್ಚಳವಾಗಿದೆ. ಮನೆಗೆ ಸಾಗಣೆ ಮಾಡುವ ಖರ್ಚು ವೆಚ್ಚವೂ ತಗ್ಗುವುದರಿಂದ ಬೆಳೆಗಾರರು ಕೊಯ್ಲಾದ ಸ್ಥಳದಲ್ಲಿಯೇ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ವ್ಯಾಪಾರಿ ಸುಬ್ಬಪ್ಪ ಹೇಳಿದರು.
ಆಂಧ್ರದ ಬಿತ್ತನೆ ಭತ್ತ ನಾಟಿ
ಮಾರ್ಚ್-ಏಪ್ರಿಲ್‌ನಲ್ಲಿ ಭತ್ತದ ನಾಟಿ ಮಾಡಲಾಗಿತ್ತು. ಈ ಸಲ ಫಸಲು ನಿರೀಕ್ಷೆಗಿಂತ ಹೆಚ್ಚಿದೆ. ಬೆಳೆಗೆ ಅನುಕೂಲವಾದ ಮೋಡ ಮಸುಕಿದ ವಾತಾವರಣ ಮತ್ತು ರೈತರು ಕಡಿಮೆ ನೀರಿನಲ್ಲಿ ಬೆಳೆಯುವ ತಳಿಗಳನ್ನು ಬಿತ್ತನೆ ಮಾಡಿದ್ದರು. ಸ್ಥಳೀಯ ಭತ್ತದ ಬೀಜಗಳಿಗೆ ಬದಲಾಗಿ ಆಂಧ್ರ, ತೆಲಂಗಾಣ ಸೀಮೆಯ ಸಣ್ಣ ಭತ್ತವನ್ನು ನಾಟಿ ಮಾಡಿದ್ದರು. ಎಕರೆಗೆ 25 ಕ್ವಿಂಟಲ್ ತನಕ ಇಳುವರಿ ಸಿಕ್ಕಿದೆ. ಸಣ್ಣ ಭತ್ತಕ್ಕೆ ಬೇಡಿಕೆ ಮತ್ತು ಬೆಲೆ ಸ್ಥಿರವಾಗಿ ಇರುವುದರಿಂದ ಖರೀದಿದಾರರು ಹೆಚ್ಚಾಗಿದ್ದಾರೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಜು.10 ರಿಂದ ನಾಲೆಗಳಿಗೆ ನೀರು
ಈ ಬಾರಿ ಕೇರಳದ ವೈನಾಡು ಸುತ್ತಮುತ್ತ ಉತ್ತಮ ಮಳೆಯಾಗಿದ್ದು ಕಬಿನಿ ಡ್ಯಾಂ ತುಂಬುತ್ತಿದೆ. ಹಾಗಾಗಿ ನೀರಾವರಿ ಇಲಾಖೆ ಜುಲೈ 10 ರಿಂದ 25ರ ತನಕ 15 ದಿನಗಳ ಕಾಲ ಕೆರೆಕಟ್ಟೆ ತುಂಬಿಸಲು ಮತ್ತು ಜಾನುವಾರುಗಳ ಬಳಕೆಗೆ ನೀರು ಹರಿಸಲಿದೆ. ನಂತರದ ದಿನಗಳಲ್ಲಿ ನಡೆಯುವ ಮೈಸೂರು-ಚಾಮರಾಜನಗರ ಜಿಲ್ಲೆಗಳ ಅಧಿಕಾರಿಗಳ ಸಭೆಯಲ್ಲಿ ಕೃಷಿಗೆ ನೀರು ಪೂರೈಸುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.