ADVERTISEMENT

ಮಹೇಶ್‌ ನಡೆಗೆ ಆಕ್ರೋಶ, ಪದತ್ಯಾಗಕ್ಕೆ ಸವಾಲು

ಫೋಟೊ ಸಹಿತ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದ ಫ್ಲೆಕ್ಸ್‌ ಪ್ರದರ್ಶಿಸಿದ ಪ್ರತಿಭಟನಕಾರರು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 16:35 IST
Last Updated 12 ಆಗಸ್ಟ್ 2021, 16:35 IST
ದಲಿತ ಸಂಘಟನೆಗ ಒಕ್ಕೂಟ, ಮಹಾನಾಯಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ವಿರುದ್ಧ ಪ್ರತಿಭಟನೆ ನಡೆಸಿದರು
ದಲಿತ ಸಂಘಟನೆಗ ಒಕ್ಕೂಟ, ಮಹಾನಾಯಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗುರುವಾರ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ವಿರುದ್ಧ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಬಹುಜನ ಚಳವಳಿಗೆ ವಿಶ್ವಾಸದ್ರೋಹ ಮಾಡಿದ್ದು ಅವರು ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ, ಮಹಾನಾಯಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಾಲಯದ ಎದುರು ಸೇರಿದ ಪ್ರತಿಭಟನಕಾರರು ಎನ್‌.ಮಹೇಶ್‌ ವಿರುದ್ಧ ಆಕ್ರೋಶ ವ್ಯಕ್ತವಡಿಸಿದರು. ಮಹಿಳೆಯರು ಕೂಡ ಪೊರಕೆ ಹಿಡಿದುಕೊಂಡು ಪ್ರತಿಭಟನೆಯಲ್ಲಿ ಭಾಗಿಯಾದರು. ಎನ್‌.ಮಹೇಶ್‌ ಅವರ ಫೋಟೊ ಹಾಗೂ ಜೊತೆಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದಿದ್ದ ಫ್ಲೆಕ್ಸ್‌ ಅನ್ನು ಹಿಡಿದು ಅಸಮಾಧಾನ ಹೊರಹಾಕಿದರಲ್ಲದೇ ಘೋಷಣೆಗಳನ್ನೂ ಕೂಗಿದರು.

ದೇವಾಲಯದ ಆವರಣದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಅಲ್ಲಿ ಮಾನವ ಸರಪಳಿ ನಿರ್ಮಿಸಿ, ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿದರು. ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಗೆಲ್ಲಲ್ಲಿ ಎಂದು ಸವಾಲು ಹಾಕಿದರು.

ADVERTISEMENT

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಹಾನಾಯಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಆರ್‌.ಪಿ.ನಂಜುಂಡಸ್ವಾಮಿ ಅವರು, ‘ಎನ್‌.ಮಹೇಶ್‌ ಅವರು 20 ವರ್ಷಗಳಿಂದ ಅಂಬೇಡ್ಕರ್‌ ತತ್ವ ಸಿದ್ಧಾಂತಗಳ ಬಗ್ಗೆ ಭಾಷಣ ಮಾಡುತ್ತಾ, ಈಗ ಬಿಜೆಪಿಗೆ ಸೇರುವ ಮೂಲಕ ಜನಾಂಗ ದ್ರೋಹ ಮಾಡಿದ್ದಾರೆ. ಮನುವಾದಿಗಳಿಂದಾಗಿ ಸಂವಿಧಾನ ಅಪಾಯದಲ್ಲಿದೆ ಎಂದು ಹೇಳುತ್ತಾ ಬಂದಿದ್ದ ವ್ಯಕ್ತಿ ಈಗ ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಮನುವಾದಿ ಪಕ್ಷ ಬಿಜೆಪಿ ಸೇರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಹಣ ಮಾಡುತ್ತಿದ್ದರು. ಅವರನ್ನು ನಂಬಿ ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೂ ಮೊಟಕುಗೊಳಿಸಿ ಅವರ ಹಿಂದೆ ಬಂದಿದ್ದರು. ನೂರಾರು ಮಂದಿ ಸರ್ಕಾರಿ ನೌಕರಿಯನ್ನು ತೊರೆದು ಬಂದಿದ್ದರು. ಅವರಿಗೆಲ್ಲ ದ್ರೋಹ ಮಾಡಿದ್ದಾರೆ.’ ಎಂದು ಆರೋಪಿಸಿದರು.

ಒಕ್ಕೂಟದ ಸಿ.ಎಂ.ಕೃಷ್ಣಮೂರ್ತಿ,ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದೈತ್ಯರಾಜ್, ಉಪಾಧ್ಯಕ್ಷ ವಕೀಲ ಪ್ರಸನ್ನ ಕುಮಾರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಪಿ.ಸಂಘಸೇನ, ವೇದಿಕೆ ತಾಲ್ಲೂಕು ಅಧ್ಯಕ್ಷ ಕೇಶವ ನಾಯಕ, ಜಿಲ್ಲಾ ಕಾರ್ಯದರ್ಶಿ ರವಿನಾಯಕ, ಜಿಲ್ಲಾ ಖಜಾಂಜಿ ಮಂಜುನಾಯಕ, ಮುಖಂಡ ರಾದ ಜಿ.ಎಂ.ಗಾಡ್ಕರ್,ಮಹೇಶ್ ಗೌಡ, ಎಸ್.ಪಿ.ಮಹೇಶ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಉಲ್ಲಾ, ಉಪಾಧ್ಯಕ್ಷ ಸಿ.ಎಸ್.ಸೈಯದ್ ಆರೀಫ್, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಕೊಳ್ಳೇಗಾಲ ರಾಜಶೇಖರ್, ಡಿ.ಎನ್.ಉಷಾ, ಸ್ತ್ರೀ ಶಕ್ತಿ ಸಂಘದ ಸದಸ್ಯರು ಇದ್ದರು.

‘ಜಾಗೃತಿ ಮೂಡಿಸಬೇಕಿದೆ’

‘20 ವರ್ಷಗಳ ಕಾಲ ಶೋಷಿತ ಸಮುದಾಯದ ಹಣದಿಂದಲೇ ರಾಜಕಾರಣ ಮಾಡಿ ಗೆದ್ದು ಬಂದು ಈಗ ಅದೇ ಶೋಷಿತ ಸಮುದಾಯಗಳ ನಂಬಿಕೆಗೆ ದ್ರೋಹ ಬಗೆದು ಬಿಜೆಪಿ ಪಕ್ಷ ಸೇರಿದ್ದಾರೆ. ಸಂವಿಧಾನಕ್ಕೆ ತದ್ವಿರುದ್ದವಾಗಿರುವ ಬಿಜೆಪಿ ಪಕ್ಷಕ್ಕೆ ಮಾರಾಟವಾಗಿದ್ದಾರೆ ಎಂದು ದೂರಿದರು. ಇಂತಹ ಜನಾಂಗ ದ್ರೋಹಿಯ ಮನುವಾದಿ ಮಸಲತ್ತಿನ ವಿರುದ್ಧ ಸಮಸ್ತ ಶೋಷಿತ ಸಮುದಾಯವನ್ನು ಎಚ್ಚರಿಸುವ ಅಗತ್ಯವಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಿದೆ’ ಎಂದು ಮುಖಂಡರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.