ADVERTISEMENT

ಕೇಂದ್ರ ಬಜೆಟ್‌ ಖಂಡಿಸಿ ಖಾಲಿ ಡಬ್ಬ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 15:32 IST
Last Updated 7 ಜುಲೈ 2019, 15:32 IST
ಜನ ಹಿತಾಶಕ್ತಿ ಹೋರಾಟ ವೇದಿಕೆಯ ಕಾರ್ಯಕರ್ತರು ಖಾಲಿ ಡಬ್ಬ ಪ್ರದರ್ಶಿಸಿದರು
ಜನ ಹಿತಾಶಕ್ತಿ ಹೋರಾಟ ವೇದಿಕೆಯ ಕಾರ್ಯಕರ್ತರು ಖಾಲಿ ಡಬ್ಬ ಪ್ರದರ್ಶಿಸಿದರು   

ಚಾಮರಾಜನಗರ: ಕೇಂದ್ರ ಸರ್ಕಾರದ ಬಜೆಟ್ ವಿರೋಧಿಸಿ ಜನ ಹಿತಾಶಕ್ತಿ ಹೋರಾಟ ವೇದಿಕೆಯ ಕಾರ್ಯಕರ್ತರುಖಾಲಿ ಡಬ್ಬ ಪ್ರದರ್ಶಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿಸರ್ಕಾರ ಅಧಿಕಾರದ ಗದ್ದುಗೆ ಏರಿದ ಬಳಿಕ ಬಜೆಟ್ ಮಂಡನೆ ಮಾಡುವಾಗ ಜನ ವಿರೋಧಿ ನೀತಿಯನ್ನೇಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ವಿಶೇಷವಾಗಿ ದಲಿತ ಸಮುದಾಯ, ರೈತರು ಮತ್ತು ಬಿಪಿಎಲ್ ಕುಟುಂಬ ವರ್ಗದವರಿಗೆ ಅನುಕೂಲವಾಗಬಹುದು ಎಂಬ ನಿಟ್ಟಿನಲ್ಲಿ ಭಾರಿ ವಿಶ್ವಾಸ ಹೊಂದಲಾಗಿತ್ತು.ಆದರೆ, ಇದು ಸುಳ್ಳಾಗಿ ಕೇವಲ ಬಂಡವಾಳಶಾಹಿಗಳು, ಶ್ರೀಮಂತರು, ಉಳ್ಳವರಿಗೆ ಅನುಕೂಲವಾಗುವಂತೆ ಮಾಡಿ ಜನರ ಕಣ್ಣಿಗೆ ಮಣ್ಣು ಎರಚಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಮೋದಿ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬಂದರೆ ಸಾಮಾನ್ಯ ಜನರನ್ನು ಉದ್ಧಾರ ಮಾಡುತ್ತಾರೆ ಎಂದು ನಂಬಿದ್ದ ದೇಶದ ಜನರ ಸ್ಥಿತಿ ಚಿಂತಾಜನಕವಾಗಿದೆ. ದಿನ ನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ ಗಾಯದ ಮೇಲೆ ಬರೆ ಎಳೆದಿದ್ದಾರೆ.ಬಡವರ ಖಾತೆಗೆ ₹ 15 ಲಕ್ಷ ಬರುತ್ತದೆ. ಉದ್ಯೋಗಗಳ ಸೃಷ್ಟಿಯಾಗಲಿದೆ ಎನ್ನುವಭರವಸೆ ಹುಸಿಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ನೀಡದೆ ಮಲತಾಯಿ ಧೋರಣೆ ಮಾಡಲಾಗಿದೆ. ಕೃಷಿ, ಉದ್ಯೋಗ, ದಲಿತ ಅಭಿವೃದ್ದಿ ಯೋಜನೆಗಳಿಗೆ ಕತ್ತರಿ ಹಾಕಿ ಕೇಂದ್ರ ಬಜೆಟ್ ಸಂಪೂರ್ಣ, ಜನ ವಿರೋಧಿ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜನ ಹಿತಾಶಕ್ತಿ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ನಿಜಧ್ವನಿ ಗೋವಿಂದರಾಜು, ಸಂಘಸೇನಾ, ಬಂಗಾರಸ್ವಾಮಿ, ಶರೀಫ್, ಜಗದೀಶ್, ನಾಗೇಂದ್ರೆಗೌಡ, ನಿರ್ಮಲಾ, ಶಾಂತರಾಜು, ಸಿದ್ದಪ್ಪಾಜಿ, ಚಂದ್ರಕುಮಾರ್, ಸೋಮಣ್ಣ, ಸಿದ್ದರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.