
ಚಾಮರಾಜನಗರ: ‘ಸಮಾಜದ ಶಾಂತಿ ಸುವ್ಯವಸ್ಥೆಯ ಜವಾಬ್ದಾರಿ ನಿಭಾಯಿಸುವ ಪೊಲೀಸರು ವೈಯಕ್ತಿಕ ಜೀವನ ಹಾಗೂ ಆಸಕ್ತಿಗಳ ಕಡೆಗೂ ಗಮನ ಹರಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸಲಹೆ ನೀಡಿದರು.
ನಗರದ ಡಿ.ಎ.ಆರ್ ಕೇಂದ್ರ ಸ್ಥಾನದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಮೂರು ದಿನಗಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸರು ಅತಿಯಾದ ಕಾರ್ಯದ ಒತ್ತಡದ ಮಧ್ಯೆ ಕುಟುಂಬದ ಕಾಳಜಿ ವಹಿಸಲು ಹೆಚ್ಚಿನ ಸಮಯ ದೊರೆಯುವುದಿಲ್ಲ. ವೈಯಕ್ತಿಕ ಆರೋಗ್ಯದ ಬಗ್ಗೆಯೂ ಕಾಳಜಿ ಮಾಡಲಾಗುವುದಿಲ್ಲ ಎಂದರು.
ಸಮಾಜದಿಂದ ಪ್ರತಿಫಲಾಪೇಕ್ಷೆ ಬಯಸದೆ ಕಾರ್ಯ ನಿರ್ವಹಿಸುವ ಪೊಲೀಸರು ಮನಸ್ಸನ್ನು ಹಗುರಗೊಳಿಸುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವೃತ್ತಿ ಒತ್ತಡ ಕಡಿಮೆ ಮಾಡಿಕೊಳ್ಳಬೇಕು, ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕು. ಪೊಲೀಸರು ಕ್ರೀಡೆಗಳಲ್ಲಿ ವಿಭಾಗ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆಯ ‘ಆಪ್ತಗೆಳತಿ’ ಕಾರ್ಯಕ್ರಮ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಕಿವಿಯಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಹಿಳೆಯರ ದುಃಖ ದುಮ್ಮಾನಗಳಿಗೆ ಸ್ಪಂದನೆ ದೊರೆಯುತ್ತಿದೆ. ಮಹಿಳಾಪರವಾದ ಕಾರ್ಯಕ್ರಮಗಳು ಹೆಚ್ಚು ಅನುಷ್ಠಾನವಾಗಲಿ ಎಂದು ಆಶಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ಸದಾ ಜಿಲ್ಲಾಡಳಿತೊಂದಿಗೆ ಸಹಕರಿಸುತ್ತಾ ಬಂದಿದೆ. ಈಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಜಿಲ್ಲೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಪೊಲೀಸ್ ಇಲಾಖೆಯ ಶ್ರಮ ಇದೆ ಎಂದು ಜಿಲ್ಲಾಧಿಕಾರಿ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್ ತಂಡಗಳಿಂದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಗೌರವ ವಂದನೆ ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಿ.ಎಸ್.ಶೃತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.