ADVERTISEMENT

ಸಂತೇಮರಹಳ್ಳಿ: ಪೂರ್ಣಗೊಳ್ಳದ ವಸತಿಗೃಹ, ಪೊಲೀಸರ ಪಡಿಪಾಟಲು

ಸಂತೇಮರಹಳ್ಳಿ: ಎರಡು ವರ್ಷಗಳ ಹಿಂದೆ ಕಾಮಗಾರಿಗೆ ಚಾಲನೆ, 10 ತಿಂಗಳ ಹಿಂದೆ ಕೆಲಸ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 20:30 IST
Last Updated 4 ನವೆಂಬರ್ 2020, 20:30 IST
ಸಂತೇಮರಹಳ್ಳಿಯಲ್ಲಿ ಅಪೂರ್ಣವಾಗಿರುವ ಪೊಲೀಸ್‌ ವಸತಿಗೃಹದ ಕಟ್ಟಡ
ಸಂತೇಮರಹಳ್ಳಿಯಲ್ಲಿ ಅಪೂರ್ಣವಾಗಿರುವ ಪೊಲೀಸ್‌ ವಸತಿಗೃಹದ ಕಟ್ಟಡ   

ಸಂತೇಮರಹಳ್ಳಿ: ಹೋಬಳಿ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಪೊಲೀಸ್ ವಸತಿ ಗೃಹಗಳ ಕಾಮಗಾರಿ 10 ತಿಂಗಳ ಹಿಂದೆ ಸ್ಥಗಿತಗೊಂಡಿದ್ದು, ಪೊಲೀಸ್‌ ಸಿಬ್ಬಂದಿ ವಾಸಕ್ಕೆ ಮನೆಗಳಿಲ್ಲದೇ, ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲು ಎರಡು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಆದರೆ, ನೂತನ ವಸತಿ ಗೃಹಗಳಲ್ಲಿ ವಾಸಿಸುವ ಭಾಗ್ಯ ಸಿಬ್ಬಂದಿಗೆ ಕೂಡಿ ಬಂದಿಲ್ಲ. ಇದೇ ಸ್ಥಳದಲ್ಲಿ ಆರು ಪೊಲೀಸ್ ವಸತಿ ಗೃಹಗಳಿದ್ದವು. ಅವುಗಳನ್ನು ಕೆಡವಿ, ₹ 84 ಲಕ್ಷ ವೆಚ್ಚದಲ್ಲಿ ಹೊಸ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು.

ಎರಡು ವರ್ಷ ಕಳೆದರೂಕಟ್ಟಡದ ಕಾಮಗಾರಿ ಮೇಲ್ಛಾವಣಿ ನಿರ್ಮಾಣದವರೆಗೆ ಮಾತ್ರ ನಡೆದಿದೆ. 10 ತಿಂಗಳಿಂದ ಕಾಮಗಾರಿ ನಡೆಯುತ್ತಿಲ್ಲ. ಇದರಿಂದ ಅಪೂರ್ಣಗೊಂಡಿರುವ ಪೊಲೀಸ್ ವಸತಿ ಗೃಹ ಪಾಳು ಕಟ್ಟಡದಂತೆ ಕಾಣುತ್ತಿದೆ. ಸುತ್ತಲೂ ಗಿಡಗಳು, ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಬಿಡಾಡಿ ದನಗಳು ಹಾಗೂ ನಾಯಿಗಳ ಆಶ್ರಯ ತಾಣವಾಗಿದೆ. ಹಾವು ಚೇಳುಗಳ ವಾಸ ಸ್ಥಾನವಾಗಿದೆ.

ಸಂತೇಮರಹಳ್ಳಿಯ ಪೊಲೀಸ್ ಠಾಣೆಯಲ್ಲಿ ಇಬ್ಬರು ಪಿಎಸ್‍ಐ (ಪ್ರೊಬೇಷನರಿ ಒಬ್ಬರು ಸೇರಿ), ನಾಲ್ವರು ಎಎಸ್‍ಐ, ಎಂಟು ಮಂದಿ ಹೆಡ್‌ ಕಾನ್‌ಸ್ಟೆಬಲ್‌, ಮಹಿಳಾ ಕಾನ್‌ಸ್ಟೆಬಲ್‌, 18 ಮಂದಿ ಕಾನ್‌ಸ್ಟೆಬಲ್‌ ಸೇರಿದಂತೆ 30 ಮಂದಿ ಸಿಬ್ಬಂದಿ ಇದ್ದಾರೆ. ಸದ್ಯ, ಇವರಿಗೆ ಕೇಂದ್ರ ಸ್ಥಾನದಲ್ಲಿ ಉಳಿದುಕೊಳ್ಳಲು ವಸತಿ ಗೃಹಗಳಿಲ್ಲ. ಜಿಲ್ಲಾ ಕೇಂದ್ರ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಮೈಸೂರು ಹಾಗೂ ನಂಜನಗೂಡು ಸೇರಿದಂತೆ ವಿವಿಧ ಪಟ್ಟಣಗಳಿಂದ ಪ್ರತಿದಿನ ಅಲೆದಾಡಬೇಕಾಗಿದೆ.

ADVERTISEMENT

ದಿನದ 24 ಗಂಟೆ ಯಾವ ಸಮಯದಲ್ಲಾದರೂ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪಟ್ಟಣ ಪ್ರದೇಶಗಳಿಂದ ಕರ್ತವ್ಯಕ್ಕೆ ಹಾಜರಾಗಲು ಬಸ್‍ಗಳ ಸಮಸ್ಯೆ ಕಾಡುತ್ತದೆ. ಸ್ಥಳೀಯವಾಗಿ ಉಳಿದುಕೊಳ್ಳಲು ಬಾಡಿಗೆ ಮನೆಗಳ ಸಮಸ್ಯೆ ಎದುರಾಗಿದೆ.

ಕೋವಿಡ್ ಕಾರಣದಿಂದ 10 ತಿಂಗಳಿನಿಂದ ಬರಬೇಕಾಗಿದ್ದ ಅನುದಾನ ಬಂದಿಲ್ಲ. ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಉಳಿಕೆ ಅನುದಾನ ಬಿಡುಗಡೆಯಾಗುವ ಹಂತದಲ್ಲಿದೆ. ಮುಂದಿನ ವಾರದಿಂದ ಕಟ್ಟಡದ ಕಾಮಗಾರಿ ಆರಂಭಿಸಿ ಆದಷ್ಟು ಬೇಗ ವಸತಿ ಗೃಹಗಳನ್ನು ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆ ಪಡೆದಿರುವ ಕಂಪನಿಯ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು, ‘ರಾಜ್ಯದ ಎಲ್ಲ ಕಡೆಗಳಲ್ಲಿ ಈ ಸಮಸ್ಯೆ ಆಗಿದೆ. ತಾಂತ್ರಿಕ ಕಾರಣದಿಂದ ಅನುದಾನ ಬಿಡುಗಡೆಗೆ ವಿಳಂವಾಗಿದೆ. ಇತ್ತೀಚೆಗೆ ಈ ಬಗ್ಗೆ ಸಭೆ ನಡೆದಿದ್ದು, ಸಮಸ್ಯೆ ಬಗೆಹರಿದಿದೆ. ಶೀಘ್ರದಲ್ಲಿ ವಸತಿಗೃಹಗಳ ಕಾಮಗಾರಿ ಆರಂಭವಾಗಲಿದೆ’ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.