ADVERTISEMENT

ಚಾಮರಾಜನಗರ | ಪೋಕ್ಸೊ; ಆರೋಪಿಗಳಿಗೆ ರಕ್ಷಣೆ–ಆರೋಪ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಡಿ.6ರಂದು ನಡೆದ ಘಟನೆ, 9ರಂದು ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 7:50 IST
Last Updated 1 ಜನವರಿ 2022, 7:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ‘16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸರ್ಕಾರಿ ಸೇವೆಯಲ್ಲಿರುವ ಮೂವರು ಹಾಗೂ ಮತ್ತೊಬ್ಬರ ಮೇಲೆ ‍‍ಪೋಕ್ಸೊ ಕಾಯ್ದೆಯಡಿ 20 ದಿನದ ಹಿಂದೆ ಪ್ರಕರಣ ದಾಖಲಾಗಿದ್ದರೂ; ಆರೋಪಿಗಳ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ. ಆರೋಪ ಎದುರಿಸುತ್ತಿರುವವರನ್ನು ಸಂಬಂಧಿಸಿದ ಇಲಾಖೆಗಳು ಅಮಾನತು ಮಾಡಿಲ್ಲ’ ಎಂದು ಬಾಲಕಿ ಕುಟುಂಬದವರು ಆರೋಪಿಸಿದ್ದಾರೆ.

ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ ಪ್ರಕಾರ, ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಡಿ.6ರಂದು ಘಟನೆ ನಡೆದಿದೆ. ಬಾಲಕಿಯ ತಾಯಿ, ಡಿ.9ರಂದು ಚಾಮರಾಜನಗರದಲ್ಲಿರುವ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಡಿ.6ರ ಸಂಜೆ 5.30ರ ಸುಮಾರಿಗೆ ಶಾಲೆಯಿಂದ ಬರುತ್ತಿದ್ದ ಬಾಲಕಿಯೊಂದಿಗೆಶಿವಣ್ಣ ನಾಯಕ, ಜವರನಾಯಕ ಎಂಬುವರು ಅಶ್ಲೀಲವಾಗಿ ವರ್ತಿಸಿದ್ದಾರೆ ಎಂದು ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

‘ಈ ವಿಚಾರವಾಗಿ ಡಿ.7ರಂದು ತನ್ನ ಕಿರಿಯ ಸಹೋದರ ಇಬ್ಬರನ್ನು ಪ್ರಶ್ನಿಸಿದ್ದಕ್ಕೆ ಜವರನಾಯಕ ಅವರ ತಮ್ಮ ಹರೀಶ, ಶಿವಣ್ಣ ನಾಯಕ ಅವರ ತಮ್ಮ ನಾಗರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದೂ ಅವರು ದೂರಿನಲ್ಲಿ ಹೇಳಿದ್ದಾರೆ.

ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಶಿವಣ್ಣ ನಾಯಕ ಅವರನ್ನು ಒಂದನೇ ಆರೋಪಿ, ಜವರನಾಯಕ ಅವರನ್ನು 2ನೇ ಆರೋಪಿ, ಹರೀಶ ಅವರನ್ನು ಮೂರನೇ ಹಾಗೂ ನಾಗರಾಜು ಅವರನ್ನು ನಾಲ್ಕನೇ ಆರೋಪಿ ಎಂದು ಉಲ್ಲೇಖಿಸಿದ್ದಾರೆ.

ಶಿವಣ್ಣ ನಾಯಕ ಅರಣ್ಯ ಇಲಾಖೆಯಲ್ಲಿ ಗಾರ್ಡ್‌ ಆಗಿದ್ದರೆ, ಜವರನಾಯಕ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹರೀಶ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ ಎಂಬುದು ತಿಳಿದು ಬಂದಿದೆ.

‘ಡಿ.9ರಂದೇ ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ‍್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಪ್ರಕರಣ ದಾಖಲಾದ ತಕ್ಷಣ ಆರೋಪಿಗಳು ಸೇವೆಯಿಂದ ಅಮಾನತಾಗಬೇಕು. ಆದರೆ, ಎಲ್ಲರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ಎಸ್‌ಪಿ, ಡಿವೈಎಸ್‌ಪಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಎಲ್ಲರೂ ಮಹಿಳೆಯಾಗಿದ್ದರೂ; ನಮ್ಮ ಹುಡುಗಿಗೆ ನ್ಯಾಯ ಸಿಕ್ಕಿಲ್ಲ. ಅಶ್ಲೀಲ ವರ್ತನೆ ಪ್ರಶ್ನಿಸಿದ್ದಕ್ಕೆ ನಮ್ಮ ವಿರುದ್ಧವೇ ಜಾತಿ ನಿಂದನೆ, ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ’ ಎಂದು ಬಾಲಕಿ ಕುಟುಂಬದವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಶೀಲಿಸಿ ಕ್ರಮ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹಿಳಾ ಠಾಣೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಶೇಖರ್‌, ‘ದೂರುದಾರರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹಾಗಾಗಿ, ತಾಂತ್ರಿಕ ಸಮಸ್ಯೆ ಇದೆ. ಬೆಳಗಾವಿ ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದೆ. ಎರಡು ದಿನದ ಹಿಂದೆ ವಾಪಸ್‌ ಆಗಿದ್ದೇನೆ. ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾಗೀರಥಿ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.