ADVERTISEMENT

ಜನರ ದೂರುಗಳಿಗೆ ಸ್ಪಂದನೆ: ಆಸ್ತಿ ಖಾತೆಗೆ ಪ್ರಾಯೋಗಿಕ ಅಭಿಯಾನ

ಚಾಮರಾಜನಗರ ಜಿಲ್ಲಾ ಪಂಚಾಯಿತಿಯಿಂದ ವಿನೂತನ ಕಾರ್ಯಕ್ರಮ

ಸೂರ್ಯನಾರಾಯಣ ವಿ
Published 24 ಸೆಪ್ಟೆಂಬರ್ 2018, 15:21 IST
Last Updated 24 ಸೆಪ್ಟೆಂಬರ್ 2018, 15:21 IST
ಹರೀಶ್‌ ಕುಮಾರ್‌
ಹರೀಶ್‌ ಕುಮಾರ್‌   

ಚಾಮರಾಜನಗರ: ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಯ ಖಾತೆ (ಹಕ್ಕು ಪತ್ರ) ಮಾಡಿಸಿಕೊಳ್ಳಲು ಪಡುತ್ತಿರುವ ಕಷ್ಟವನ್ನು ದೂರಮಾಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ಖಾತೆ ಅಭಿಯಾನ ನಡೆಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಚಿತಾಳಪುರವನ್ನು ಅಭಿಯಾನಕ್ಕಾಗಿ ಅದು ಆಯ್ಕೆ ಮಾಡಿದ್ದು, ಶೀಘ್ರದಲ್ಲಿ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆಸಿಗಲಿದೆ.

ಅಭಿಯಾನ ಯಾಕೆ?: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಹಲವು ಸಮಯದಿಂದ ಆಸ್ತಿಯ ಖಾತೆಗಳು ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಹಲವು ದೂರುಗಳು ಬಂದಿದ್ದವು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ನಡೆಸುತ್ತಿರುವ ಜನಸಂಪರ್ಕ ಸಭೆಗಳಲ್ಲೂ ಈ ಬಗ್ಗೆಯೇ ಹೆಚ್ಚಿನ ದೂರುಗಳು ಬರುತ್ತಿವೆ.

ADVERTISEMENT

ಇದರ ಜೊತೆಗೆಜಮೀನಿನ ಮಾಲೀಕತ್ವದ ಬಗ್ಗೆ ಸರಿಯಾದ ದಾಖಲೆಗಳಿದ್ದರೂ, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಖಾತೆ ಮಾಡಿಕೊಡುತ್ತಿಲ್ಲ ಎಂಬ ಆರೋಪಗಳೂ ಇವೆ. ‘ಖಾತೆ ಮಾಡಿಸಿಕೊಡಲು ಲಂಚ ಕೇಳುತ್ತಾರೆ. ಕೊಡದಿದ್ದರೆ ಅನಗತ್ಯವಾಗಿ ವಿಳಂಬ ಮಾಡುತ್ತಾರೆ’ ಎಂಬ ಆಪಾದನೆಯನ್ನೂ ಜನರು ಮಾಡುತ್ತಿದ್ದಾರೆ.

ಖಾತೆಗಳು ಯಾಕೆ ಆಗುತ್ತಿಲ್ಲ?: ‘ಬಹುತೇಕ ಸಂದರ್ಭಗಳಲ್ಲಿ ಆಸ್ತಿಯ ಹಕ್ಕು ಬದಲಾವಣೆಗೆ ಸಂಬಂಧಿಸಿದಂತೆ ಕುಟುಂಬಗಳ ನಡುವೆ ಕಲಹ ಇರುತ್ತದೆ. ಭೂ ಹಕ್ಕಿನ ಬಗ್ಗೆಯೂ ವಿವಾದಗಳಿರುತ್ತವೆ. ಜೊತೆಗೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸರಿ ಇರುವುದಿಲ್ಲ. ಹೀಗಾಗಿ ‘ಇ–ಸ್ವತ್ತು’ ಆಗುತ್ತಿಲ್ಲ’ ಎಂದು ಹೇಳುತ್ತಾರೆ ಜಿಲ್ಲಾ ಪಂಚಾಯಿತಿಯ ಉನ್ನತ ಅಧಿಕಾರಿಗಳು.

ಇದರ ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ಗ್ರಾಮ ಠಾಣೆ ಬೆಳೆಯುತ್ತಾ ಹೋಗಿದೆ. ಆಸ್ತಿಗೆ ಸಂಬಂಧಿಸಿದ ಸರಿಯಾದ ನಕ್ಷೆಗಳೂ ಇಲ್ಲ. ಸರ್ವೆ ನಡೆಸಿ ಗ್ರಾಮ ಠಾಣೆಗಳ ವ್ಯಾಪ್ತಿಯನ್ನು ಗುರುತಿಸುವಂತೆ ಎರಡು ವರ್ಷಗಳ ಹಿಂದೆ ಸರ್ಕಾರ ಹೇಳಿತ್ತು. ಆದರೆ, ಭೂ ಮಾಪನ ಮಾಡುವ ಸಿಬ್ಬಂದಿಯ ಕೊರತೆಯ ಕಾರಣಕ್ಕೆ ಆ ಕೆಲಸ ಆಗಿಲ್ಲ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಅರ್ಹರಿಗೆ ಪ್ರಯೋಜನ:‘ಖಾತೆ ಮಾಡಿಕೊಡುವ ವಿಚಾರದಲ್ಲಿ ಹಲವಾರು ದೂರುಗಳು ಬರುತ್ತಿವೆ. ಇದಕ್ಕೆ ಹಲವು ಕಾರಣಗಳಿವೆ.ಜನರ ಬಳಿ ಎಲ್ಲ ದಾಖಲೆಗಳಿದ್ದರೂ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಖಾತೆ ಮಾಡಿಕೊಡುತ್ತಿಲ್ಲ ಎಂಬ ದೂರುಗಳೂ ಇವೆ. ಖಾತೆ ಮಾಡಿಸಿಕೊಳ್ಳಲು ಅರ್ಹತೆ ಇರುವವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲು ನಿರ್ಧರಿಸಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಕೆ.ಹರೀಶ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಭಿಯಾನದ ಅಡಿಯಲ್ಲಿಕಾನೂನು ಪ್ರಕಾರವಾಗಿ ಎಲ್ಲ ಸರಿಯಾದ ದಾಖಲೆಗಳನ್ನು ಹೊಂದಿರುವವರಿಗೆನಿಗದಿತ ಸಮಯದೊಳಗೆ ನಾವು ಖಾತೆ ಮಾಡಿಕೊಡುತ್ತೇವೆ’ ಎಂದು ಅವರು ವಿವರಿಸಿದರು.

‘ಹಿಂಬರಹ ಕಡ್ಡಾಯವಾಗಿ ಕೊಡಬೇಕು’

‘ಖಾತೆ ಆಗದವರು ಈ ಅಭಿಯಾನದಲ್ಲಿ ಅರ್ಜಿ ಸಲ್ಲಿಸಬಹುದು. ಗ್ರಾಮ ಪಂಚಾಯಿತಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಅವರಿಗೆ ಖಾತೆ ಮಾಡಿ ಕೊಡಬೇಕು. ಆಗುವುದಿಲ್ಲ ಎಂದರೆ, ಈ ಬಗ್ಗೆ ಹಿಂಬರಹ ನೀಡಬೇಕಾಗುತ್ತದೆ’ ಎಂದು ಹರೀಶ್‌ ಕುಮಾರ್‌ ಹೇಳಿದರು.

‘ನೀಡಿರುವ ವಿವರಣೆಯ ಬಗ್ಗೆ ತಕರಾರು ಇದ್ದರೆ ಜನರು ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿ ವಿಚಾರಣೆ ನಡೆದು ತೀರ್ಮಾನ ಆಗುತ್ತದೆ. ಅದರ ಬಗ್ಗೆಯೂ ಆಕ್ಷೇಪಣೆ ಇದ್ದರೆ ಸಿಇಒ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.