ADVERTISEMENT

ಚಾಮರಾಜನಗರ | ಅಗತ್ಯ ವಸ್ತುಗಳ ಬೆಲೆ ಏರಿಕೆ: ಕರ್ನಾಟಕ ಸೇನಾಪಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 13:25 IST
Last Updated 2 ಆಗಸ್ಟ್ 2023, 13:25 IST
   

ಚಾಮರಾಜನಗರ: ನಂದಿನಿ ಹಾಲು ಮತ್ತು ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟ್ ಮುಂಭಾಗದಲ್ಲಿ ಸೇರಿದ ಪ್ರತಿಭಟನಕಾರರು, ಹಾಲಿನ ಪ್ಯಾಕೆಟ್, ತೊಗರಿಬೇಳೆ, ರವೆ, ಸಕ್ಕರೆರೆ, ಅಲಸಂದೆ ಸೇರಿದಂತೆ ವಿವಿಧ ದಿನಸಿ ವಸ್ತುಗಳನ್ನು ಪ್ರದರ್ಶಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ರಾಜ್ಯ ಸರ್ಕಾರ ನಂದಿನಿ ಹಾಲು, ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ. ಒಂದು ಲೀಟರ್ ಹಾಲಿಗೆ ₹ 4 ಹೆಚ್ಚಳ ಮಾಡಿದೆ. ಅಗತ್ಯವಸ್ತುಗಳಾದ ಹುರಳಿ, ಅಕ್ಕಿ, ಸಕ್ಕರೆ, ಹೆಸರುಕಾಳು, ಸಾಂಬಾರ ಪದಾರ್ಥಗಳು, ಇನ್ನಿತರ ಪದಾರ್ಥಗಳ ಧಾರಣೆಯೂ ಗಗನಕ್ಕೇರಿದೆ. ಸರ್ಕಾರ ಒಂದು ಕಡೆ, ‘ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತೇವೆ’ ಎಂದು ಹೇಳಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯ ಸರ್ಕಾರ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದೆ. ಜನರ ಹಿತದೃಷ್ಟಿಯಿಂದ ಹಾಲು ಮತ್ತು ಅಗತ್ಯವಸ್ತುಗಳ ಬೆಲೆ ಇಳಿಸಬೇಕು. ಶಾಲಾ ಮಕ್ಕಳಿಗೆ ಸರಿಯಾಗಿ ಹಾಲು ವಿತರಣೆ ಮಾಡಬೇಕು. ಗುಣಮಟ್ಟದ ಆಹಾರ ಪದಾರ್ಧಗಳನ್ನು ವಿತರಿಸಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ. ಬೆಲೆ ಏರಿಕೆ ವಿರುದ್ಧ ಜನಾಂದೋಲನ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಶಾ.ಮುರಳಿ, ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿರಾಜು, ಮಹೇಶ್ ಗೌಡ, ಗು.ಪುರುಷೋತ್ತಮ್, ಚಾ.ಸಿ.ಸಿದ್ದರಾಜು, ರವಿಚಂದ್ರಪ್ರಸಾದ್ ಕಹಳೆ, ವೀರಭದ್ರ, ತಾಂಡವಮೂರ್ತಿ, ನಂಜುಂಡಸ್ವಾಮಿ, ಶಿವಣ್ಣ, ಡ್ಯಾನ್ಸ್ ಬಸವರಾಜು, ಸೋಮವಾರಪೇಟೆ ಮಂಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.