
ಕೊಳ್ಳೇಗಾಲ: ಕರ್ನಾಟಕ ರಾಜ್ಯ ರೈತ ಸಂಘ ದೊಡ್ಡಿಂದುವಾಡಿ ಹಾಗೂ ಸಿಂಗನಲ್ಲೂರು ಶಾಖೆ ರೈತರು ಗ್ರಾಮೀಣ ಭಾಗದಲ್ಲಿ ಹಾಗೂ ಗುಂಡಾಲ್ ಜಲಾಶಯದ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ಕೂಡಿದ್ದು, ಅಭಿವೃದ್ಧಿ ಪಡಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಹನೂರು ಶಾಸಕ ಮಂಜುನಾಥ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೋಮವಾರ ಭಿಕ್ಷೆ ಎತ್ತುವ ಚಳವಳಿ ನಡೆಸಿದರು.
ತಾಲ್ಲೂಕಿನ ಕಾಮಗೆರೆ, ಸಿಂಗನಲ್ಲೂರು ಹಾಗೂ ದೊಡ್ಡಿಂದುವಾಡಿ ಗ್ರಾಮದ ರೈತ ಸಂಘಟನೆಯವರು ದೊಡ್ಡಿಂದುವಾಡಿ ವೃತ್ತದ ಬಳಿ ಪ್ರತಿಭಟನೆ ನಡೆಸಿ ಶಾಸಕರ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸಾರ್ವಜನಿಕರಿಂದ ಭಿಕ್ಷೆ ಎತ್ತಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ‘ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಗುಂಡಾಲ್ ಜಲಾಶಯದ ರಸ್ತೆ ಗುಂಡಿಗಳಿಂದ ಕೂಡಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರಿಗೆ ಪ್ರತಿನಿತ್ಯ ತೊಂದರೆ ಉಂಟಾಗುತ್ತಿದೆ. ರಸ್ತೆಯಲ್ಲಿ ಬೈಕ್ ಸವಾರರು ಗುಂಡಿ ತಪ್ಪಿಸಲು ಅಪಘಾತದಲ್ಲಿ ಮೃತಪಟ್ಟಿರುವ ನಿದರ್ಶನ ಇವೆ. ಅಲ್ಲದೆ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿದ್ದು, ಸಾವು– ನೋವುಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ದೂರಿದರು.
ಗುಂಡಾಲ್ ಜಲಾಶಯದ ರಸ್ತೆ ತೀವ್ರ ಹದಗೆಟ್ಟಿದೆ. ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಲಾರಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಬರಲು ಹರಸಾಹಸ ಪಡಬೇಕಾಗಿದೆ. ಹೀಗಾಗಿ ಈ ಭಿಕ್ಷಾ ಚಳವಳಿ ಹಮ್ಮಿಕೊಂಡಿದ್ದೇವೆ. ಈಗಾಗಲೇ ₹3,555 ಹಣ ಸಂಗ್ರಹವಾಗಿದೆ. ಇದನ್ನು ಮುಖ್ಯಮಂತ್ರಿ ನಿಧಿಗೆ ಡಿಡಿ ಮಾಡಬೇಕು ಎಂದು ಪಟ್ಟು ಹಿಡಿದರು. ಇಲ್ಲದಿದ್ದರೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತರು ಎಚ್ಚರಿಸಿದರು.
ಭಿಕ್ಷಾಟನೆ ಮಾಡಿದ ನಗದನ್ನು ಸಂಗ್ರಹಿಸಿ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ , ಜಿ.ಪಂ ಇಲಾಖೆಗೆ ತಲಾ ₹1,185 ಅನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡಲು ಮುಂದಾದಾಗ ಅಧಿಕಾರಿಗಳು ಸ್ವೀಕರಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರೆಸಿದರು. ನಂತರ ಅಧಿಕಾರಿಗಳು 15 ದಿನದೊಳಗೆ ಕೆಲ ರಸ್ತೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಭಿಕ್ಷಾ ಚಳುವಳಿಯಿಂದ ಸಂಗ್ರಹವಾಗಿದ್ದ ಹಣವನ್ನು ಮುಖ್ಯಮಂತ್ರಿ ನಿಧಿಗೆ ಡಿಡಿ ಮಾಡಲಾಗುವುದು ಎಂದು ರೈತರು ಅಧಿಕಾರಿಗಳಿಗೆ ತಿಳಿಸಿ ಮನವಿ ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಮಧುವನಹಳ್ಳಿ ಬಸವರಾಜು, ಅಣಗಳ್ಳಿ ಗ್ರಾಮಘಟಕ ಕೀರ್ತಿ, ಲಾರೆನ್ಸ್, ತಾಲ್ಲೂಕು ಯುವ ಘಟಕ ಅಧ್ಯಕ್ಷ ವಾಸು, ವಸಂತ ಕುಮಾರ್, ಸುರೇಂದ್ರ, ಮನುಗೌಡ, ರವಿ, ನಾಗೇಂದ್ರ, ಶಿವರಾಮ್, ಗೋವಿಂದರಾಜು, ನಂದೀಶ್, ಅಬ್ದುಲ್ ಖಾದೀರ್, ಬೆಟ್ಟೇಗೌಡ, ಆರ್.ಅರುಪದರಾಜ್, ಜಾನ್ ಜೋಸೆಫ್ ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಜಿಲ್ಲಾ ಪಂಚಾಯಿತಿ ಎಇಇ ಕುಮಾರ್, ಕಬಿನಿ ಇಲಾಖೆಯ ಎಇಇ ರಾಮಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.