ಚಾಮರಾಜನಗರದ ಮುಕ್ತ ವಿಶ್ವವಿದ್ಯಾಲಯಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಕಳೆಗಿಡಗಳು ಬೆಳೆದಿರುವುದು
ಚಾಮರಾಜನಗರ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳು ರಸ್ತೆಗಳ ಬದಿ ಬೆಳೆದಿರುವ ಕಳೆಗಿಡಗಳನ್ನು ನಿಯಮಿತವಾಗಿ ತೆರವುಗೊಳಿಸದ ಪರಿಣಾಮ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ರಸ್ತೆಗಳ ಎರಡೂ ಕಡೆಗಳಲ್ಲಿ ಆಳೆತ್ತರ ಬೆಳೆದಿರುವ ಪಾರ್ಥೇನಿಯಂ, ಜಾಲಿ ಮುಳ್ಳು ಹಾಗೂ ಕಳೆಗಿಡಗಳು ರಸ್ತೆಗೆ ಚಾಚಿಕೊಂಡಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಕಂಟಕವಾಗಿ ಪರಿಣಮಿಸಿದೆ.
ರಸ್ತೆಯ ಅರ್ಧದಷ್ಟು ಭಾಗವನ್ನು ಅತಿಕ್ರಮಿಸಿಕೊಂಡಿರುವ ಕಳೆಗಿಡಗಳು ನಗರ ಹಾಗೂ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಮಾಡುತ್ತಿವೆ. ಹಾವು, ಚೇಳು ಸಹಿತ ವಿಷಜಂತುಗಳ ಆವಾಸಸ್ಥಾನವಾಗಿವೆ. ನಾಯಿ ಹಂದಿಗಳ ಅಡಗುದಾಣವಾಗಿದ್ದು ಕಸ ವಿಲೇವಾರಿಯ ಸ್ಥಳಗಳಾಗಿಯೂ ಅನೈರ್ಮಲ್ಯಕ್ಕೆ ಕಾರಣವಾಗಿದೆ.
ನಗರದ ಹೊಸ ಬಡಾವಣೆಗಳ ಪರಿಸ್ಥಿತಿ ಶೋಚನೀಯವಾಗಿದ್ದು ರಸ್ತೆಗಳ ಬಹುಭಾಗ ಕಳೆಗಿಡಗಳಿಂದ ಆವೃತವಾಗಿದೆ. ಬುದ್ಧನಗರ, ವಿವೇಕನಗರ, ಎಲ್‌ಐಸಿ ಬಡಾವಣೆ, ಹೊಸ ಹೌಸಿಂಗ್ ಬಡಾವಣೆ, ಕುಲುಮೆ ರಸ್ತೆ, ಪ್ರಶಾಂತ್ ನಗರ, ಮುಕ್ತ ವಿಶ್ವವಿದ್ಯಾಲಯ ರಸ್ತೆಗಳ ಬದಿ ಬೆಳೆದಿರುವ ಕಳೆಗಿಡಗಳು ನಾಗರಿಕರಿಗೆ ಕಿರಿಕಿರಿ ಉಂಟುಮಾಡುತ್ತಿವೆ.
ಚೆನ್ನಾಪುರದ ಮೊಳೆ ರಸ್ತೆಯ ಬದಿಯಲ್ಲಿ ಅಪಾಯಕಾರಿ ಜಾಲಿ ಮುಳ್ಳಿನ ಪೊದೆಗಳು ಬೆಳೆದಿದ್ದು ಕೆಲವೆಡೆ ರಸ್ತೆಗೆ ಚಾಚಿಕೊಂಡಿವೆ. ವಿಎಚ್‌ಪಿ ಶಾಲೆ ಹಾಗೂ ಸಂತೇಮರಹಳ್ಳಿ ವೃತ್ತಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸಾಗಿದರೆ ಅರಣ್ಯದೊಳಗೆ ಸಾಗಿದ ಅನುಭವವಾಗುತ್ತದೆ. ರಸ್ತೆಗಳ ಬದಿಯಲ್ಲಿ ಬಳ್ಳಾರಿ ಜಾಲಿ ಬೆಳೆದುನಿಂತಿದ್ದು ರಾತ್ರಿಯ ಹೊತ್ತು ಸಂಚರಿಸಲು ಸಾರ್ವಜನಿಕರು ಭಯಪಡುತ್ತಿದ್ದಾರೆ.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಚರ್ಚ್ ಮುಂಭಾಗದ ಸುಮಾರು 500 ಮೀಟರ್ ಉದ್ದಕ್ಕೂ ರಸ್ತೆ ಬದಿ ಪಾರ್ಥೆನಿಯಂ ಬೆಳೆದಿದೆ. ವಿವೇಕನಗರ, ಬುದ್ಧನಗರದಿಂದ ಜೋಡಿ ರಸ್ತೆಗೆ ಸಂಪರ್ಕಿಸುವ ರಸ್ತೆಗಳು ಕಳೆಗಿಡಗಳಿಂದ ಆವೃತ್ತವಾಗಿದೆ.
ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಬೆಳೆದಿರುವ ಕಳೆಗಿಡಗಳ ನಿರ್ವಹಣೆ ಮಾಡದೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು ಎದುರಾಗಿ ಬರುವ ವಾಹನಗಳು ಸ್ಪಷ್ಟವಾಗಿ ಗೋಚರಿಸದೆ ಅಪಘಾತಗಳು ಸಂಭವಿಸುತ್ತಿವೆ. ದ್ವಿಚಕ್ರ ವಾಹನಗಳಲ್ಲಿ ಸಾಗುವಾಗ ರಸ್ತೆಗೆ ಚಾಚಿಕೊಂಡಿರುವ ಜಾಲಿಗಿಡಗಳ ಮುಳ್ಳು ಮೈಗೆ ತಾಗುತ್ತಿದ್ದು ಗಾಯಗಳಾಗುತ್ತಿವೆ.
ಖಾಲಿ ನಿವೇಶನಗಳ ತುಂಬೆಲ್ಲ ಕಳೆ:
ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಜಾಲಿಮುಳ್ಳು, ಕಳೆಗಿಡಗಳು ಬೆಳೆದು ನಿಂತಿದ್ದು ನಗರದ ಅಂದಗೆಡುತ್ತಿದೆ. ಖಾಲಿ ನಿವೇಶನಗಳ ಅಕ್ಕಪಕ್ಕದಲ್ಲಿ ವಾಸವಿರುವ ನಾಗರಿಕರು ನಿತ್ಯವೂ ವಿಷಜಂತುಗಳ ಭಯದಲ್ಲಿ ಬದುಕಬೇಕಾಗಿದೆ. ತ್ಯಾಜ್ಯದ ದುರ್ವಾಸನೆಗೆ ನಿವಾಸಿಗಳು ಬೇಸತ್ತಿದ್ದಾರೆ.
ಪಟ್ಟಣದ ಸೌಂದರ್ಯಕ್ಕೆ ಕುತ್ತು:
ಯಳಂದೂರು ಪಟ್ಟಣದ ಸುತ್ತಮುತ್ತ ಹಸಿರು ಬೇಲಿಗಳು ಎದ್ದುನಿಂತಿವೆ. ವಾಸರಹಿತ ಪಾಳುಬಿದ್ದ ವಸತಿಗೃಹಗಳು, ಖಾಲಿ ನಿವೇಶನಗಳು ಹಾಗೂ ರಾಜಕಾಲುವೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊದೆ ಬೆಳೆದು ನಿಂತಿವೆ. ತುಂತುರು ಮಳೆ ಸುರಿಯುತ್ತಿರುವುದರಿಂದ ಬಡಾವಣೆಗಳ ಸುತ್ತಮುತ್ತ ಕಳೆ ಗಿಡಗಳು ತುಂಬಿಹೋಗಿದ್ದು ಪಟ್ಟಣದ ಸೌಂದರ್ಯಕ್ಕೆ ಕುತ್ತು ಎದುರಾಗಿದೆ. ಕ್ರಿಮಿ ಕೀಟಗಳು ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಮಳೆ ನೀರು ನಿಲ್ಲುವ ಕಡಗಳಲ್ಲಿ ಕಳೆಗಿಡಗಳು ಆಳೆತ್ತರ ಬೆಳೆದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ನಾಗರಿಕರು ದೊರುತ್ತಾರೆ.
ಕೊಳ್ಳೇಗಾಲ ನಗರದ ಅನೇಕ ರಸ್ತೆಯಲ್ಲಿ ಆಳೆತ್ತರದ ಕಳೆಗಿಡಗಳು ಬೆಳೆದಿರುವುದರಿಂದ ವಾಹನ ಸವಾರರಿಗೆ ಪ್ರತಿನಿತ್ಯ ತೊಂದರೆ ಉಂಟಾಗುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ. ಮತ್ತೊಂದೆಡೆ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಕಳೆ ಗಿಳ ಬೆಳೆದಿರುವುದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಎದುರುಗಡೆಯಿಂದ ಬರುವ ವಾಹನಗಳು ಸರಿಯಾಗಿ ಕಾಣದೆ ಅಪಘಾತಗಳಿಗೆ ಕಾರಣವಾಗುತ್ತಿದೆ. ನಗರದ ಸ್ವಚ್ಛತೆಯ ಹೊಣೆ ಹೊತ್ತುಕೊಂಡಿರುವ ನಗರಸಭೆಯಾಗಲಿ, ಜನಪ್ರತಿನಿಧಿಗಳಾಗಲಿ ಸ್ವಚ್ಛತೆಗೆ ತಲೆಕೆಡಿಸಿಕೊಂಡಿಲ್ಲ.
ವಿಷ ಜಂತುಗಳ ಆವಾಸ:
ಗಿಡ ಗಂಟಿಗಳು ಹೆಚ್ಚಾಗಿ ಬೆಳೆದಿರುವುದರಿಂದ ವಿಷಜಂತುಗಳ ಕಾಟ ಹೆಚ್ಚಾಗಿದೆ. ಕಳೆಗಿಡಗಳ ಸಮಸ್ಯೆ ಗಂಭೀರವಾಗಿರುವ ಬಡಾವಣೆ ನಿವಾಸಿಗಳು ಜೀವಭಯದಲ್ಲಿ ಬದುಕಬೇಕಾಗಿದೆ. ರಸ್ತೆಯಲ್ಲಿ ಸಾಗುವಾಗ ಪೊದೆಗಳಿಂದ ಏಕಾಏಕಿ ಹಂದಿಗಳು ಹಾಗೂ ನಾಯಿಗಳು ರಸ್ತೆಗೆ ಬರುತ್ತಿದ್ದು ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ರಸ್ತೆ ಬದಿಯ ಗಿಡಗಂಟಿಗಳನ್ನು ತೆರವು ಮಾಡಿಸಬೇಕು, ಇಲ್ಲದಿದ್ದರೆ ನಾಗರಿಕರು ನಗರಸಭೆ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಯಾರು ಏನಂತಾರೆ..?
‘ತೆರವಿಗೆ ಕ್ರಮ’
ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲ ಬಡಾವಣೆಗಳ ರಸ್ತೆ ಬದಿಯಲ್ಲಿ ಬೆಳೆದಿರುವ ಕಳೆಗಿಡಗಳ ನಿರ್ಮೂಲನೆಗೆ ಅಗತ್ಯ ಕ್ರಮ ವಹಿಸಲಾಗುವುದು.
–ಸುರೇಶ್, ಚಾ.ನಗರ ನಗರಸಭೆ ಅಧ್ಯಕ್ಷ
ಅನಾಹುತ ತಪ್ಪಿಸಿ
ಚೆಲುವ ಚಾಮರಾಜನಗರ ಎಂದು ಫಲಕ ಅಳವಡಿಸುವಲ್ಲಿ ತೋರಿಸುವ ಆಸಕ್ತಿ, ಬದ್ಧತೆಯನ್ನು ನಗರದ ರಸ್ತೆ ಬದಿಗಳಲ್ಲಿ ಬೆಳೆದಿರುವಂತಹ ಮುಳ್ಳಿನ ಗಿಡ, ಬೇಡವಾದ ಸಸಿಗಳನ್ನು ತೆರವುಗೊಳಿಸುವಲ್ಲಿ ತೋರಿಸಿದರೆ ಜನಸಾಮಾನ್ಯರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲವಾಗಲಿದೆ. ನಗರದ ಸೌಂದರ್ಯಕ್ಕೆ ಅಡ್ಡಿಯಾಗಿರುವ ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಕಳೆಗಿಡಗಳ ತೆರವುಗೊಳಿಸಲು ಜಿಲ್ಲಾಡಳಿತ ಹಾಗೂ ನಗರಸಭೆ ವಿಫಲವಾಗಿದೆ. ಇನ್ನಾದರೂ ಎಚ್ಚೆತ್ತು ಇತ್ತ ಗಮನಹರಿಸಿ ಆಗಬಹುದಾದಂತಹ ಅನಾಹುತ ತಪ್ಪಿಸಬೇಕು.
–ಭಾನುಪ್ರಕಾಶ್, ಸಾಮಾಜಿಕ ಹೋರಾಟಗಾರ
ವಾಹನ ಸವಾರರಿಗೆ ಸಮಸ್ಯೆ
ಪಟ್ಟಣ ಹಾಗೂ ಗ್ರಾಮಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಸನಿಹದಲ್ಲಿ ಜಾಲಿ ಮುಳ್ಳಿನ ಗಿಡಗಳು ವ್ಯಾಪಕವಾಗಿ ಬೆಳೆದು ವಾಹನ ಸವಾರರು ಹಾಗೂ ಪಾದಚಾರಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆಗಿಡಗಳ ಮಧ್ಯೆ ತ್ಯಾಜ್ಯ ತಂದು ಬಿಸಾಡುವುದರಿಂದ ಅನೈರ್ಮಲ್ಯ ಉಂಟಾಗಿದೆ. ಜನ ಜಾನುವಾರುಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಗ್ರಾಮಪಂಚಾಯಿತಿ ಸಿಬ್ಬಂದಿ ರಸ್ತೆ ಬದಿಯ ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು.
–ಬಾಗಳಿ ರೇವಣ್ಣ
ಅಪಘಾತ ಹೆಚ್ಚಳ
ಕಳೆಗಿಡಗಳು ಹೆಚ್ಚಾಗಿದ್ದು ನಗರದ ಸೌಂದರ್ಯ ಹಾಳಾಗುವುದರ ಜೊತೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ನಗರಸಭೆ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಅಪಘಾತದಿಂದಾಗುವ ಸಾವು ನೋವುಗಳಿಗೆ ಅಧಿಕಾರಿಗಳೇ ಹೊಣೆಗಾರಿಕೆಯಾಗಬೇಕಾಗುತ್ತದೆ.
–ದಿವ್ಯ ಸ್ವರೂಪ, ಕೊಳ್ಳೇಗಾಲ
ಸೌಂದರ್ಯಕ್ಕೆ ಧಕ್ಕೆ
ನೀರಿನ ಟ್ಯಾಂಕ್‌ಗಳು ಹಾಗೂ ವಿದ್ಯುತ್ ಕಂಬಗಳ ಮೇಲೆ ಅಪ್ಪುಗೆ ಸಸ್ಯಗಳು ಬೆಳೆಯುತ್ತಿವೆ. ಕಳೆ ಗಿಡಗಳು ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ಉಂಟುಮಾಡುತ್ತಿದೆ. ಬಡಾವಣೆಗಳ ಸುತ್ತಮುತ್ತ ಮತ್ತು ಸರ್ಕಾರಿ ಕಚೇರಿಗಳ ಬಳಿ ಕಳೆ ಗಿಡಗಳನ್ನು ತೆರವುಗೊಳಿಸಬೇಕು. ಪ್ರತಿವರ್ಷ ಮಳೆಗಾಲ ಆರಂಭವಾಗುವ ಮುನ್ನವೇ ಸ್ವಚ್ಛತಾ ಕಾರ್ಯ ಆರಂಭಿಸಿದರೆ ಸಮಸ್ಯೆ ಗಂಭಿರವಾಗುವುದಿಲ್ಲ.
–ಪ್ರಸಾದ್ ಮದ್ದೂರು. ಪರಿಸರವಾದಿ
ನಿವಾರಣೆಗೆ ಕ್ರಮ
ಮಳೆಗಾಲಕ್ಕೂ ಮುನ್ನ ಕಳೆ ಗಿಡಗಳನ್ನು ಕತ್ತರಿಸಿ ತೆಗೆಯಲಾಗಿದೆ. ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಕಳೆ ಗಿಡಗಳು ಮತ್ತೆ ಬೆಳೆದಿವೆ. ಬಡಾವಣೆಯ ನಿವಾಸಿಗಳು ಮನೆಯ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಜಾಗೃತಿ ಮೂಡಿಸಲಾಗಿದೆ. ಪಂಚಾಯತಿ ವತಿಯಿಂದ ಸಾರ್ವಜನಿಕ ರಸ್ತೆ ಹಾಗೂ ಬಡಾವಣೆಗಳಲ್ಲಿ ಬೆಳೆದಿರುವ ಕಳೆ ಸಸ್ಯಗಳನ್ನು ತೆಗೆಯಲು ಕ್ರಮ ಕೈಗೊಳ್ಳಲಾಗುವುದು.
–ಮಹೇಶ್ ಕುಮಾರ್, ಯಳಂದೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ
ನಿರ್ವಹಣೆ: ಬಾಲಚಂದ್ರ ಎಚ್.
ಪೂರಕ ಮಾಹಿತಿ: ಅವಿನ್ ಪ್ರಕಾಶ್, ನಾ. ಮಂಜುನಾಥ್, ಮಹದೇವ್ ಹೆಗ್ಗವಾಡಿಪುರ
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.