ADVERTISEMENT

ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ವಾಟಾಳ್‌ ನಾಗರಾಜ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 15:51 IST
Last Updated 10 ಜನವರಿ 2021, 15:51 IST
ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಪಡಿಸುವಂತೆ ಆಗ್ರಹಿಸಿ ವಾಟಾಳ್‌ ನಾಗರಾಜ್‌ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು
ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಪಡಿಸುವಂತೆ ಆಗ್ರಹಿಸಿ ವಾಟಾಳ್‌ ನಾಗರಾಜ್‌ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಮರಾಠ ಅಭಿವೃದ್ದಿ ಪ್ರಾಧಿಕಾರ ರದ್ದುಪಡಿಪಡಿಸುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್ ‌ನಾಗರಾಜು ಅವರು ತಮ್ಮ ಬೆಂಬಲಿಗರ ಜೊತೆಯಲ್ಲಿ ನಗರದ ರೈಲ್ವೆ ನಿಲ್ದಾಣದ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ, ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ್‌ ಅವರು, ‘ರಾಜ್ಯ ಸರ್ಕಾರ ಏಕಾಏಕಿಯಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಸಚಿವ ಸಂಪುಟ, ಶಾಸನಸಭೆ, ವಿರೋಧಪಕ್ಷದ ಸಭೆ ಕರೆಯದೆ ಮರಾಠ ಸಮಾಜದ 40 ಸಾವಿರ ಮತಗಳಿಗಾಗಿ ಯಡಿಯೂರಪ್ಪ ಅವರು ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿ, ₹50 ಕೋಟಿ ಮೀಸಲಿಟ್ಟಿರುವುದು ಇಡೀ ರಾಜ್ಯದ ಜನತೆ ಮಾಡಿರುವ ಅವಮಾನ’ ಎಂದರು.

ADVERTISEMENT

ಈ ಪ್ರಾಧಿಕಾರ ರಚನೆಯಿಂದ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ಶಿವಸೇನೆಯು ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಪ್ರಕರಣ ದಾಖಲಿಸಿದೆ. ಇಲ್ಲಿ ನೋಡಿದರೆ ಯಡಿಯೂರಪ್ಪ ಅವರು ಮರಾಠ ಪ್ರಾಧಿಕಾರ ರಚನೆ ಮಾಡಿ ವಿಧಾನಸೌಧದಲ್ಲಿ ಕಾರ್ಯಾಲಯ ಸ್ಥಾಪನೆ ಮಾಡಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ವಿಧಾನಸೌಧದಲ್ಲಿ ಮರಾಠ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆ ಮಾಡಲು ಬಿಡುವುದಿಲ್ಲ’ ಎಂದರು.

ಜ. 30ರಂದು ಜೈಲ್‌ ಭರೋ: ‘ಇದೇ 30ರಂದು ರಾಜ್ಯಾದ್ಯಂತ ರೈಲುಹಳಿಗಳ ಮೇಲೆ ಕೂತು ಪ್ರತಿಭಟನೆ ನಡೆಸಲಾಗುವುದು. ಜೈಲಿಗೂ ಹೋಗುವ ಚಳವಳಿ ನಡೆಸಲಾಗುವುದು. ಪ್ರಾಧಿಕಾರ ರದ್ದುಪಡಿಸುವವರೆಗೂ ನಿರಂತರ ಹೋರಾಟ ನಡೆಸಲಾಗುವುದು’ ಎಂದರು.

ಕಾರ್‌ನಾಗೇಶ್, ಶಿವಲಿಂಗಮೂರ್ತಿ, ಶ್ರೀನಿವಾಸಗೌಡ, ಗು.ಪುರುಷೋತ್ತಮ್, ಚಾ.ರಾ.ಕುಮಾರ್, ಅಜಯ್, ಹೇಮಂತ್, ಮಹೇಶ್ ಇತರರು ಇದ್ದರು.

ತಮಿಳು ನಾಮಫಲಕ ತೆರವು
ಸತ್ಯಮಂಗಲ ರಸ್ತೆಯಲ್ಲಿ ತಾಳವಾಡಿಯ ತಿರುವಿನಲ್ಲಿ ಇದ್ದ ತಮಿಳು ನಾಮಫಲಕವನ್ನು ವಾಟಾಳ್‌ನಾಗರಾಜು ಹಾಗೂ ಅವರ ಬೆಂಬಲಿಗರು ಭಾನುವಾರ ತೆರವುಗಳಿಸಿದ್ದಾರೆ. ‘ಗಡಿನಾಡಲ್ಲಿ ತಮಿಳು ನಾಮಫಲಕ ಹಾಕಿರುವುದು ಅಕ್ಷಮ್ಯ’ ಎಂದು ಹೇಳಿದ ವಾಟಾಳ್‌ ನಾಗರಾಜ್‌ ಅವರು, ಬೆಂಬಲಿಗರೊಂದಿಗೆ ಅದರಲ್ಲಿದ್ದ ತಮಿಳು ಅಕ್ಷರಗಳನ್ನು ತೆರವುಗೊಳಿಸಿದರು.

ಆ ಫಲಕದ ಪಕ್ಕದಲ್ಲೇ, ತಮಿಳುನಾಡಿನ ಹೆದ್ದಾರಿ ಇಲಾಖೆ ಹಾಕಿರುವ ಇಂಗ್ಲಿಷ್‌ ನಾಮಫಲಕವೊಂದಿದ್ದು, ತಮಿಳುನಾಡಿನ ವ್ಯಾಪ್ತಿ ಇಲ್ಲಿಂದ ಆರಂಭವಾಗುತ್ತಿದೆ ಎಂದು ಅದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.