
ಪ್ರಗತಿಪರ ಸಂಚಾಲಕ ಶೇಖರ್ ಬುದ್ಧ
ಕೊಳ್ಳೇಗಾಲ: ‘ನಗರ ಹಾಗೂ ತಾಲ್ಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ತಾಲ್ಲೂಕು ಆಡಳಿತ ನಿಷ್ಕ್ರಿಯವಾಗಿದೆ’ ಎಂದು ಪ್ರಗತಿಪರ ಸಂಚಾಲಕ ಶೇಖರ್ ಬುದ್ಧ ಹೇಳಿದರು.
‘ನಗರದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಎಚ್.ಕೆ ಟ್ರಸ್ಟ್ ಮತ್ತು ಜೀ ಕನ್ನಡ ವಾಹಿನಿ ಸಹಯೋಗದಲ್ಲಿ ಈಚೆಗೆ ಎರಡು ದಿನಗಳ ಕಾಲ ಕನ್ನಡ ಹಬ್ಬ ಹಾಗೂ ಆರಕ್ಷಕರಿಗೆ ನಮನ ಎಂಬ ರಾಜ್ಯಮಟ್ಟದ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ದುರಂತದ ವಿಷಯವೆಂದರೆ ಇಂತಹ ಕಾರ್ಯಕ್ರಮ ತಾಲ್ಲೂಕು ಆಡಳಿತದ ಗಮನಕ್ಕೆ ಬಾರದೆ ಮಾಡಿರುವುದು. ಕಾರ್ಯಕ್ರಮಕ್ಕೆ ಎಂಜಿಎಸಸ್‌ವಿ ಕಾಲೇಜಿನಿಂದ ಅಥವಾ ಸ್ಥಳೀಯ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ಕಾರ್ಯಕ್ರಮ ನಡೆಸಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಕಾಲೇಜಿನಲ್ಲಿ ತರಗತಿ ಜೊತೆಗೆ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಹ ನಡೆಯುತ್ತಿವೆ. ಇತ್ತೀಚೆಗಿನ ದಿನಗಳಲ್ಲಿ ಆಡಳಿತ ಸರ್ಕಾರವು ಶಾಲಾ ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆಗಳಾಗಲಿ, ರಾಜಕೀಯ ಪಕ್ಷಗಳಾಗಲಿ, ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ಕಾನೂನು ಜಾರಿ ಮಾಡಿದ್ದಾರೆ. ಈಗಾಗಲೇ ಸರ್ಕಾರದ ಆದೇಶ ಸುತ್ತೋಲೆಗಳು ಜಾರಿಯಲ್ಲಿದೆ. ಹೀಗಿದ್ದು ಕಾಲೇಜಿನ ಪ್ರಾಂಶುಪಾಲರಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಈ ಬಗ್ಗೆ ಪ್ರಾಂಶುಪಾಲರು ಸ್ಥಳೀಯ ಪೊಲೀಸರಿಗೆ ದೂರು ನೀಡಿ ನೀಡಿದ್ದರು’ ಎಂದು ತಿಳಿಸಿದರು.
‘ಈ ದೂರು ಲೆಕ್ಕಿಸದೆ ಪೊಲೀಸ್ ಅಧಿಕಾರಿಗಳು ಖುದ್ದು ಕಾರ್ಯಕ್ರಮದ ಜವಾಬ್ದಾರಿ ಹೊತ್ತಿಕೊಂಡು ಭಾಗಿಯಾಗಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.