ADVERTISEMENT

ಸಿಎಎ ವಿರುದ್ಧ ಮುಂದುವರಿದ ಹೋರಾಟ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:06 IST
Last Updated 24 ಜನವರಿ 2020, 16:06 IST
ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಜನಾಗ್ರಹ ಪ್ರತಿಭಟನಾ ಧರಣಿ ನಡೆಸಿದರು
ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಜನಾಗ್ರಹ ಪ್ರತಿಭಟನಾ ಧರಣಿ ನಡೆಸಿದರು   

ಚಾಮರಾಜನಗರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಾಪಸ್‌ ಪಡೆಯಬೇಕು, ರಾಷ್ಟ್ರೀಯ ಪೌರತ್ವ ನೋಂದಣಿ (‌ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಜಾರಿ ಮಾಡಬಾರದು ಎಂದು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ವಿವಿಧ ಮಸೀದಿಗಳ ಸಹಯೋಗದಲ್ಲಿ ಮುಸ್ಲಿಮರು ಪ್ರತ್ಯೇಕ ಪ್ರ‌ತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರುಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ಶಾ, ಸಂಘ ಪರಿವಾರದವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡ ಜಿ.ಎಂ.ಗಾಡ್ಕರ್‌ ಮಾತನಾಡಿ, ‘ದೇಶದ ಶೇ 85ರಷ್ಟು ಜನರ ಬದುಕನ್ನು ನಾಶ ಮಾಡಲು ಈ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾನೂನು ಜಾರಿ ಮಾಡಲು ಸಂಘ ಪರಿವಾರ ಮತ್ತು ಕೋಮುವಾದಿ ಬಿಜೆಪಿ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ, ಕೋಮುವಾದಿ ರಾಜಕೀಯ ಉಗ್ರ ವ್ಯಾಘ್ರಗಳೆಂದರೆ ಅದು ನರೇಂದ್ರ ಮೋದಿ ಮತ್ತು ಅಮಿತ್‌ ಶಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಾಯ್ದೆ ಜಾರಿ ಮೂಲಕಕೋಮುವಾದಿಗಳು ಇಡೀ ದೇಶವನ್ನು ಅಲ್ಲೋಲ ಕಲ್ಲೋಲ ಮಾಡಲು ಹೊರಟಿದ್ದಾರೆ. ಈ ಕಾಯ್ದೆಯಿಂದ ನಮ್ಮ ದೇಶದ ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗುತ್ತದೆ ಎಂದು ಭಾರತೀಯರು ಹೇಳುತ್ತಿದ್ದಾರೆ. ಆದರೆ, ನಾವು ಈ ಕಾಯ್ದೆಯನ್ನು ಜಾರಿ ಮಾಡಿಯೇ ತೀರುತ್ತೇವೆ ಎನ್ನುತ್ತಾರಲ್ಲ, ಕಾನೂನು ಇವರಪ್ಪನ ಮನೆಯದಾ?’ ಎಂದು ಪ್ರಶ್ನಿಸಿದರು.

‘ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತಂದಿದೆ. ಕರಾಳ ಕಾನೂನಿನ ವಿರುದ್ಧ ಇಂದು ರಾಜ್ಯ ಹಾಗೂ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಕೆ.ಸಿದ್ದರಾಜು, ಸೈಯದ್‌ ರಫಿ, ಅಬ್ರಾರ್‌ ಅಹಮದ್‌, ಸಿ.ಎಂ. ಕೃಷ್ಣಮೂರ್ತಿ, ಸಂಘಸೇನ, ಕೆ.ಎಂ. ನಾಗರಾಜು,ಸೈಯದ್‌ ಆರೀಫ್‌, ಮಹಮದ್‌ ಅಸ್ಗರ್ ಮುನ್ನಾ ಮತ್ತಿತರರು ಇದ್ದರು.

ಮುಸ್ಲಿಮರಿಂದ ಮತ್ತೆ ಪ್ರತಿಭಟನೆ

ನಗರದ ಹಜೋರ ಮಸೀದಿ, ಫಾತಿಮಾ ಮಸೀದಿ, ಆಝಾಂ ಮಸೀದಿ, ಚಾರ್ಮಿನಾರ್‌ ಮಸೀದಿ, ನೂರ್‌ ಮಸೀದಿ, ಅಬ್ದುಲ್‌ ಅಝೀಜ್ ಮಸೀದಿ ಹಾಗೂ ಮುಸ್ತಫಾ ಮಸೀದಿಗಳ ಸಹಯೋಗದಲ್ಲಿ ಮುಸ್ಲಿಂ ಸಮುದಾಯದ ನೂರಾರು ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ ಎಲ್ಲರೂ ಡೀವಿಯೇಷನ್‌ ರಸ್ತೆಯಲ್ಲಿರುವ ಮದೀನಾ ಮಸೀದಿಯಿಂದಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಡಳಿತ ಭವನದ ಮುಂಭಾಗ ಧರಣಿ ನಡೆಸಿದರು.

ಜವಾಹರ್‌ಲಾಲ್‌ ನೆಹರೂ, ಭಗತ್‌ ಸಿಂಗ್‌ ಸೇರಿದಂತೆ ರಾಷ್ಟ್ರ ನಾಯಕರ ಹೆಸರಿನ ಮುಂದೆ‘ಜಿಂದಾಬಾದ್‌’ ಎಂಬ ಭಿತ್ತಿಪತ್ರಗಳನ್ನು ಹಿಡಿದಿದ್ದರು. ಜೊತೆಗೆ ತ್ರಿವರ್ಣ ಧ್ವಜ, ಎನ್‌ಆರ್‌ಸಿ,ಸಿಎಎಮತ್ತು ಎನ್‌ಪಿಆರ್‌ ವಿರೋಧಿ ಭಿತ್ತಿಪತ್ರ ಹಿಡಿದುಕೇಂದ್ರ ಸರ್ಕಾರಹಾಗೂಸಿಎಎವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಈ ಹಿಂದಿನ ಎರಡು ಶುಕ್ರವಾರವೂ ಪ್ರಾರ್ಥನೆ ಮುಗಿದ ಬಳಿಕ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.