ADVERTISEMENT

17ರಂದು ವಿಷ್ಣು ನೆನಪಿನೋತ್ಸವ

ರಾಜ್ಯ ಮಟ್ಟದ ವಿಷ್ಣುವರ್ಧನ್‌ ಚಲನಚಿತ್ರ ಗೀತೆ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 15:21 IST
Last Updated 14 ಫೆಬ್ರುವರಿ 2020, 15:21 IST
ಉಮ್ಮತ್ತೂರು ಇಂದುಶೇಖರ್‌
ಉಮ್ಮತ್ತೂರು ಇಂದುಶೇಖರ್‌   

ಚಾಮರಾಜನಗರ: ನಗರದ ಕನ್ನಡ ನೆಲ ಜಲ ಸಾಂಸ್ಕೃತಿಕ ಯುವ ವೇದಿಕೆಯು ಕನ್ನಡ ಚಿತ್ರರಂಗದ ಖ್ಯಾತ ನಟ, ದಿವಂಗತ ಸಾಹಸಸಿಂಹ ವಿಷ್ಣುವರ್ಧನ್‌ ಅವರ ಸ್ಮರಣಾರ್ಥ ವಿಷ್ಣು ನೆನಪಿನೋತ್ಸವ ಕಾರ್ಯಕ್ರಮವನ್ನು ಇದೇ 17ರಂದು ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ ವಿಷ್ಣು ರಸಮಂಜರಿ ಕಾರ್ಯಕ್ರಮವೂ ನಡೆಯಲಿದೆ.

ವೇದಿಕೆ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ನೀಡಿದರು.

‘ನಮ್ಮನ್ನು ಅಗಲಿರುವ ವಿಷ್ಣುವರ್ಧನ್‌ ಅವರ ನೆನಪಿನಲ್ಲಿ ಪ್ರತಿ ವರ್ಷ ಈ ಕಾರ್ಯಕ್ರಮ ಮಾಡುತ್ತಿದ್ದು, ಇದು 10ನೇ ವರ್ಷದ ಕಾರ್ಯಕ್ರಮ. ಮೈಸೂರಿನ ಡಾ.ವಿಷ್ಣುವರ್ಧನ್‌ ಮ್ಯೂಸಿಕಲ್‌ ಟ್ರೂಪ್ಸ್‌ನ ಗಾಯಕರು ವಿಷ್ಣು ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೋಮವಾರ ಸಂಜೆ 6 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಬಿಜೆಪಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜ್ಯೂನಿಯರ್‌ ವಿಷ್ಣುವರ್ಧನ್‌ ಅವರು ಭಾಗವಹಿಸಲಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

ಬಹುಮಾನ ವಿತರಣೆ: ಡಿಸೆಂಬರ್‌ನಲ್ಲಿ ವೇದಿಕೆಯು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಷ್ಣುವರ್ಧನ್‌ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು‌ ಎಂದರು.

‘ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಜೊತೆಗೆ 10 ಮಂದಿಗೆ ಸಮಾಧಾನಕರ ಬಹುಮಾನ ನೀಡಲು ನಿರ್ಧರಿಸಲಾಗಿದೆ’ ಎಂದರು.

ವಿಜೇತರ ವಿವರ: ಪ್ರಥಮ ಬಹುಮಾನ–ಚರಣ್‌, ಚಾಮರಾಜನಗರ– (ಮೊತ್ತ ₹5,001), ದ್ವಿತೀಯ ಬಹುಮಾನ– ನವೀನ್‌ ಮಂಡ್ಯ (₹3,001), ತೃತೀಯ ಬಹುಮಾನ–ಜೆ.ಬಿ.ರಾಜೇಶ್‌, ಚಾಮರಾಜನಗರ ಮತ್ತು ಚಿ.ಎಂ.ಶಿವಶಂಕರ್‌ (ತಲಾ ₹2,001).

ಸ್ಮಾರಕ ನಿರ್ಮಿಸಲು ಒತ್ತಾಯ
‘ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರಗಳು ಮೀನ ಮೇಷ ಎಣಿಸುತ್ತಿವೆ. ಈ ಸರ್ಕಾರ ಆದರೂ ಸ್ಮಾರಕ ನಿರ್ಮಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

ರಸ್ತೆ, ವೃತ್ತಕ್ಕೆ ಹೆಸರಿಡಿ: ‘ನಗರದ ಯಾವುದಾದರೂ ರಸ್ತೆಗೆ ಅಥವಾ ವೃತ್ತಕ್ಕೆ ವಿಷ್ಣುವರ್ಧನ್‌ ಹೆಸರು ಇಡಬೇಕು ಎಂದು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕಾರ್ಯಕ್ರಮ ನಡೆದ 15 ದಿನಗಳಲ್ಲಿ ಒಂದು ರಸ್ತೆ ಅಥವಾ ವೃತ್ತಕ್ಕೆ ಹೆಸರು ಇಡಲೇ ಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.