ADVERTISEMENT

ಶುದ್ಧ ಗಾಳಿ, ನೀರು ಪೂರೈಕೆ ಮಂಡಳಿ ಗುರಿ: ಪಿ.ಎಂ.ನರೇಂದ್ರಸ್ವಾಮಿ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:17 IST
Last Updated 28 ಅಕ್ಟೋಬರ್ 2025, 4:17 IST
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು   

ಚಾಮರಾಜನಗರ: ‘ಪ್ರತಿಯೊಬ್ಬರಿಗೂ ಶುದ್ಧ ಗಾಳಿ, ನೀರು ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ನೀಡುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಗುರಿ’ ಎಂದು ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯ ಸ್ವರೂಪ ಸಂಪೂರ್ಣವಾಗಿ ಬದಲಾಗಿದೆ ಎಂದರು.

‘ಪ್ರಯೋಗಾಲಯಗಳಲ್ಲಿ ನೀರು, ಗಾಳಿಯ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತಿದೆ. ನದಿಗಳು ಎಷ್ಟು ಕಲುಷಿತಗೊಂಡಿವೆ ಎಂಬ ಪರೀಕ್ಷೆ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಕಪಿಲಾ ನದಿಗಳ ನೀರಿನ ಗುಣಮಟ್ಟವೂ ಪರೀಕ್ಷೆಗೊಳಪಡುತ್ತಿದೆ. ಭವಿಷ್ಯ ಉಳಿಯಬೇಕು ಎಂದರೆ ಪರಿಸರ, ಅರಣ್ಯ ಉಳಿಯಬೇಕು, ಪರಿಶುದ್ಧ ಗಾಳಿ ಮತ್ತು ನೀರು ಸಿಗುವಂತಾಗಬೇಕು’ ಎಂದು ತಿಳಿಸಿದರು.

ADVERTISEMENT

‘ಕೋವಿಡ್ ಕಾಲಘಟ್ಟದಲ್ಲಿ ಆಮ್ಲಜನಕ ಕೊರತೆಯಿಂದ ಸಾವಿರಾರು ಮಂದಿ ಮೃತಪಟ್ಟಿದ್ದು, ಇದರಿಂದ ನಾವೆಲ್ಲರೂ ಶುದ್ಧಗಾಳಿಯ ಮಹತ್ವದ ಪಾಠ ಕಲಿಯಬೇಕು. ಮರಗಿಡಗಳನ್ನು ಪೋಷಿಸಿ ಆಮ್ಲಜನಕ ಕಾಪಾಡಿಕೊಳ್ಳಬೇಕು. ಭೂಮಿ ಕಲುಷಿತವಾಗದಂತೆ, ಅಂತರ್ಜಲಕ್ಕೆ ವಿಷಕಾರಿ ರಾಸಾಯನಿಕ ಸೇರದಂತೆ ಎಚ್ಚರವಹಿಸಬೇಕು’ ಎಂದರು.

‘ಚಾಮರಾಜನಗರ ಜಿಲ್ಲೆ ನೈಸರ್ಗಿಕವಾಗಿ ಶ್ರೀಮಂತವಾಗಿದ್ದು, ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ವಲಯ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮಗಳನ್ನು ಒಳಗೊಂಡಿದೆ. ಅಮೂಲ್ಯ ಕಾನನಗಳ ಸಂರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ. ಜಿಲ್ಲೆಯಲ್ಲಿರುವ ಕೈಗಾರಿಕೆ ಹಾಗೂ ರೆಸಾರ್ಟ್‌ಗಳಿಂದ ಹೊರಬರುತ್ತಿರುವ ತ್ಯಾಜ್ಯದಿಂದ ಪರಿಸಕ್ಕೆ ಹಾನಿಯಾಗುತ್ತಿರುವ ದೂರುಗಳಿದ್ದು, ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನದಿ, ಪರಿಸರ ಮಾಲಿನ್ಯಕ್ಕೆ ಮನುಷ್ಯನೇ ಕಾರಣನಾಗಿದ್ದು ಶುದ್ದ ಗಾಳಿ, ನೀರು ಸೇವನೆಗೆ ಪರಿಸರ ಸಂರಕ್ಷಣೆ ಅನಿವಾರ್ಯವಾಗಿದೆ. ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ ಪೋಷಿಸಬೇಕು ಎಂದರು.

ಇದೇವೇಳೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಏಟ್ರಿ ಸಂಸ್ಥೆಯ ಡಾ.ಸಿದ್ದಪ್ಪ ಶೆಟ್ಟಿ, ಕೊಳ್ಳೇಗಾಲದ ರಂಗಜೋಳಿಗೆ ಸಂಸ್ಥಾಪಕ ಮುಡಿಗುಂಡ ಜಿ.ಮೂರ್ತಿ, ಇಕೋ ವೈಲ್ಡ್ ಫೌಂಡೇಶನ್ ಸಂಸ್ಥೆಯ ಭರತ್ ಮಹದೇವ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪೌರಕಾರ್ಮಿಕರದ ವರದರಾಜು, ಕಮಲಮ್ಮ, ರಾಜು, ಜಗನ್ನಾಥ್, ಮೂರ್ತಿಕುಮಾರ್, ರಾಧಾ, ನಾಗಮ್ಮ, ರಂಗಸ್ವಾಮಿ, ರಾಮಿ, ಸೋಮ ಅವರನ್ನು ಸನ್ಮಾನಿಸಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ತನುಷ್ಕಾ, ಚೇತನ್ ಗೌಡ, ಸೆರುಸಿನ್ ಜಾನ್, ಮಹಾಲಕ್ಷ್ಮಿ, ಅಮುದಾ, ರೋಹಿತ್, ಆಶಾ ಎ, ತನ್ಮಯ್ ಶ್ರೀಕಾಂತ್, ಚೆರೀಶ್ ಎಂ, ಅನುಷಾ ಸಿ.ಎಂ, ಆಯೇಷಾ ಅವರನ್ನು ಗೌರವಿಸಲಾಯಿತು.

ನಗರಸಭೆ ಅಧ್ಯಕ್ಷ ಎಸ್.ಸುರೇಶ್, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಚಂದ್ರಶೇಖರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಸ್.ಲಿಂಗರಾಜು, ಜಿಲ್ಲಾ ಪರಿಸರ ಅಧಿಕಾರಿ ಕೆ.ಎಲ್.ಸವಿತಾ ಇದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು

ರೀಲ್ಸ್ ಮಾಡಿದವರಿಗೆ

ನಗದು ಪುರಸ್ಕಾರ ಪರಿಸರ ರಕ್ಷಣೆಯ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ರೀಲ್ಸ್‌ ಮಾಡುವವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗದು ಪುರಸ್ಕಾರ ನೀಡಲಾಗುವುದು. ಜಿಲ್ಲಾವಾರು ವಿಜೇತರನ್ನು ಆಯ್ಕೆಮಾಡಿ ಮೊದಲ ಬಹುಮಾನವಾಗಿ ₹ 50.000 ದ್ವಿತೀಯ ₹ 25000 ತೃತೀಯ ₹ 15000 ನೀಡಲಾಗುವುದು.  

ಕಾವೇರಿ ಕಲುಷಿತ: ಆತಂಕ

ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರಿನಿಂದ ಸತ್ತೇಗಾಲದವರೆಗೂ ಹರಿಯುವ ಕಾವೇರಿ ನದಿಪಾತ್ರ ಕಲುಷಿತಗೊಂಡಿರುವುದಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಘೋಷಿಸಿದೆ. ‘ಈ ಭಾಗದಲ್ಲಿ ಕೃಷಿಗೆ ಬಳಕೆಯಾಗುತ್ತಿರುವ ರಾಸಾಯನಿಕ ನೇರವಾಗಿ ನದಿಗೆ ಹರಿಯುತ್ತಿದೆ. ನಗರಸಭೆ ಪುರಸಭೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪತ್ತಿಯಾಗುವ ದ್ರವ ತ್ಯಾಜ್ಯ ಸಂಸ್ಕರಿಸದೆ ನೇರವಾಗಿ ನದಿಗೆ ಹರಿಯಬಿಡಲಾಗುತ್ತಿದ್ದು ಕಾವೇರಿ ಮಲಿನಗೊಳ್ಳುತ್ತಿದೆ. ಜನರ ಜೀವಕ್ಕೆ ಕುತ್ತು ಎದುರಾಗುವ ಆತಂಕ ಎದುರಾಗಿದೆ. ಸ್ಥಳೀಯ ಆಡಳಿತಗಳು ತ್ಯಾಜ್ಯವನ್ನು ಸಂಸ್ಕರಿಸದೆ ಕಾವೇರಿ ನದಿಗೆ ಬಿಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ವೈದ್ಯಕೀಯ ತ್ಯಾಜ್ಯ ನದಿಯ ಮೂಲ ಸೇರದಂತೆ ಎಚ್ಚರವಹಿಸಬೇಕು ಎಸ್‌ಟಿಪಿಗಳ ಕಾರ್ಯ ನಿರ್ವಹಣೆ ಮೇಲೆ ನಿಗಾ ಇರಿಸಬೇಕು ಪ್ಲಾಸ್ಟಿಕ್ ಬದಲಾಗಿ ಬಟ್ಟೆಯ ಬ್ಯಾಗ್ ಬಳಕೆಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.