ADVERTISEMENT

ಕೊಳ್ಳೇಗಾಲ | ವಾಡಿಕೆಗಿಂತ ಹೆಚ್ಚು ಮಳೆ ಬಂದರೂ ತುಂಬದ ಕೆರೆಗಳು

ನಾಲೆಗಳಲ್ಲಿ ಇನ್ನೂ ಹರಿಯದ ನೀರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 20:15 IST
Last Updated 27 ಆಗಸ್ಟ್ 2020, 20:15 IST
ನೀರಿಲ್ಲದೇ ಒಣಗುತ್ತಿರುವ ಪಾಪನಕೆರೆ
ನೀರಿಲ್ಲದೇ ಒಣಗುತ್ತಿರುವ ಪಾಪನಕೆರೆ   

ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದರೂ, ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿಲ್ಲ. ಕೆಲವು ಕೆರೆಗಳು ಈಗಲೂ ಒಣಗುತ್ತಿವೆ.

ತಾಲ್ಲೂಕಿನಲ್ಲಿರುವ ಕಾವೇರಿ ನದಿ ಪಾತ್ರದ ಗ್ರಾಮಗಳು ಇತ್ತೀಚೆಗೆ ಪ್ರವಾಹ ಭೀತಿಯಿಂದ ಪಾರಾಗಿವೆ. ಆದರೆ, ಕಾವೇರಿ ನದಿಯಲ್ಲಿ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಜಲಾಶಯಗಳು ಭರ್ತಿಯಾಗಿ, ಜಲಪಾತಗಳು ಭೋರ್ಗರೆಯುತ್ತಿದ್ದರೂ, ಹೂಳು ತುಂಬಿರುವ ಕೆರೆಕಟ್ಟೆಗಳು ಒಣಗುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಈ ವರ್ಷ ಹೆಚ್ಚು ಮಳೆಯಾಗಿದೆ. ಜನವರಿ 1ರಿಂದ ಆಗಸ್ಟ್‌ 23ರವರೆಗೆ 50.2 ಸೆಂ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 37.5 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ ಶೇ 37ರಷ್ಟು ಹೆಚ್ಚು ಮಳೆ ಬಿದ್ದಿದೆ.

ADVERTISEMENT

ನೈಋತ್ಯ ಮುಂಗಾರಿನ ಜೂನ್‌ 1ರಿಂದ ಆಗಸ್ಟ್‌ 23ರ ಅವಧಿಯಲ್ಲಿ ತಾಲ್ಲೂಕಿನಲ್ಲಿ 19.3 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 28 ಸೆಂ.ಮೀ ಮಳೆಯಾಗಿದೆ. ಶೇ 45ರಷ್ಟು ಹೆಚ್ಚು ಮಳೆ ಸುರಿದಿದೆ.

‘ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗಿದೆ. ಜಲಾಯಶಗಳು ಭರ್ತಿಯಾಗಿ ಕೆಲವು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಿದ್ದರೂ, ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ, ಕೆರೆಗಳು ತುಂಬಿಲ್ಲ. ಇದರಿಂದ ಕೃಷಿಕರಿಗೆ ತೊಂದರೆಯಾಗಲಿದೆ. ರೈತರು ಮುಂದಿನ ದಿನಗಳಲ್ಲಿ ನೀರಿಗೆ ಕಷ್ಟಪಡಬೇಕಾದ ಸನ್ನಿವೇಶ ಎದುರಾಗುತ್ತದೆ’ ಎಂದು ರೈತ ಶೈಲೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲೆಗಳು ಹಾಗೂ ಕೆರೆಗಳು ಹೂಳಿನ ಸಮಸ್ಯೆಯನ್ನು ಎದುರಿಸುತ್ತಿವೆ. ಹೂಳು ತೆಗೆಯಲು ಆಡಳಿತ ಕ್ರಮತೆಗೆದುಕೊಂಡಿಲ್ಲ ಎಂಬುದು ರೈತರ ದೂರು. ಕೆಲವು ಕೆರೆಗಳ ಬದುಗಳು ಒಡೆದಿವೆ. ದುರಸ್ತಿ ಮಾಡಿಲ್ಲ. ಪಾಪನಕೆರೆ, ಕೆಂಚನಕೆರೆ, ದೊಡ್ಡರಂಗನಾಥನ ಕೆರೆ, ಕೃಷ್ಣಯ್ಯನಕಟ್ಟೆ, ಸರಗೂರು ಕೆರೆ ಸೇರಿದಂತೆ ಅನೇಕ ಕೆರೆಗಳಿಗೆ ನೀರು ತುಂಬಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಫಲವಾಗಿದ್ದಾರೆ’ ಎಂದು ರೈತ ಗೌಡೇಗೌಡ ಹೇಳುತ್ತಾರೆ.

‘ಕೆರೆ ನೀರನ್ನೇ ನಂಬಿ ಕೃಷಿ ಮಾಡುತ್ತಿದ್ದೇವೆ. ಅವುಗಳು ತುಂಬದೇ ಇದ್ದರೆ, ವ್ಯವಸಾಯ ನಡೆಸಲು ಸಾಧ್ಯವಾಗುವುದಿಲ್ಲ. ಜೀವನ ನಡೆಸುವುದು ಕಷ್ಟವಾಗುತ್ತದೆ’ ಎಂದು ಮತ್ತೊಬ್ಬ ರೈತ ರವಿ ಅವರು ಅಳಲು ತೋಡಿಕೊಂಡರು.

ನಾಲೆಗಳನ್ನು ಸರಿಪಡಿಸಿ: ತಾಲ್ಲೂಕಿನಾದ್ಯಂತ ನಾಲೆಗಳ ಮೂಲಕ ಕೆರೆಗಳಿಗೆ ನೀರು ಬಿಡಲಾಗುತ್ತದೆ. ಆದರೆ ಕೆಲವು ನಾಲೆಗಳನ್ನು ಸರಿಯಾಗಿ ಸ್ವಚ್ಛಗೊಳಿಸಿಲ್ಲ. ಕೆಲವು ಕಡೆಗಳಲ್ಲಿ ಕಳೆಗಿಡಗಳು ಬೆಳೆದು ನಿಂತಿದ್ದು, ನೀರಿನ ಹರಿಯುವಿಕೆಗೆ ಅಡ್ಡಿಯುಂಟು ಮಾಡುತ್ತಿವೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂಬುದು ರೈತರ ಒತ್ತಾಯ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ರಾಮಕೃಷ್ಣ ಅವರು, ‘ನಾಲೆಗೆ ನೀರು ಹರಿಸಲಾಗಿದೆ. ಹಾಳಾಗಿದ್ದ ನಾಲೆಗಳನ್ನು ದುರಸ್ತಿ ಮಾಡಲಾಗಿದೆ. ವಾರದೊಳಗೆ ಕೆರೆಗಳಿಗೆ ನೀರು ಹರಿಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.