ಹನೂರು: ಪಟ್ಟಣದಿಂದ ಲೊಕ್ಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚಿಸುವಂತೆ ಪಟ್ಟಣದ ಗೌತಮ್ ಶಾಲೆ ವಿದ್ಯಾರ್ಥಿಗಳು ಒತ್ತಾಯಿಸಿದರು.
ಶಾಲಾ ಮುಂಭಾಗದಲ್ಲಿ ಗುಂಡಿ ಬಿದ್ದು ಕೆಸರು ಗದ್ದೆಯಂತಿರುವ ರಸ್ತೆ ಮಧ್ಯ ನಿಂತು ಮಾತನಾಡಿದ ವಿದ್ಯಾರ್ಥಿಗಳು, ‘ನಮ್ಮ ಶಾಲೆ ಹನೂರಿನಿಂದ ಲೋಕ್ಕನಹಳ್ಳಿ ಮಾರ್ಗವಾಗಿ ತಮಿಳುನಾಡಿಗೆ ತೆರಳುವ ಅಂತರರಾಜ್ಯ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆಯನ್ನು ದುರಸ್ತಿಪಡಿಸದ ಹಿನ್ನೆಲೆಯಲ್ಲಿ ವರ್ಷಗಳಿಂದಲೂ ಆಳವಾದ ಗುಂಡಿಗಳು ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಕೇಸರು ರಾಡಿ ನೀರು ದಾಟಿ ಶಾಲೆಗೆ ತೆರಳಿ ಮರಳಬೇಕು. ಬೇಸಿಗೆಯಲ್ಲಿ ದೂಳು ಮತ್ತು ಮಣ್ಣಿನ ನಡುವೆ ಹೋಗಿ ಬರಬೇಕಾಗಿದೆ. ರಸ್ತೆ ದುರಸ್ಥಿಪಡಿಸಿಕೊಡಬೇಕೆಂದು ಸಂಬಂಧಪಟ್ಟವರಿಗೆ ದೂರನ್ನು ನೀಡಿದ್ದರು ಪ್ರಯೋಜನವಿಲ್ಲ. ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿ ಮಾಡಿಸದೆ ಇದ್ದರೆ ವಾಹನಗಳನ್ನು ತಡೆದು ಇದೇ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪಟ್ಟಣದ ಅಂಬೇಡ್ಕರ್ ಸರ್ಕಲ್ ಮೂಲಕ ಹಾದು ಹೋಗುವ ರಸ್ತೆಯ ಸಮೀಪವೇ ಗೌತಮ್ ಶಾಲೆ ಇದೆ. ಇದೇ ಮಾರ್ಗವಾಗಿ ಉದ್ದನೂರು ಬೆಳತ್ತೂರು, ಮಹಾಲಿಂಗನ ಕಟ್ಟೆ, ಚಿಕ್ಕಮಾಲಾಪುರ ಲೋಕ್ಕನಹಳ್ಳಿ ಸೇರಿದಂತೆ ಹತ್ತು ಹಲವು ಗ್ರಾಮಗಳು ಸೇರಿದಂತೆ ನೆರೆಯ ತಮಿಳುನಾಡಿಗೂ ಸಂಪರ್ಕ ಕಲ್ಪಿಸುವ ಅಂತರ ರಾಜ್ಯ ರಸ್ತೆ ಇದಾಗಿದೆ. ಗುಂಡಿ ಬಿದ್ದ ರಸ್ತೆಯನ್ನು ಕನಿಷ್ಠ 200 ಮೀಟರ್ ದುರಸ್ತಿಗೊಳಿಸಿದರೂ ಇಲ್ಲಿನ ನಿವಾಸಿಗಳು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.