ADVERTISEMENT

ಆಸ್ಪತ್ರೆ ನಿರ್ಲಕ್ಷ್ಯದಿಂದ ಮಗು ಸಾವು ಆರೋಪ

ರಸ್ತೆ ತಡೆ ನಡೆಸಿ ಕುಟುಂಬದವರು, ಸಾರ್ವಜನಿಕರಿಗೆ ಪ್ರತಿಭಟನೆ, ವೈದ್ಯರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 16:29 IST
Last Updated 23 ನವೆಂಬರ್ 2022, 16:29 IST
ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯ ಮುಂಭಾಗ ಮಗುವಿನ ಕುಟುಂಬದವರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು
ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯ ಮುಂಭಾಗ ಮಗುವಿನ ಕುಟುಂಬದವರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಜಿಲ್ಲಾಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಒಂಬತ್ತು ತಿಂಗಳ ಹೆಣ್ಣು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಕುಟುಂಬದವರು ಹಾಗೂ ಸಾರ್ವಜನಿಕರು ನಗರದಲ್ಲಿ ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಮುರಟಿಪಾಳ್ಯದ ಶಿವರುದ್ರಮ್ಮ ಹಾಗೂ ಅಶ್ವತ್ಥ್‌ ದಂಪತಿಯ ಒಂಬತ್ತು ತಿಂಗಳ ಹೆಣ್ಣು ಮಗು ಕೆಮ್ಮು ಹಾಗೂ ಜ್ವರದಿಂದ ಬಳುತ್ತಿತ್ತು. ಬುಧವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ನಗರದ ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯ ತಾಯಿ ಮಗು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.

‘ಈ ಸಂದರ್ಭದಲ್ಲಿ ವೈದ್ಯರು ಸ್ಥಳದಲ್ಲಿ ಇರಲಿಲ್ಲ. ನರ್ಸ್‌ಗಳು ಮಗುವಿಗೆ ಚುಚ್ಚುಮದ್ದು ನೀಡಿದ್ದಾರೆ. ಆಗ ಮಗುವಿನ ಆರೋಪದಲ್ಲಿ ಏರುಪೇರಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ಹೇಳಿದರು’ ಎಂದು ಕುಟುಂಬುದವರು ಆರೋಪಿಸಿದರು.

ADVERTISEMENT

‘ಮೈಸೂರಿಗೆ ಹೋಗಲು ಆಂಬುಲೆನ್ಸ್‌ ಹತ್ತಿರ ಹೋದಾಗ, ಮಗು ಮೃತಪಟ್ಟಿತ್ತು. ಹಾಗಿದ್ದರೂ, ಜೀವ ಇದೆ ಎಂದು ಸಿಬ್ಬಂದಿ ಮತ್ತೆ ಒಳಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡುವುದಾಗಿ ಕುಟುಂಬದವರಿಗೆ ನೀಡಿದ್ದ ಆಸ್ಪತ್ರೆಯ ಎಲ್ಲ ಚೀಟಿಗಳನ್ನು ಹಿಂದಕ್ಕೆ ಪಡೆದು, ಮಗು ಉಳಿಯಲಿಲ್ಲ ಎಂದು ಹೇಳಿದರು’ ಮಗುವಿನ ಅಜ್ಜ ತಿಬ್ಬೇಗೌಡ ದೂರಿದರು.

ಕುಟುಂಬದವರಿಗೆ ಬೆಂಬಲ ನೀಡಿದ ಸಾರ್ವಜನಿಕರು, ಆಸ್ಪತ್ರೆ ಮುಂಭಾಗದ ರಾಚಯ್ಯ ರಸ್ತೆಗೆ ಬಂದು ವಾಹನಗಳ ಸಂಚಾರವನ್ನು ತಡೆದರು.

ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು. ಒಪ್ಪದೇ ಇದ್ದಾಗ, ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಅವರನ್ನು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಬಂದರು. ಕೃಷ್ಣಪ್ರಸಾದ್‌ ಅವರು ಮಗುವಿನ ಕುಟುಂಬಸ್ಥರು ಹಾಗೂ ಸಾರ್ವಜನಿಕರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆಸ್ಪತ್ರೆಯ ಆವರಣಕ್ಕೆ ಕರೆದೊಯ್ದು ನಡೆದ ಘಟನೆಯನ್ನು ವಿವರಿಸಲು ಯತ್ನಿಸಿದರು.

ಮಗುವಿನ ಸ್ಥಿತಿ ಗಂಭೀರವಾಗಿತ್ತು: ಸ್ಪಷ್ಟನೆ

ಜಿಲ್ಲಾ ಸರ್ಜನ್‌ ಕೃಷ್ಣಪ್ರಸಾದ್‌ ಮಾತನಾಡಿ, ‘ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗಲೇ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಮಧ್ಯಾಹ್ನ 12.53ರ ಹೊತ್ತಿಗೆ ಆಸ್ಪತ್ರೆಗೆ ಬಂದಿದ್ದರು. ಆದರೂ ತಕ್ಷಣವೇ ವೈದ್ಯರು ಚಿಕಿತ್ಸೆ ನೀಡಿದ್ದು, ಮಗುವಿನ ದೇಹದ ಬಣ್ಣ ನೀಲಿ ಬಣ್ಣಕ್ಕೆ ತಿರುಗಿತ್ತು. ಮಗುವಿನ ಪೋಷಕರು ಹೇಳಿದಂತೆ ಮಗುವಿಗೆ ಮೂರು ದಿನಗಳಿಂದ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಇತ್ತು. ಆಮ್ಲಜನಕದ ಕೊರತೆಯಾಗಿ ಕೈ- ಕಾಲು ನೀಲಿ ಬಣ್ಣಕ್ಕೆ ತಿರುಗಿತ್ತು’ ಎಂದರು.

‘ವೈದ್ಯರು ಮಗುವನ್ನು ಐಸಿಯುಗೆ ಕರೆದುಕೊಂಡು ಹೋಗಿದ್ದಾರೆ. ಆಗ ಮಗುವಿನ ದೇಹದಲ್ಲಿ ನೀರಿನ ಅಂಶಕಡಿಮೆ ಇರುವುದು ಗೊತ್ತಾಗಿದೆ. ಅದಕ್ಕೆ ಐ.ವಿ.ಫ್ಲ್ಯೂಡ್‌ ನೀಡಲು ಕೈಯಲ್ಲಿ ನರ ಸಿಗದೇ ಇದ್ದಾಗ, ಕಾಲಿನ ಮೂಲಕ ನೀಡಿದಾಗ ನಂತರ ಮಗು ಚೇತರಿಕೆಯಾಗಿದೆ. ನಂತರ ಆ ಮಗುವಿನ ಪೋಷಕರಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆಗೆ ಕರೆದುಕೊಂಡು ಹೋಗುವಿರಾ ಎಂದು ಕೇಳಿದಾಗ ಅವರು ಒಪ್ಪಿಗೆ ನೀಡಿದ್ದು, ಅನಂತರ ಅಂಬುಲೆನ್ಸ್ ಬಳಿ ಕರೆದುಕೊಂಡು ಬಂದಿದ್ದಾರೆ. ಆಗ ಹೃದಯಸ್ತಂಭನದಿಂದ ಮಗು ಮೃತಪಟ್ಟಿದೆ. ತಕ್ಷಣವೇ ವೈದ್ಯರು ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಮಗುವನ್ನು ಉಳಿಸಿಕೊಳ್ಳಲು ಆಗಿಲ್ಲ’ ಎಂದು ಸ್ಪ‍ಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.