ADVERTISEMENT

ಗುಂಡ್ಲುಪೇಟೆ: ಕೋವಿಡ್‌ ನಡುವೆಯೂ ಕೇರಳಕ್ಕೆ ಕೂಲಿ ಕೆಲಸಕ್ಕೆ ಕುಟುಂಬಗಳು ವಲಸೆ

ಕೇರಳಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿರುವ ಕುಟುಂಬಗಳು

ಮಲ್ಲೇಶ ಎಂ.
Published 18 ಜನವರಿ 2022, 19:30 IST
Last Updated 18 ಜನವರಿ 2022, 19:30 IST
ಕೇರಳಕ್ಕೆ ತೆರಳುವುದಕ್ಕಾಗಿ ಗುಂಡ್ಲುಪೇಟೆಯ ಬಸ್‌ ನಿಲ್ದಾಣದಲ್ಲಿ ಕೇರಳ ಸಾರಿಗೆ ಬಸ್‌ ಏರುತ್ತಿರುವ ಜನರು
ಕೇರಳಕ್ಕೆ ತೆರಳುವುದಕ್ಕಾಗಿ ಗುಂಡ್ಲುಪೇಟೆಯ ಬಸ್‌ ನಿಲ್ದಾಣದಲ್ಲಿ ಕೇರಳ ಸಾರಿಗೆ ಬಸ್‌ ಏರುತ್ತಿರುವ ಜನರು   

ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳದ ನಡುವೆಯೂ ತಾಲ್ಲೂಕಿನ ಜನರು ಕುಟುಂಬ ಸಮೇತರಾಗಿ ಕೇರಳಕ್ಕೆ ವಲಸೆ ಹೋಗುತ್ತಿದ್ದಾರೆ.

ಕೇರಳದಲ್ಲಿ ಕಾಫಿ ಕೊಯ್ಲಿನ ಸಮಯ ಇದಾಗಿದ್ದು, ಅಲ್ಲಿ ಕೂಲಿಯಾಳುಗಳ ಕೊರತೆ ಇದೆ. ಹಾಗಾಗಿ, ತಾಲ್ಲೂಕಿನ ವಿವಿಧ ಭಾಗಗಳಿಂದ ಜನರು ಕೆಲಸಕ್ಕಾಗಿ ಕೇರಳದತ್ತ ಹೋಗುತ್ತಿದ್ದಾರೆ. ಪ್ರತಿದಿನ ಕೇರಳಕ್ಕೆ ಹೋಗುವ ಬಸ್‌ಗಳಲ್ಲಿ ಗಂಟುಮೂಟೆ ಕಟ್ಟಿಕೊಂಡು ಕುಟುಂಬ ಸಮೇತರಾಗಿ ಹೋಗುತ್ತಿರುವ ದೃಶ್ಯ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಂಡು ಬರುತ್ತಿದೆ.

ತಾಲ್ಲೂಕಿನ ಭೀಮನಬೀಡು, ಕೂತನೂರು, ಮದ್ದೂರು, ಚೆನ್ನಮಲ್ಲಿಪುರ, ಕೊಡಹಳ್ಳಿ, ಅಣ್ಣೂರುಕೇರಿ, ಬನ್ನೀತಾಳಪುರ, ಹಂಗಳ, ಬೊಮ್ಮಲಾಪುರ, ಬೇರಂಬಾಡಿ, ಗೋಪಾಲಪುರ, ಕೊಡಸೋಗೆ ಸೇರಿದಂತೆ ಕಾಡಂಚಿನ ಗ್ರಾಮಗಳಾದ ಮಗುವಿನಹಳ್ಳಿ, ಜಕ್ಕಹಳ್ಳಿ, ಮಂಗಲ, ಯಲಚೆಟ್ಟಿ ಹಾಗೂ ಬುಡಕಟ್ಟು ಜನಾಂಗದ ಕಾಲೊನಿಗಳಿಂದ ಜನರು ಕೇರಳಕ್ಕೆ ಹೋಗುತ್ತಿದ್ದಾರೆ.

ADVERTISEMENT

ಸಂಪಾದನೆ ಹೆಚ್ಚು: ‘ಅಲ್ಲೀಗ ಕಾಫಿ ಕೊಯ್ಲು ಆರಂಭವಾಗಿದೆ. ಹೆಚ್ಚಿನ ಕಾರ್ಮಿಕರ ಅವಶ್ಯಕತೆ ಇದೆ. ಒಂದು ಕೆ.ಜಿ. ಕಾಫಿ ಹಣ್ಣು ಕೊಯ್ದರೆ ₹4ರಿಂದ ₹6 ಸಿಗುತ್ತದೆ. ದಿನವೊಂದಕ್ಕೆ ಒಬ್ಬರು 300ರಿಂದ 400 ಕೆ.ಜಿ ವರೆಗೂ ಕೊಯ್ಯುತ್ತಾರೆ. ₹ 1000ಕ್ಕೂ ಹೆಚ್ಚು ಹಣ ಸಂಪಾದನೆಯಾಗುತ್ತದೆ. ಗಂಡ –ಹೆಂಡತಿ ಇಬ್ಬರೂ ಒಟ್ಟಾಗಿ ದಿನಕ್ಕೆ ₹2000ವರೆಗೂ ಸಂಪಾದಿಸಬಹುದು. ತಾಲ್ಲೂಕಿನಲ್ಲಿ ನರೇಗಾ ಅಥವಾ ಜಮೀನಿನ ಕೆಲಸಕ್ಕೆ ಹೋದರೆ ಇಬ್ಬರು ₹7000 ಸಂಪಾದನೆ ಮಾಡಬಹುದು. ಅಲ್ಲಿ ಹೆಚ್ಚು ಸಂಪಾದನೆಯಾಗುತ್ತದೆ ಎಂಬ ಕಾರಣಕ್ಕೆ ಮೂರು ತಿಂಗಳ ಮಟ್ಟಿಗೆ ಕೇರಳಕ್ಕೆ ಕಾಫಿ ಕೆಲಸಕ್ಕೆ ಹೋಗುತ್ತಾರೆ‘ ಎಂದು ಬೀಮನಬೀಡು ಗ್ರಾಮದ ರಾಚಶೆಟ್ಟಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಕೇರಳದ ವಯನಾಡು ಜಿಲ್ಲೆಯ ಕಲ್ಲೆಟ್ಟಾ, ಬತ್ತೇರಿ, ಕೋಯಿಕ್ಕೋಡ್‌, ನೆಲಂಬೂರ್, ಮೀನಂಗಾಡಿ, ಎಡಕ್ಕರ ಮೊದಲಾದ ಸ್ಥಳಗಳಲ್ಲಿ ಹೆಚ್ಚು ಕಾಫಿ ಬೆಳೆಯಲಾಗುತ್ತದೆ.

’ಕೇರಳಕ್ಕೆ ಕೂಲಿ ಅರಸಿ ತೆರಳುವ ವೇಳೆ ಶಾಲೆಗೆ ಹೋಗುವ ಮಕ್ಕಳನ್ನು ನೆಂಟರ ಮನೆ ಅಥವಾ ಪೋಷಕರ ಮನೆಯಲ್ಲಿ ಬಿಡುತ್ತೇವೆ. ಚಿಕ್ಕ ಮಕ್ಕಳಾದರೆ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಮಕ್ಕಳನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಕೆಲವರನ್ನು ಶಾಲೆ ಬಿಡಿಸಿ ಕರೆದುಕೊಂಡು ತೆರಳುತ್ತೇವೆ’ ಎಂದು ಗುಳೆ ಹೊರಟ ವ್ಯಕ್ತಿಯೊಬ್ಬರು ತಿಳಿಸಿದರು.

‘ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕಾಫಿ ಸಮಯದಲ್ಲಿ ಹಣ ಸಂಪಾದಿಸಲು ಆಗಿರಲಿಲ್ಲ. ಈ ವರ್ಷ ಅವಕಾಶ ಸಿಕ್ಕಿದೆ. ಇದನ್ನು ಬಿಟ್ಟರೆ ಹೆಚ್ಚಿನ ಕೂಲಿಯ ಅವಕಾಶವೇ ಸಿಗುವುದಿಲ್ಲ. ವರ್ಷದಲ್ಲಿ ಮೂರು ತಿಂಗಳು ಒಂದಷ್ಟು ಹಣಗಳಿಸಲು ಅವಕಾಶ ಸಿಗುತ್ತದೆ. ಇಲ್ಲವಾದಲ್ಲಿ ಖಾಲಿ ಕೈಯಲ್ಲಿ ಇರಬೇಕಾಗುತ್ತದೆ’ ಎಂದು ಕೇರಳಕ್ಕೆ ಹೊರಟ್ಟಿದ್ದ ಮಹದೇವಯ್ಯ ಅವರು ’ಪ್ರಜಾವಾಣಿ‘ಗೆ ಹೇಳಿದರು.

’ಹೋದವರನ್ನು ಕರೆತರಲು ಯತ್ನ‘

’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದಭೀಮನಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್‌ ಅವರು, ‘ಗ್ರಾಮದ 30 ವಿದ್ಯಾರ್ಥಿಗಳು ಶಾಲೆ ಬಿಟ್ಟು ಪೋಷಕರ ಜೊತೆ ಕೇರಳಕ್ಕೆ ತೆರಳಿದ್ದರು. ತಂದೆ-ತಾಯಿ ಮನವೊಲಿಸಿ ಇದೀಗ 10 ಮಕ್ಕಳನ್ನು ಕರೆತರಲಾಗಿದೆ. ಉಳಿದ 20 ಮಂದಿಯ ಸಂಪರ್ಕದಲ್ಲಿದ್ದು, ಶೀಘ್ರ ಅವರನ್ನು ಕರೆದುಕೊಂಡು ಬರಲಾಗುವುದು. ವಲಸೆ ಹೋಗುವುದನ್ನು ತಡೆಯುವುದಕ್ಕಾಗಿ ಪಂಚಾಯಿತಿ ವತಿಯಿಂದ ಪೋಷಕರ ಸಭೆ, ಜಾಥಾ ನಡೆಸಿ ಅರಿವು ಮೂಡಿಸಲಾಗಿದೆ’ ಎಂದು ಹೇಳಿದರು.

* ನರೇಗಾ ಕೆಲಸಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಹಾಗಿದ್ದರೂ, ಹೆಚ್ಚಿನ ಕೂಲಿ ಸಿಗುತ್ತದೆ ಎಂದು ಕೇರಳಕ್ಕೆ ಹೋಗುತ್ತಿದ್ದಾರೆ.

–ರವಿಶಂಕರ್, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.