ADVERTISEMENT

ಯೋಜನಾ ನಿರಾಶ್ರಿತ ಪ್ರಮಾಣಪತ್ರ ನೀಡಲು ಆಗ್ರಹ

ಅರಣ್ಯದಿಂದ ಪುನರ್ವಸತಿ ಹೊಂದಲು ಬಯಸುವವರಿಗೆ ಅನುಕೂಲ ಕಲ್ಪಿಸಲು ಗಿರಿಧರ ಕುಲಕರ್ಣಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2023, 4:57 IST
Last Updated 16 ಸೆಪ್ಟೆಂಬರ್ 2023, 4:57 IST
ಗಿರಿಧರ ಕುಲಕರ್ಣಿ
ಗಿರಿಧರ ಕುಲಕರ್ಣಿ   

ಚಾಮರಾಜನಗರ: ಹುಲಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿಧಾಮಗಳು ಸೇರಿದಂತೆ ಅರಣ್ಯ ಪ್ರದೇಶಗಳಿಂದ ಸ್ವಯಂಪ್ರೇರಿತರಾಗಿ ಹೊರಗೆ ಬಂದು ಪುನರ್ವಸತಿ ಹೊಂದಲು ಇಚ್ಛಿಸುವ ಅರಣ್ಯವಾಸಿಗಳು ಹಾಗೂ ಗಿರಿಜನರಿಗೆ ಮಹಾರಾಷ್ಟ್ರದ ಮಾದರಿಯಲ್ಲಿ ‘ಯೋಜನಾ ನಿರಾಶ್ರಿತ ಪ್ರಮಾಣಪತ್ರ’ ನೀಡಬೇಕು ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪ್ರಸ್ತಾವವನ್ನೂ ಅವರು ಸಲ್ಲಿಸಿದ್ದಾರೆ. 

‘ರಾಜ್ಯದ ವಿವಿಧ ಸಂರಕ್ಷಿತ ಅರಣ್ಯಗಳಲ್ಲಿ ವಾಸಿಸುತ್ತಿರು‌ವರು ಹಾಗೂ ಗಿರಿಜನರು ತಮ್ಮ ಶ್ರೇಯೋಭಿವೃದ್ಧಿಗಾಗಿ ಅರಣ್ಯ ಪ್ರದೇಶಗಳಿಂದ ಹೊರ ಬರಲು ಸಿದ್ಧರಿದ್ದರಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವುದರಿಂದ ಅರಣ್ಯಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಅರಣ್ಯವಾಸಿಗಳ ಮತ್ತು ಗಿರಿಜನರ ಮುಂದಿನ ಪೀಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ’ ಎಂದು ಗಿರಿಧರ ಹೇಳಿದ್ದಾರೆ. 

ADVERTISEMENT

‘ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸಿರುವ ಉದಾಹರಣೆಗಳು ಈಗಾಗಲೇ ರಾಜ್ಯದಲ್ಲಿವೆ.  ಪುನರ್ವಸತಿಗೊಳ್ಳುವ ಜನರು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜ ನಿಟ್ಟಿನಲ್ಲಿ ಅನುಕೂಲವಾಗುವಂತೆ ಹಾಗೂ ಪುನರ್ವಸತಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಅವರಿಗೆ ‘ಯೋಜನಾ ನಿರಾಶ್ರಿತ ಪ್ರಮಾಣಪತ್ರ’ ನೀಡುವ ಯೋಜನೆ ಮಹಾರಾಷ್ಟ್ರದಲ್ಲಿ ಈಗಾಗಲೇ ಜಾರಿಯಲ್ಲಿದೆ. ಈ ಉದ್ದೇಶಕ್ಕಾಗಿ ಅಲ್ಲಿನ ಸರ್ಕಾರ, ಮಹಾರಾಷ್ಟ್ರ ಯೋಜನಾ ಬಾಧಿತ ವ್ಯಕ್ತಿಗಳ ಪುನರ್ವಸತಿ ಕಾಯ್ದೆ– 1999 (ಮಹಾರಾಷ್ಟ್ರ ಆಕ್ಟ್ ನಂ. XI ಆಫ್ 2001) ಜಾರಿಗೊಳಿಸಿದೆ. 

ಮಹಾರಾಷ್ಟ್ರದ ಮಾದರಿಯಲ್ಲಿ ಇತರೆ ರಾಜ್ಯಗಳೂ ಪುನರ್ವಸತಿಗೊಳ್ಳುವ ಅರಣ್ಯವಾಸಿಗಳು ಹಾಗೂ ಗಿರಿಜನರಿಗೆ ‘ಯೋಜನಾ ನಿರಾಶ್ರಿತ ಪ್ರಮಾಣಪತ್ರ’ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು 2010ರಲ್ಲೇ ಮಾರ್ಗಸೂಚಿ ಹೊರಡಿಸಿದೆ. 

‘ಯೋಜನಾ ನಿರಾಶ್ರಿತ ಪಮಾಣಪತ್ರ ನೀಡುವುದರಿಂದ ಅರ್ಹ ಫಲಾನುಭವಿಗಳಿಗೆ ಉದ್ಯೋಗಗಳಲ್ಲಿ ಮೀಸಲಾತಿ ಸಿಗುವ ಜೊತೆಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಪ್ರಯೋಜನವಾಗುತ್ತದೆ. ಇದರಿಂದ ಅರಣ್ಯದ ಮೇಲೆ ಮನುಷ್ಯರ ಒತ್ತಡ ಕಡಿಮೆಯಾಗಿ ವನ್ಯಜೀವಿಗಳ ಆವಾಸಸ್ಥಾನಗಳು ವೃದ್ಧಿಗೊಂಡು ಮಾನವ-ವನ್ಯಜೀವಿ ಸಂಘರ್ಷ ಕಡಿಮೆಯಾಗುತ್ತದೆ’ ಎಂದು ಗಿರಿಧರ ಕುಲಕರ್ಣಿ ಅವರು ಪ್ರಸ್ತಾವದಲ್ಲಿ ವಿವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.