ADVERTISEMENT

ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಬಿಪಿಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 13:39 IST
Last Updated 16 ಫೆಬ್ರುವರಿ 2021, 13:39 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಪಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಪಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಪಿಟಿಸಿಎಲ್ ಕಾಯ್ದೆ ತಿದ್ದುಪಡಿ, ಕೃಷಿ, ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣೆ ಕಾಯ್ದೆ ರದ್ದು, ತೈಲ ಮತ್ತು ಸಿಲಿಂಡರ್ ಬೆಲೆ ಇಳಿಕೆ ಹಾಗೂ ಬಡನಿರುದ್ಯೋಗಿ ಪದವೀದರರಿಗೆ ಕೃಷಿ ಭೂಮಿ ಹಂಚುವಂತೆ ಒತ್ತಾಯಿಸಿ ಭಾರತೀಯ ಪರಿವರ್ತನಾ ಸಂಘದ (ಬಿಪಿಎಸ್‌) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಸತ್ತಿರಸ್ತೆ, ದೊಡ್ಡಂಗಡಿ ಬೀದಿ, ಅಗ್ರಹಾರ ಬೀದಿ, ಭುವನೇಶ್ವರಿ ವೃತ್ತ, ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಆಲೂರುಮಲ್ಲು ಅವರು ಮಾತನಾಡಿ, ‘1978ರ ಪಿಟಿಸಿಎಲ್ ಕಾಯ್ದೆಯು ಹಿಂದೆ ಹೇಗಿತ್ತೋ ಹಾಗೆಯೇ ಮುಂದುವರಿಸಲು ವಿಧಾನಸಭೆ ತೀರ್ಮಾನ ಕೈಗೊಳ್ಳಬೇಕು. ಅಥವಾ ನಿರ್ದಿಷ್ಟ ಕಾಲ ಮಿತಿ ಎಂದರೆ 10 ವರ್ಷವೇ? 20 ವರ್ಷವೇ?, 50 ವರ್ಷವೇ ಎಂಬುದನ್ನು ಸ್ಪಷ್ಟಪಡಿಸಿ ಕಾಯ್ದೆಗೆ ತಿದ್ದುಪಡಿಯನ್ನಾದರೂ ತರಬೇಕು’ ಎಂದು ಒತ್ತಾಯಿಸಿದರು.

‘ಅರಣ್ಯ ವ್ಯಾಪ್ತಿಗೂ ಸೇರದ ಉಳುಮೆ ಮಾಡದೆ ಖಾಲಿ ಬಿದ್ದಿರುವ ಸುಮಾರು 11.97 ಲಕ್ಷ ಹೆಕ್ಟೇರ್ ಭೂಮಿ ಸರ್ಕಾರದ ವಶದಲ್ಲಿದೆ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಅಧಿವೇಶನದಲ್ಲಿ ಹೇಳಿದೆ. ಈ ಭೂಮಿಯನ್ನು ಪದವೀದರರಾಗಿಯೂ ನಿರುದ್ಯೋಗಗಳಾಗಿರುವ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾವಂತರಿಗೆ ತಲಾ ಎರಡು ಎಕರೆಯಂತೆ ಹಂಚಿಕೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ರಾಜ್ಯ ಸರ್ಕಾರವು ಇತ್ತೀಚಿಗೆ ತರಾತುರಿಯಿಂದ ಜಾರಿಗೆ ತಂದಿರುವ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ರೈತರನ್ನು ತೀರಾ ಸಂಕಷ್ಟಕ್ಕೆ ಈಡು ಮಾಡಲಿದೆ. ದನದ ಮಾಂಸ ತಿನ್ನುವವರಿಗೆ ಕುರಿ-ಕೋಳಿ ಹಾಗೂ ಮೇಕೆ ಮಾಂಸವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ರೈತರು ತಲತಲಾಂತರದಿಂದ ಪಶುಗಳನ್ನು ಸಾಕುವ- ಸಂರಕ್ಷಿಸುವ ಹಾಗೂ ಮಾರಾಟ ಮಾಡುವ ತಮ್ಮ ವಂಶ ಪಾರಂಪರ‍್ಯವಾದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಈ ಕಾಯ್ದೆ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರನ್ನು ಸಂಪೂರ್ಣವಾಗಿ ಪರಾವಲಂಬಿಗಳನ್ನಾಗಿ ಮಾಡಲಿವೆ. ಹಾಗಾಗಿ ಎರಡೂ ಸರ್ಕಾರಗಳು ಕಾಯ್ದೆಗಳನ್ಹು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರವು ಲಂಗು-ಲಗಾಮಿಲ್ಲದೆ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆಯನ್ನು ಏರಿಸುತ್ತಿರುವುದು ಖಂಡನೀಯ. ಜನಸಾಮಾನ್ಯರ ಹಿತದೃಷ್ಠಿಯಿಂದ ಕೂಡಲೇ ಸರ್ಕಾರ ಬೆಲೆಗಳನ್ನು ಇಳಿಸಬೇಕು’ ಎಂದು ಆಲೂರು ಮಲ್ಲು ಒತ್ತಾಯಿಸಿದರು.

ಸಂಘದ ಮುಖಂಡರಾದ ಮಾದೇಶ್‌ಉಪ್ಪಾರ್, ಮಾಂಬಳ್ಳಿ ರಾಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಪನಪಾಳ್ಯ ಸಿದ್ದರಾಜು, ಕಾರ್ಯದರ್ಶಿ ವಾಸು, ಉಪಾಧ್ಯಕ್ಷ ಎಂ.ಎನ್.ಸಂಪತ್, ತಾಲ್ಲೂಕು ಅಧ್ಯಕ್ಷ ಚಿನ್ನಸ್ವಾಮಿ, ಕಾಗಲವಾಡಿ ನಾಗರಾಜು, ಕಣ್ಣೇಗಾಲ ಮಹದೇವನಾಯಕ, ನಾಗಸ್ವಾಮಿ, ಅರೇಪುರ ಮಹೇಶ್, ರಾಜೇಂದ್ರ, ನಾಗರಾಜು, ಅಂಬಳೆ ಮಹದೇವು, ಮೆಲ್ಲಹಳ್ಳಿಸಿದ್ದರಾಜು, ದುಗ್ಗಟಿಮಹೇಶ್, ಅಗ್ರಹಾರರ ಜನಿಕಾಂತ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.