
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಸುತ್ತಮುತ್ತ ನಾಟಿ ಕೋಳಿಗಳಿಗೆ ಪಶು ಇಲಾಖೆ ಸೋಮವಾರ ಚುಚ್ಚುಮದ್ದು ನೀಡುವ ಕಾರ್ಯಕ್ಕೆ ಚಾಲನೆ ನೀಡಿತು. ಇದರಿಂದ ನೂರಾರು ಕೋಳಿಗಳ ಸಾವಿನಿಂದ ಕಂಗೆಟ್ಟಿದ್ದ ಸಾಕಣೆದಾರರಲ್ಲಿ ಆತಂಕ ಕಡಿಮೆಯಾಗಿದೆ.
ಗ್ರಾಮೀಣ ಪ್ರದೇಶದ ಎಸ್‌ಸಿ–ಎಸ್‌ಟಿ ಸಮುದಾಯದವರ ಆದಾಯ ಹೆಚ್ಚಿಸಲು ಕುಕ್ಕುಟ ಅಭಿವೃದ್ಧಿ ನಿಗಮದಿಂದ ನೀಡಿದ್ದ ನೂರಾರು ಕೋಳಿಗಳು ಕೆಲ ದಿನಗಳಿಂದ ಸಾಯುತ್ತಿದ್ದು, ರೋಗ ಹರಡಿರುವ ಬಗ್ಗೆ ಸಾಕಣೆದಾರರು ದೂರಿದ್ದರು. ಈ ಬಗ್ಗೆ ಪಶು ತಜ್ಞರು ಸಾವಿಗೀಡಾಗಿದ್ದ ಕೋಳಿಗಳ ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಪಶು ವೈದ್ಯಾಧಿಕಾರಿ (ಆಡಳಿತ) ಡಾ.ಎಸ್.ಶಿವರಾಜ್ ಮಾತನಾಡಿ, ‘ಕೋಳಿಗಳಿಗೆ ಹರಡಿರುವ ರೋಗದ ಬಗ್ಗೆ ಇನ್ನಷ್ಟೇ ವರದಿ ಬರಬೇಕಿದೆ. ಸದ್ಯ ಕೋಳಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರೇಣಿಖೇಟ್ ಚುಚ್ಚುಮದ್ದು ನೀಡಲಾಗಿದೆ. ಬೇಸಿಗೆ ಸಮಯದಲ್ಲಿ ಕೋಳಿಗಳಿಗೆ ರೋಗ ಬಾಧೆ ಸಾಮಾನ್ಯವಾಗಿ ಕಂಡುಬರುತ್ತದೆ. ಸಾಕಣೆದಾರರು ರೋಗ ಪೀಡಿತ ಕೋಳಿಗಳನ್ನು ಮಾರಾಟ ಮಾಡಬಾರದು. ಸತ್ತ ಕೋಳಿಗಳನ್ನು ಸೇವಿಸಬಾರದು’ ಎಂದು ತಿಳಿಸಿದರು.
ಸಂಜೆ ತನಕ 50ಕ್ಕೂ ಹೆಚ್ಚು ಕೋಳಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಲಾಗಿದೆ. ಇವುಗಳಿಗೆ ಶುದ್ಧ ನೀರು ಮತ್ತು ಆಹಾರ ಪೂರೈಸಬೇಕು. ಕೋಳಿಗಳಿಗೆ ಮಂಕು ಕವಿದರೆ, ಓಡಾಟ ನಿಲ್ಲಿಸಿದರೆ ತಕ್ಷಣ ಮಾಹಿತಿ ನೀಡಬೇಕು ಎಂದು ಪಶು ಚಿಕಿತ್ಸಾಧಿಕಾರಿ ಶ್ರೀಕಾಂತ್ ಸಾಕಣೆದಾರರಿಗೆ ಮನವಿ ಮಾಡಿದರು.
ಗ್ರಾಮದಲ್ಲಿ ಕೋಳಿಗಳು ಸಾವಿಗೀಡಾದ ಬಗ್ಗೆ ಫೆ.21ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ‘ನಾಟಿ ಕೋಳಿಗಳ ಸಾವು: ಸಾಕಣೆದಾರರಲ್ಲಿ ಆತಂಕ’ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.