ಗುಂಡ್ಲುಪೇಟೆ: ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಅಧ್ಯಕ್ಷರಾಗಿ ಬಿಜೆಪಿ ಹಿರಿಯ ಮುಖಂಡ ಕೊಡಸೋಗೆ ಶಿವಬಸಪ್ಪ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಭಾಂಗಣದಲ್ಲಿ ಎಸ್.ಬಸವಣ್ಣ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೊಡಸೋಗೆ ಶಿವಬಸಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಹಕಾರಿ ಇಲಾಖೆಯ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಘೋಷಿಸಿದರು.
ಶಿವಬಸಪ್ಪ ಮಾತನಾಡಿ, ‘ನನ್ನ ರಾಜಕೀಯ ಪಿಎಲ್‍ಡಿ ಬ್ಯಾಂಕ್ ಮೂಲಕ ಆರಂಭಗೊಂಡಿತು. ಸುಧೀರ್ಘ ಸಕ್ರಿಯ ರಾಜಕಾರಣದ ಜೊತೆಗೆ ವಿವಿಧ ಅವಧಿಯಲ್ಲಿ ಬ್ಯಾಂಕ್ ನಿರ್ದೇಶಕನಾಗಿ 50 ವರ್ಷ ಕಾಲ ಸೇವೆ ಮಾಡಿದ್ದೇನೆ. ಹಿಂದೆ ನಾಲ್ಕು ಬಾರಿ ಅಧ್ಯಕ್ಷನಾಗಿದ್ದು, ಈಗ ಎಲ್ಲಾ ನಿರ್ದೇಶಕರು ನನ್ನ ಮೇಲೆ ವಿಶ್ವಾಸ ಇಟ್ಟು 5 ನೇ ಬಾರಿಗೆ ಅಧ್ಯಕ್ಷನಾಗುವ ಅವಕಾಶ ಮಾಡಿದ್ದಾರೆ. ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ವಹಿಸಿಕೊಂಡಿರುವುದು ಸಂತಸ ತಂದಿದೆ’ ಎಂದರು.
‘ಪಿಎಲ್‍ಡಿ ಬ್ಯಾಂಕ್ ಏಳು ದಶಕದಿಂದ ತಾಲ್ಲೂಕಿನ ರೈತರಿಗೆ ಬೇಡಿಕೆ ಅನುಸರ ಬೆಳೆಸಾಲ, ಕೃಷಿ ಯಂತ್ರೋಪಕರಣ, ತಂತಿ ಬೇಲೆ, ಜಮೀನು ಅಭಿವೃದ್ಧಿ ಸೇರಿ ಹಲವು ಉದ್ದೇಶಗಳಿಗೆ ಸಾಲ ನೀಡುತ್ತಾ ಬರುತ್ತಿದೆ. ಇದರಿಂದ ಬ್ಯಾಂಕ್‍ನೊಂದಿಗೆ ತಾಲ್ಲೂಕಿನ ರೈತರ ಉತ್ತಮ ಬಾಂಧವ್ಯವಿದೆ. ಸಾಲ ಮರುಪಾವತಿ ಸಕಾಲದಲ್ಲಿ ಆಗುತ್ತಿದ್ದು, ಬಾಕಿ ಸಾಲವನ್ನು ವಸೂಲಿ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಬ್ಯಾಂಕ್ ಉತ್ತಮ ಮೂಲಸೌಲಭ್ಯಗಳಿರುವ ನೂತನ ಕಟ್ಟಡ ಹೊಂದಿದೆ. ಸಾಲ ಸೌಲಭ್ಯದ ಜತೆಗೆ ಇ-ಸ್ಟಾಂಪ್ ಸೇವೆ ನೀಡಲಾಗುತ್ತಿತ್ತು. ಬ್ಯಾಂಕ್ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಸಿ.ಎಸ್.ನಿರಂಜನ್‍ಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಮಹದೇವಪ್ರಸಾದ್, ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಬಸವಣ್ಣ ಚನ್ನಮಲ್ಲಿಪುರ, ಪ್ರಭಾರ ಅಧ್ಯಕ್ಷ ಕೂಸಯ್ಯ ಹಂಗಳ, ನಿರ್ದೇಶಕರಾದ ಎನ್.ಮಲ್ಲೇಶ್, ಮಲ್ಲಿಕಾರ್ಜುನ ಶ್ಯಾನಡ್ರರಹಳ್ಳಿ, ಎಚ್.ಎಂ.ಮಹೇಶ್, ಬ್ಯಾಂಕ್ ವ್ಯವಸ್ಥಾಪಕ ಮುತ್ತುರಾಜ್ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.