ADVERTISEMENT

ಬಹು ವರ್ಷಗಳ ಬೇಡಿಕೆ ಈಡೇರಿಕೆ; 88 ಪೌರಕಾರ್ಮಿಕರಿಗೆ ಹಕ್ಕುಪತ್ರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 18:54 IST
Last Updated 1 ಜುಲೈ 2022, 18:54 IST
ಪೌರಕಾರ್ಮಿಕರ ಕಾಲೊನಿಯಲ್ಲಿ ಇಕ್ಕಟ್ಟಾಗಿರುವ ಬೀದಿಯ ನೋಟ
ಪೌರಕಾರ್ಮಿಕರ ಕಾಲೊನಿಯಲ್ಲಿ ಇಕ್ಕಟ್ಟಾಗಿರುವ ಬೀದಿಯ ನೋಟ   

ಚಾಮರಾಜನಗರ: ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ.

ತಾವು ವಾಸಿಸುತ್ತಿದ್ದ ಸ್ಥಳಕ್ಕೆ ಸರಿಯಾದ ದಾಖಲೆಗಳಿಲ್ಲದೆ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೆ ಪರಿತಪಿಸುತ್ತಿದ್ದ 88 ಪೌರ ಕಾರ್ಮಿಕರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಹಕ್ಕುಪತ್ರ ವಿತರಿಸಲಿದ್ದಾರೆ.

ನಗರಸಭೆಯ 9ನೇ ವಾರ್ಡ್‌ನ ಪೌರಕಾರ್ಮಿಕರ ಕಾಲೊನಿಯಲ್ಲಿ ಕಿರಿದಾದ, ಇಕ್ಕಟ್ಟಾದ ಮನೆಗಳಲ್ಲಿ 88 ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳ 88 ಮಂದಿ ಗುತ್ತಿಗೆ ಆಧಾರದಲ್ಲಿ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ವಾಸಿಸುವ ಸ್ಥಳದ ಬಗ್ಗೆ ಇವರ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ, ಲಭ್ಯವಿರುವ ಜಾಗದಲ್ಲೇ ಹೊಸ ಮನೆ ಕಟ್ಟಲು ಇವರಿಗೆ ಸಾಧ್ಯವಾಗಿರಲಿಲ್ಲ. ದಾಖಲೆಗಳು ಇಲ್ಲದಿರುವುದರಿಂದ ಬ್ಯಾಂಕ್‌ ಸಾಲ ಸೇರಿದಂತೆ ಯಾವ ಸೌಲಭ್ಯಗಳೂ ಇವರಿಗೆ ಸಿಕ್ಕಿರಲಿಲ್ಲ.

ADVERTISEMENT

ಇಲ್ಲಿನ ವಾರ್ಡ್‌ ಸದಸ್ಯ ಎಂ.ಮಹೇಶ್‌ ಅವರ ಸತತ ಪ್ರಯತ್ನದಿಂದ ಈಗ ಪೌರಕಾರ್ಮಿಕರಿಗೆ ಹಕ್ಕುಪತ್ರ ಸಿಗುತ್ತಿದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಮನೆ ಮನೆ ಸಮೀಕ್ಷೆ ಮಾಡಿ 88 ಕುಟುಂಬಗಳ ಹಕ್ಕುಪತ್ರ ಸಿದ್ಧಪಡಿಸಿದೆ.

ಸತ್ಯಮಂಗಲ ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್‌ ಕಾಲೇಜಿನ ಮೈದಾನದಲ್ಲಿ ಶನಿವಾರ 12 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಸಚಿವ ವಿ.ಸೋಮಣ್ಣ ಹಕ್ಕುಪತ್ರ ವಿತರಿಸಲಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ಡ್‌ ಸದಸ್ಯ ಎಂ.ಮಹೇಶ್‌, ‘ಅನೇಕ ವರ್ಷಗಳಿಂದ ವಾಸವಾಗಿರುವ ಪೌರಕಾರ್ಮಿಕರ ಕುಟುಂಬಗಳಿಗೆ ಮನೆಯ ಹಕ್ಕುಪತ್ರ ಇಲ್ಲದಿರುವುದರಿಂದ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಆಗುತ್ತಿರಲಿಲ್ಲ. ಈಗ ಹಕ್ಕುಪತ್ರ ದೊರಕುತ್ತಿದೆ. ನನ್ನ ಅವಧಿಯಲ್ಲಿ ಈ ಕೆಲಸ ಆಗುತ್ತಿರುವುದು ಖುಷಿಯ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.