ADVERTISEMENT

ಚಾಮರಾಜನಗರ: ಮೈಸೂರು ರಾಜರಿಗೆ ರಾಷ್ಟ್ರಪತಿ ಬಹುಪರಾಕ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 7:24 IST
Last Updated 8 ಅಕ್ಟೋಬರ್ 2021, 7:24 IST
ಚಾಮರಾಜನಗರದಲ್ಲಿ 450 ಹಾಸಿಗೆ ಸಾಮರ್ಥ್ಯದ ಬೋಧನಾ ಆಸ್ಪತ್ರೆ ಉದ್ಘಾಟನೆಗಾಗಿ ಗುರುವಾರ ಬಂದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸ್ವಾಗತಿಸಿದರು
ಚಾಮರಾಜನಗರದಲ್ಲಿ 450 ಹಾಸಿಗೆ ಸಾಮರ್ಥ್ಯದ ಬೋಧನಾ ಆಸ್ಪತ್ರೆ ಉದ್ಘಾಟನೆಗಾಗಿ ಗುರುವಾರ ಬಂದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸ್ವಾಗತಿಸಿದರು   

ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) 450 ಹಾಸಿಗೆ ಸಾಮರ್ಥ್ಯದ ಹೊಸ ಬೋಧನಾ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಮೈಸೂರು ರಾಜವಂಶಸ್ಥರ ಆಡಳಿತವನ್ನು, ಅದರಲ್ಲೂ ವಿಶೇಷವಾಗಿ ಜಯಚಾಮರಾಜೇಂದ್ರ ಒಡೆಯರ್‌ ಅವರ ಕೊಡುಗೆಗಳನ್ನು ಶ್ಲಾಘಿಸಿದರು.

‘ಯೋಚನೆ ಹಾಗೂ ಕ್ರಿಯೆಯಲ್ಲಿ ಸಾಕಷ್ಟು ಮುಂದೆ ಇದ್ದ ರಾಜರನ್ನು ಹೊಂದಿದ್ದ ಅದೃಷ್ಟ ಈ ಪ್ರಾಂತ್ಯದ್ದು. ಮಹಾರಾಜ ಚಾಮರಾಜ ಒಡೆಯರ್‌ ಸಮಾಜ ಸುಧಾರಕರಾಗಿದ್ದರು. 1881ರಲ್ಲೇ ಮೈಸೂರಿನಲ್ಲಿ ಬಾಲಕಿಯರಿಗಾಗಿ ಕನ್ನಡ ಮಾಧ್ಯಮ ಶಾಲೆ ತೆರೆದಿದ್ದರು. ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸುವಲ್ಲಿ ಅವರು ಪ‍್ರಮುಖ ಪಾತ್ರ ವಹಿಸಿದ್ದರು’ ಎಂದು ಕೋವಿಂದ್‌ ಸ್ಮರಿಸಿದರು.

‘ರಾಜ ವಂಶಸ್ಥರ ಪ್ರಗತಿಪರ ಪರಂಪರೆಯನ್ನು ಜಯಚಾಮರಾಜೇಂದ್ರ ಒಡೆಯರ್‌ ಮುಂದುವರೆಸಿದ್ದರು. ದೇಶದ ಸ್ವಾತಂತ್ರ್ಯ ನಂತರ ತಮ್ಮ ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಒಡೆಯರ್‌ ಮೊದಲಿಗರು. ನಾನು ಅವರನ್ನು ಒಬ್ಬ ರಾಜ ಮತ್ತು ಪ್ರಭುತ್ವವಾದಿ ಎಂದು ಕರೆಯಲು ಇಚ್ಛಿಸುತ್ತೇನೆ’ ಎಂದರು.

ADVERTISEMENT

‘ಮೈಸೂರಿನ ಸಿರಿವಂತ ಸಂಸ್ಕೃತಿಯನ್ನು ಪಾಶ್ಚಿಮಾತ್ಯದಲ್ಲಿದ್ದ ಅತ್ಯುತ್ತಮ ನಾಗರಿಕತೆಯೊಂದಿಗೆ ಬೆರೆಸಿದ್ದರು. ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಸಿರಿವಂತಗೊಳಿಸಿದ್ದರು. ಉದ್ಯಮಶೀಲತೆ ಮತ್ತು ಕೈಗಾರಿಕೆಗೆ ಉತ್ತಮ ಬೆಂಬಲವನ್ನೂ ನೀಡಿದ್ದರು. ಜನರ ಬೇಡಿಕೆ ಮೇರೆಗೆ ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಅವರನ್ನು ನೇಮಿಸಲಾಗಿತ್ತು’ ಎಂದು ರಾಷ್ಟ್ರಪತಿ ಕೊಂಡಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.