ADVERTISEMENT

ಸದಾಶಿವ ಆಯೋಗದ ವರದಿ ವಿರುದ್ಧ ಪ್ರತಿಭಟನೆ

ಕೇಂದ್ರ ಸಂಪುಟದಿಂದ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಕೈ ಬಿಡಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 4:00 IST
Last Updated 1 ಅಕ್ಟೋಬರ್ 2021, 4:00 IST
ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ಆಗ್ರಹಿಸಿ ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯದವರು ಗುರುವಾರ ಚಾಮರಾಜನಗರದಲ್ಲಿ  ಪ್ರತಿಭಟನೆ ನಡೆಸಿದರು
ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ಆಗ್ರಹಿಸಿ ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯದವರು ಗುರುವಾರ ಚಾಮರಾಜನಗರದಲ್ಲಿ  ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ಆಗ್ರಹಿಸಿ ಭೋವಿ, ಲಂಬಾಣಿ (ಬಂಜಾರ) ಕೊರಮ ಮತ್ತು ಕೊರಚ ಸಮುದಾಯದವರು ಚಾಮರಾಜನಗರ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಆಶ್ರಯದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಸೇರಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಆಯೋಗದ ವರದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ತಲತಲಾಂತರಗಳಿಂದ ಭೋವಿ, ಬಂಜಾರ, ಕೊರಮ, ಕೊರಚ ಇತ್ಯಾದಿ ಅಲೆಮಾರಿ ಜಾತಿಗಳು ಕೂಡ ಅಸ್ಪೃಶ್ಯತೆ, ತಾರತಮ್ಯ, ಸುಳ್ಳು ಅಪರಾಧಿತ ಕಳಂಕ, ದೌರ್ಜನ್ಯ ವಂಚನೆಗೆ ಬಲಿಯಾಗುತ್ತಲೇ ಬಂದಿವೆ. ಈ ಕಾರಣದಿಂದ ಭೋವಿ, ಬಂಜಾರ, ಕೊರಮ, ಕೊರಚ ಅಲೆಮಾರಿ ಜಾತಿಗಳನ್ನು ಒಳಗೊಂಡಂತೆ 1935ರಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಮುತುವರ್ಜಿಯಿಂದಾಗಿ ದಮನಿತ ಜಾತಿಗಳ ಪಟ್ಟಿಗೆ ಸೇರಿಸಲಾಗಿತ್ತು.

ADVERTISEMENT

1950ರಲ್ಲಿ ಈ ಅಲೆಮಾರಿ ಜಾತಿಗಳನ್ನು ಒಳಗೊಂಡು ದೇಶದ ಮೊದಲ ಪರಿಶಿಷ್ಟ ಜಾತಿಯ ಪಟ್ಟಿಯನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಲಾಗಿತ್ತು.ಆದರೆ ಈಗ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಮುಂದಿಟ್ಟುಕೊಂಡು ಪರಿಶಿಷ್ಟ ಸಮುದಾಯವನ್ನು ಛಿದ್ರಗೊಳಿಸುವ ಮತ್ತು ಅವುಗಳಲ್ಲಿ ಪರಸ್ಪರ ದ್ವೇಷ ಬಿತ್ತುವ ಕೆಲಸವನ್ನು ಮಾಡಲಾಗುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು. ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯೆ ಪ್ರಚೋದನೆ, ದ್ವೇಷ ಮತ್ತು ಒಡಕು ಬಿತ್ತಲು ಹೊರಟಿರುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು’ ಎಂದು ಆಗ್ರಹಿಸಿದರು.

‘ಹೋರಾಟದ ಹೆಸರಿನಲ್ಲಿ ಬಂಜಾರರ ಕುಲಗುರು ಸೇವಾಲಾಲ್‌, ಭೋವಿ ಸಮಾಜದ ದಾರ್ಶನಿಕ ಸಿದ್ದರಾಮೇಶ್ವರ ಶರಣರು ಸೇರಿದಂತೆ ಯಾವುದೇ ದಾರ್ಶನಿಕರನ್ನು ಅವಹೇಳನ ಮಾಡಬಾರದು. ನಮ್ಮ ದಾರ್ಶನಿಕರು ಹಾಗೂ ಸಚಿವ ಪ್ರಭು ಚೌಹಾಣ್‌ ಅವರನ್ನು ಅವಹೇಳನ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ನ್ಯಾ.ಎಚ್‌.ಎನ್‌.ನಾಗಮೋಹನ್‌ದಾಸ್‌ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಅಂಗೀಕರಿಸಬೇಕು’ ಎಂದು ಪ್ರತಿಭಟನನಿರತರು ಒತ್ತಾಯಿಸಿದರು.

ಜಿಲ್ಲಾ ಲಂಬಾಣಿ ಸೇವಾ ಸಂಘದ ಅಧ್ಯಕ್ಷ ಎಂ.ಕೃಷ್ಣನಾಯ್ಕ್‌, ಕಾರ್ಯದರ್ಶಿ ಎ.ಮಾದೇವ, ಭೋವಿ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಮಹಾದೇವ, ಜಿಲ್ಲಾ ಕೊರಮ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸಮೂರ್ತಿ, ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಿ.ಶಿವಕುಮಾರ್, ಹವ್ಯಾಸಿ ಬಳಗದ ಮೇಗ್ಯಾ ನಾಯ್ಕ್‌, ಕಾರ್ಯಾಧ್ಯಕ್ಷ ಜಗದೀಶ್ ನಾಯ್ಕ್‌, ಜಿಲ್ಲಾ ಲಂಬಾಣಿ ಸಂಘದ ಗೌರವ ಅಧ್ಯಕ್ಷ ಕುಮಾರನಾಯ್ಕ್‌, ಜಿಲ್ಲಾ ಉಪಾಧ್ಯಕ್ಷ ಆರ್.ರಾಜೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಮುರುಗೇಶ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.