ADVERTISEMENT

ಚಿಣ್ಣರ ಕುಂಚದಲ್ಲಿ ಅರಳಿದ ಜೀವ ಜಗತ್ತು

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಚಿತ್ರಕಲಾ ಸ್ಪರ್ಧೆ 167 ಶಾಲಾ ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 13:42 IST
Last Updated 3 ಜೂನ್ 2019, 13:42 IST
ಮಕ್ಕಳು ಚಿತ್ರ ಬರೆಯುವುದರಲ್ಲಿ ತಲ್ಲೀನರಾಗಿರುವುದು
ಮಕ್ಕಳು ಚಿತ್ರ ಬರೆಯುವುದರಲ್ಲಿ ತಲ್ಲೀನರಾಗಿರುವುದು   

ಚಾಮರಾಜನಗರ: ಪರಿಸರದ ಮೇಲೆ ಚಿಣ್ಣರಿಗೆ ಇರುವ ಕಾಳಜಿ ಕುಂಚದಲ್ಲಿ ಮೂಡಿತ್ತು. ಪರಿಸರ ಸಂರಕ್ಷಿಸುವ ಅವರ ತುಡಿತ ಅವರ ಚಿತ್ರಕಲೆಯಲ್ಲಿ ವ್ಯಕ್ತವಾಗುತ್ತಿತ್ತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಉದ್ಯಾನದಲ್ಲಿ‌ಸೋಮವಾರ ಶಾಲಾ ಮಕ್ಕಳ ಕಲರವ. ಕೈಯಲ್ಲಿ ಕುಂಚ ಹಿಡಿದು ಬಿಳಿ ಹಾಳೆಯಲ್ಲಿ ಬಣ್ಣಗಳನ್ನು ಬಳಿದು ಪರಿಸರ ಸಂರಕ್ಷಣೆಯ ಸಂದೇಶವನ್ನೇ ಸಾರಿದರು.

ವಿಶ್ವಪರಿಸರ ದಿನಾಚರಣೆ ಅಂಗವಾಗಿಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ವಿವಿಧಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಯಿತು.ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸ್ಪರ್ಧೆಯಲ್ಲಿ ಚಿತ್ರಗಳನ್ನು ಬಿಡಿಸಲು ವಿದ್ಯಾರ್ಥಿಗಳಿಗೆ 2 ಗಂಟೆಗಳ ಅವಕಾಶ ನೀಡಲಾಯಿತು‌.

ADVERTISEMENT

164 ಮಕ್ಕಳು: ಚಿತ್ರಕಲಾ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆ, ದೀನಬಂಧು ಆಶ್ರಮ ಶಾಲೆ, ಕಿತ್ತೂರುರಾಣಿ ಚೆನ್ನಮ್ಮ ಶಾಲೆ, ವಿಎಚ್‌ಪಿ ಶಾಲೆ, ಸೆಂಟ್‌ ಫ್ರಾನ್ಸಿಸ್‌ ಶಾಲೆ, ಜೆಎಸ್ಎಸ್ ಪ್ರೌಢಶಾಲೆ, ಎಂವೈಎಫ್‌ ಶಾಲೆ, ರಾಮಸಮುದ್ರ ಬಾಲರಪಟ್ಟಣ ಶಾಲೆ, ಸೇಂಟ್‌ ಜೋಸೆಫ್ ಶಾಲೆ, ಜೆಎಸ್ಎಸ್ ಪಬ್ಲಿಕ್‌ ಶಾಲೆ, ಸೋಮವಾರಪೇಟೆ ಎಂಸಿಎಸ್‌ ಶಾಲೆ,ಯೂನಿವರ್ಸಲ್ ಶಾಲೆ ಸೇರಿದಂತೆ ನಗರ ವ್ಯಾಪ್ತಿಯ ವಿವಿಧ ಶಾಲೆಗಳಿಂದ 164 ಮಕ್ಕಳು ಭಾಗವಹಿಸಿ ಬೆಟ್ಟ, ಗುಡ್ಡ, ಗಿಡ, ಮರಗಳು ಸೇರಿದಂತೆ ಪರಿಸರ ನಾಶದಿಂದಾಗುವ ಪರಿಣಾಮ, ಪರಿಸರ ಸಂರಕ್ಷಣೆಯಿಂದ ಆಗುವಲಾಭಗಳನ್ನು ತಮ್ಮ ಕುಂಚದಲ್ಲಿ ಅರಳಿಸಿದರು.

ಮಕ್ಕಳ ಗುಂಪು, ಜಾಗೃತಿ: ಉದ್ಯಾನದಹಸಿರ ಪರಿಸರದಲ್ಲಿ ಗುಂಪುಗುಂಪಾಗಿ ಕುಳಿತ ಮಕ್ಕಳ ತಮ್ಮದೇ ಕಲ್ಪ‍ನೆಯ ಪ‍ರಿಸರದ ಚಿತ್ರಣವನ್ನು ಬಿಡಿಸಲು ತೊಡಗಿದರು.

ಪೃಥ್ವಿಯನ್ನುರಕ್ಷಣೆ ಮಾಡುವುದು, ಮರಕಡಿಯಬೇಡಿ, ಮರಬೆಳೆಸಿ ನಾಡು ಉಳಿಸಿ, ಮರಗಳ ತೋಪು, ಬೆಟ್ಟಗುಡ್ಡ ಅರಣ್ಯ ಕುರಿತುವಿವಿಧ ಬಗೆಯಚಿತ್ರಬಿಡಿಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮುಂದಾದರು.

ಚಿತ್ರಪಟದಲ್ಲಿ: ನೀರಿನ ಸಂರಕ್ಷಣೆ, ಜನರ ದುರಾಸೆಗೆಬೆಟ್ಟ, ಗುಡ್ಡ, ಅರಣ್ಯ ದಿನೇ ದಿನೇ ನಾಶವಾಗುತ್ತಿರುವುದು, ಕಾರ್ಖಾನೆಗಳು ಹೊರ ಹಾಕುವ ಹೊಗೆ ಹಾಗೂ ಕಲುಷಿತ ನೀರಿನಿಂದ ವಾಯುಮಾಲಿನ್ಯ, ಪರಿಸರ ಮಾಲಿನ್ಯವಾಗುವುದು ಇತ್ಯಾದಿ ಚಿತ್ರಗಳನ್ನುಮಕ್ಕಳು ರಚಿಸಿದರು.

ಮಕ್ಕಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು: ‘ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತ್ರ ಮಕ್ಕಳ ಪರಿಸರ ಪ್ರೇಮ ವ್ಯಕ್ತವಾಗಬಾರದು.ಚಿತ್ರ ಬರೆದು ಹಾಳೆಗೆ ಸೀಮಿತವಾಗದೆತಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಲು, ಸಂರಕ್ಷಿಸಿ ಉಳಿಸಲುಮುಂದಾಗಬೇಕು’ ಎಂದುಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಬಸವರಾಜ ಓಲೇಕಾರ್ ಸಲಹೆ ನೀಡಿದರು.

‘ಪರಿಸರದ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಅರಿವು ಮೂಡಿಸಿಕೊಂಡವರುಉತ್ತಮ ವ್ಯಕ್ತಿಯಾಗಲು ಸಾಧ್ಯ. ಉತ್ತಮ ಪರಿಸರಇದ್ದರೆ ಮಾತ್ರಮನುಷ್ಯ ಆರೋಗ್ಯದಿಂದ ಇರಬಹುದು. ಈ ನಿಟ್ಟಿನಲ್ಲಿ ಸರ್ಕಾರಗಳು ಯೋಜನೆಗಳನ್ನು ರೂಪಿಸಿ ನಮಗೆ ನೀಡುತ್ತವೆ. ಅದರ ಉಪಯೋಗವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ವೈ.ಎಸ್.ರಾಧಾ, ಸಹಾಯಕ ಪರಿಸರ ಅಧಿಕಾರಿ ಹರಿಪ್ರಸಾದ್, ನಗರಸಭೆಯ ಪರಿಸರ ಅಧಿಕಾರಿ ಗಿರಿಜಮ್ಮ,ತೀರ್ಪುಗಾರರಾದ ಮಹೇಂದ್ರ, ಸಂಪತ್ ಕುಮಾರ್ ಇದ್ದರು.

ಜೂನ್‌ 7ರಂದು ಬಹುಮಾನ ವಿತರಣೆ
ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುತ್ತದೆ. ಉತ್ತಮ ಚಿತ್ರಗಳನ್ನು ಬಿಡಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜೂನ್‌ 7 ರಂದು ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆಯುವ ‘ವಿಶ್ವ ಪರಿಸರ ದಿನಾಚರಣೆ’ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.