ADVERTISEMENT

ಪ್ರೊ.ಎಂ.ಡಿ.ಎನ್‌ ಜನ್ಮದಿನ: ಬಾರುಕೋಲು ಹಿಡಿದು ರೈತರ ಶಕ್ತಿ ಪ್ರದರ್ಶನ

ರೈತ ಸಮಾವೇಶ 19ರಂದು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:38 IST
Last Updated 11 ಫೆಬ್ರುವರಿ 2026, 7:38 IST
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ಜನ್ಮ ದಿನಾಚರಣೆ ಅಂಗವಾಗಿ ಫೆ.13ರಂದು ಹಮ್ಮಿಕೊಂಡಿರುವ ಸ್ವಾಭಿಮಾನದೆಡೆಗೆ ಹಸಿರು ಸೇನಾನಿಗಳ ಕಾಲ್ನಡಿಗೆ ಹಾಗೂ ಬೃಹತ್ ರೈತ ಸಮಾವೇಶದ ಪೂರ್ವಭಾವಿಯಾಗಿ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರ ಸಭೆ ನಡೆಯಿತು
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ಜನ್ಮ ದಿನಾಚರಣೆ ಅಂಗವಾಗಿ ಫೆ.13ರಂದು ಹಮ್ಮಿಕೊಂಡಿರುವ ಸ್ವಾಭಿಮಾನದೆಡೆಗೆ ಹಸಿರು ಸೇನಾನಿಗಳ ಕಾಲ್ನಡಿಗೆ ಹಾಗೂ ಬೃಹತ್ ರೈತ ಸಮಾವೇಶದ ಪೂರ್ವಭಾವಿಯಾಗಿ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರ ಸಭೆ ನಡೆಯಿತು   

ಚಾಮರಾಜನಗರ: ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ಜನ್ಮ ದಿನಾಚರಣೆ ಅಂಗವಾಗಿ ಫೆ.13ರಂದು ಸ್ವಾಭಿಮಾನದೆಡೆಗೆ ಹಸಿರು ಸೇನಾನಿಗಳ ಕಾಲ್ನಡಿಗೆ ಹಾಗೂ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ತಿಳಿಸಿದರು.

ಸಮಾವೇಶದ ಪೂರ್ವಭಾವಿಯಾಗಿ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಅಂದಿನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರೈತ ನಾಯಕರಾದ ರಾಕೇಶ್ ಟಿಕಾಯತ್‌, ಯದುವೀರ್ ಸಿಂಗ್, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕೈ ಪದ್ಮಶಾಲಿ, ಸಾಂಸ್ಕೃತಿಕ ಚಳವಳಿಗಾರರಾದ ಕೋಟಿಗಾನಹಳ್ಳಿ ರಾಮಯ್ಯ, ಪ್ರೊ.ಜಿ.ಎಸ್‌.ಜಯದೇವ್, ಪ್ರಸನ್ನ ಹೆಗ್ಗೋಡು, ಯಶವಂತ್, ‍ಪ್ರೊ.ರವಿವರ್ಮ ಕುಮಾರ್, ಅನಸೂಯಮ್ಮ, ಕೆ.ಟಿ.ಗಂಗಾಧರ್‌, ಚುಕ್ಕಿ ನಂಜುಂಡಸ್ವಾಮಿ, ಗ್ಯಾರಂಟಿ ರಾಮಣ್ಣ, ನಳಿನಿ ಕೋಲಾರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. 

ಸಮಾವೇಶದಲ್ಲಿ 5 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದು ಬಾರುಕೋಲು ಹಿಡಿದು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಹಲವು ತಂಡಗಳನ್ನು ರಚಿಸಲಾಗಿದೆ. ಎಪಿಎಂಸಿಯಿಂದ ಚಾಮರಾಜನಗರದವರೆಗೂ ಮೆರವಣಿಗೆ ನಡೆಸಿ ರೈತರ ಶಕ್ತಿ ಪ್ರದರ್ಶನ ಮಾಡಲಾಗುವುದು. ರೈತರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಜಿಲ್ಲೆಯ ಎಲ್ಲ ತಾಲ್ಲೂಕುಗಳ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಂಸದರಿಗೆ ಹಕ್ಕೊತ್ತಾಯ ಸಲ್ಲಿಕೆ ಮಾಡಲಾಗುವುದು ಎಂದು ಹೊನ್ನೂರು ಪ್ರಕಾಶ್ ತಿಳಿಸಿದರು.

ADVERTISEMENT

ಭಾರತ ಅಮೇರಿಕಾ ನಡೆವಿನ ವ್ಯಾಪಾರ ಒಪ್ಪಂದ ದೇಶದ ಕೃಷಿ ವಲಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ತಜ್ಞರು ವಿಚಾರ ಮಂಡಿಸಲಿದ್ದಾರೆ. ವಿಷಮುಕ್ತ ಆಹಾರ ಸೇವನೆ ಹಾಗೂ ಸಾವಯವ ಕೃಷಿಯ ಮಹತ್ವ ತಿಳಿಸಲಿದ್ದಾರೆ ಎಂದರು.

ಶೃಂಗಸಭೆಗೆ ಮುತ್ತಿಗೆ ಎಚ್ಚರಿಕೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಅಂತರ ರಾಷ್ಟ್ರೀಯ ಬಿಗ್ ಕ್ಯಾಟ್‌ ಅಲಯನ್ಸ್‌ ಶೃಂಗಸಭೆಗೆ ರೈತರಿಗೆ ಆಹ್ವಾನ ನೀಡದಿದ್ದರೆ ಫೆ.11ರಂಂದು ಶೃಂಗಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.

ಅರಣ್ಯದ ಖಾಸಗೀಕರಣದ ಭಾಗವಾಗಿ ಅಂತರರಾಷ್ಟ್ರೀಯ ಶೃಂಗಸಭೆಯ ಹೆಸರಿನಲ್ಲಿ ಕಾರ್ಯಾಗಾರಗಳು ನಡೆಯುತ್ತಿವೆ. ದೇಶದ ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ಸೂಕ್ಷ್ಮ ಮಾಹಿತಿಯನ್ನು ಹೊರ ದೇಶಗಳ ಪ್ರತಿನಿಧಿಗಳ ಜೊತೆಗೆ ಹಂಚಿಕೊಳ್ಳುವ ಅಗತ್ಯ ಇಲ್ಲ. ಬಜೆಟ್‌ನಲ್ಲಿ ಘೋಷಣೆಯಾಗಿ ಕೆಲವೇ ದಿನಗಳಲ್ಲಿ ನೂರಾರು ಕೋಟಿ ವ್ಯಯಿಸಿ ಶೃಂಗಸಭೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಬುಧವಾರ ರೈತರ ಜೊತೆಗೆ ಸಂವಾದ ಕಾರ್ಯಕ್ರಮ ನಡೆಸದಿದ್ದರೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.