ADVERTISEMENT

ಪೊಲೀಸ್‌ ಧ್ವಜ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 14:41 IST
Last Updated 2 ಏಪ್ರಿಲ್ 2021, 14:41 IST
ಸಮಾರಂಭದಲ್ಲಿ ಗಣ್ಯರು ಪೊಲೀಸ್‌ ಧ್ವಜ ಬಿಡುಗಡೆ ಮಾಡಿದರು
ಸಮಾರಂಭದಲ್ಲಿ ಗಣ್ಯರು ಪೊಲೀಸ್‌ ಧ್ವಜ ಬಿಡುಗಡೆ ಮಾಡಿದರು   

ಚಾಮರಾಜನಗರ: ಜಿಲ್ಲಾ ಪೊಲೀಸ್‌ ಇಲಾಖೆಯು ಶುಕ್ರವಾರ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಧ್ವಜ ದಿನಾಚರಣೆ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸಬ್‌ ಇನ್‌ಸ್ಪೆಕ್ಟರ್‌ಸಿ.ವೀರಭದ್ರಪ್ಪ ಅವರು ಮಾತನಾಡಿ, ‘ಪೊಲೀಸರು ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲಿ ಧ್ವಜ ಇರುತ್ತದೆ. ಪೊಲೀಸ್ ಧ್ವಜದ ಗೌರವ ಎತ್ತಿ ಹಿಡಿಯುವುದು ಪೊಲೀಸರ ಕರ್ತವ್ಯ’ ಎಂದರು.

‘ಸಮಾಜದಲ್ಲಿ ಶಾಂತಿ ಕಾಪಾಡುವುದರಲ್ಲಿ ಪೊಲೀಸರ ಪಾತ್ರ ಬಹಳ ಮಹತ್ವದ್ದು. ಬೇರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆ ಬಹಳ ಉತ್ತಮ ಇಲಾಖೆಯಾಗಿದೆ. ಪೊಲೀಸರು ಇಲ್ಲದಿದ್ದರೆ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ. ಪೊಲೀಸರು ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಗೌರವ ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಜ್ಞಾನ ಗಳಿಸಬೇಕು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಬೋಯರ್‌ ನಾರಾಯಣರಾವ್‌ ಅವರು ಮಾತನಾಡಿ, ‘ಪೊಲೀಸರದ್ದು ಬಹಳ ಕಠಿಣ ಕೆಲಸ.ಸೈಬರ್ ಅಪರಾಧ ಸೇರಿದಂತೆ ಇನ್ನಿತರ ಅಪರಾಧಗಳು ಹೆಚ್ಚಾಗಿ ನಡೆಯದಂತೆ ಕ್ರಮ ವಹಿಸಬೇಕು. ಪೊಲೀಸರ ಜ್ಞಾನ ಯಾವಾಗಲೂ ಹೆಚ್ಚಾಗುತ್ತಿರಬೇಕು’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಿ.ವೀರಭದ್ರಪ್ಪ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಇದಕ್ಕೂ ಮೊದಲು, ವೀರಭದ್ರಪ್ಪ ಅವರು ಪೊಲೀಸ್ ತುಕಡಿಗಳಿಂದ ವಂದನೆ ಸ್ವೀಕರಿಸಿದರು‌. ನಂತರ ಪಥ ಸಂಚಲನ ನಡೆಯಿತು. ಆ ಬಳಿಕ ಧ್ವಜಗಳ ವಿತರಣೆ ಮಾಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.