ಚಾಮರಾಜನಗರ: ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಸಹಕಾರ ಕುಕ್ಕುಟ ಮಹಾಮಂಡಳದ ವತಿಯಿಂದ ನಗರದ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ 121 ಫಲಾನುಭವಿಗಳಿಗೆ ಕೋಳಿಮರಿ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಗಿರಿರಾಜ ತಳಿಯ ಕೋಳಿಮರಿಗಳನ್ನು ಪಡೆದಿರುವ ಫಲಾನುಭವಿಗಳು ಕೃಷಿ, ಹೈನುಗಾರಿಕೆಯ ಜೊತೆಗೆ ಉಪ ಆದಾಯ ಪಡೆಯಬಹುದಾಗಿದ್ದು ಆರ್ಥಿಕ ಸಬಲೀಕರಣಕ್ಕೆ ನೆರವಾಗಲಿದೆ. ವಿಶೇಷವಾಗಿ ಮಹಿಳೆಯರು ಕಾರ್ಯಕ್ರಮದ ಸವಲತ್ತು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಹನುಮೇಗೌಡ ಮಾತನಾಡಿ, ‘ಈಚೆಗೆ ಕೃಷಿ ಆಧಾರಿತ ಕಸುಬುಗಳಲ್ಲಿ ಒಂದಾದ ಕೋಳಿ ಸಾಕಣೆಯ ಮೂಲಕವೂ ಹೆಚ್ಚು ಲಾಭಗಳಿಸಲು ಅವಕಾಶವಿದ್ದು ಆಸಕ್ತರು ಸದುಪಯೋಗ ಮಾಡಿಕೊಳ್ಳಬೇಕು. ಕೋಳಿಸಾಕಣೆದಾರರು ಮೊದಲ 5 ವಾರ ಮರಿಗಳನ್ನು ಜೋಪಾನವಾಗಿರಿಸಿ ಆರೋಗ್ಯದ ಬಗ್ಗೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.
ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೋಡಿಮೋಳೆ ಗೋವಿಂದಶೆಟ್ಟಿ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಜನಾರ್ದನ್, ವೈದ್ಯ ಮೂರ್ತಿ, ಮನೋಹರ್, ಮುಖಂಡ ಜೆ.ಬಿ.ಖಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.