ADVERTISEMENT

ಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ತಡೆ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 11:47 IST
Last Updated 2 ಆಗಸ್ಟ್ 2022, 11:47 IST
ವಿ.ಸೋಮಣ್ಣ
ವಿ.ಸೋಮಣ್ಣ   

ಚಾಮರಾಜನಗರ: ‘ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡುವ ಅವಶ್ಯಕತೆ ಇಲ್ಲ. ಘೋಷಣೆ ಮಾಡಿದರೆ ಈ ಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತದೆ. ಹಾಗಾಗಿ, ತಕ್ಷಣಕ್ಕೆ ಈ ಯೋಜನೆಯನ್ನು ತಡೆ ಹಿಡಿಯಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಂಗಳವಾರ ಹೇಳಿದರು.

ಹನೂರು ತಾಲ್ಲೂಕಿನ ಪೊನ್ನಾಚಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಈಗಾಗಲೇ ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತಾರಣ್ಯಗಳಿವೆ. ಹುಲಿ ಯೋಜನೆ ಘೋಷಣೆಯಾದರೆ ದನ ಕರುಗಳಿಗೆ ಮಾತ್ರವಲ್ಲ ಜನರಿಗೂ ತೊಂದರೆಯಾಗುತ್ತದೆ. ಅದನ್ನು ಅನುಭವಿಸಿದವರಿಗೇ ಗೊತ್ತು. ಯಾರೂ ಇರುವುದಕ್ಕೆ ಆಗುವುದಿಲ್ಲ. ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೂ ತೊಂದರೆಯಾಗುತ್ತದೆ’ ಎಂದರು.

‘ಈ ಬಗ್ಗೆ ಸಮೀಕ್ಷೆ ಮಾಡಿಸುತ್ತಿದ್ದೇವೆ. ಸಚಿವ ಸಂಪುಟದ ಮುಂದೆ ಚರ್ಚೆಗೆ ಬಂದಿದೆ. ಇದು ಸೂಕ್ಷ್ಮ ವಿಚಾರ. ತಕ್ಷಣಕ್ಕೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಂತ ಹಂತವಾಗಿ ತೀರ್ಮಾನ ಮಾಡಬೇಕಾಗಿದೆ.ಈ ಅರಣ್ಯದಲ್ಲಿ 400–500 ವರ್ಷಗಳಿಂದಲೂ ಹೆಚ್ಚು ಸಮಯದಿಂದ ಇರುವ ಗ್ರಾಮಗಳಿವೆ. ಅವುಗಳನ್ನು ಏನು ಮಾಡುವುದು. ಅಲ್ಲಿನ ಜನರನ್ನು ಎಲ್ಲಿಗೆ ಕಳುಹಿಸುವುದು? ಹಾಗಾಗಿ, ಸದ್ಯಕ್ಕೆ ಯೋಜನೆಯನ್ನು ತಡೆ ಹಿಡಿಯಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.