ADVERTISEMENT

ಕನ್ಹಯ್ಯ ಲಾಲ್ ಹತ್ಯೆ ಕಠಿಣ ಶಿಕ್ಷೆಗೆ ಆಗ್ರಹ

ಚಾಮರಾಜನಗರದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 11:32 IST
Last Updated 30 ಜೂನ್ 2022, 11:32 IST
ಕನ್ಹಯ್ಯ ಲಾಲ್‌ ಹತ್ಯೆಯನ್ನು ಖಂಡಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಚಾಮರಾಜನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
ಕನ್ಹಯ್ಯ ಲಾಲ್‌ ಹತ್ಯೆಯನ್ನು ಖಂಡಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಚಾಮರಾಜನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ಕುಳಿತರು.

‘ಕೆಲವು ದಿನಗಳ ಹಿಂದೆ ನೂಪುರ್‌ ಶರ್ಮಾ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿ ಉದಯಪುರದ ಬಡಕುಟುಂಬದ ಕನ್ಹಯ್ಯಲಾಲ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದರು. ಇದನ್ನು ಗಮನಿಸಿದ ಮಹಮ್ಮದ್ ರಿಯಾಜ್ ಮತ್ತು ಅನ್ಸಾರಿ ಎಂಬ ಇಬ್ಬರು ಬಟ್ಟೆ ಹೊಲಿಸುವ ನೆಪದಲ್ಲಿ ಕನ್ಹಯ್ಯ ಲಾಲ್ ಅವರನ್ನು ಐಸಿಸ್‌, ತಾಲಿಬಾನ್ ಮಾದರಿಯಲ್ಲಿ ಕೊಲೆ ಮಾಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬಹಿರಂಗ ಬೆದರಿಕೆ ಹಾಕಿದ್ದಾರೆ. ಇದು ಅತ್ಯಂತ ಖಂಡನೀಯ. ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

‘ಹಿಂದೂ ಧರ್ಮದ ಪರ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ದೇಶದಲ್ಲಿ ಆಗಾಗ ಹಲ್ಲೆ ನಡೆಯುತ್ತಿದೆ. ಹತ್ಯೆಯೂ ಆಗುತ್ತಿದೆ.ರಾಜು ಕುಟ್ಟಪ್ಪ, ಪಾರಸ್ ಮೆಸ್ತ, ಹರ್ಷ, ಶಿವು ಉಪ್ಪಾರ್‌ರಂತಹ ಅಮಾಯಕ ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಿಂದೂಗಳನ್ಳು ಮತಾಂತರ ಮಾಡಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನು ಮಾಡುವುದು ಕೆಲವು ಕಿಡಿಗೇಡಿ ಮುಸ್ಲಿಮರ ಉದ್ದೇಶ. ಬಹುಸಂಖ್ಯಾತರಾಗಿರುವ ಹಿಂದೂಗಳು ಶೀಘ್ರ ಅಲ್ಪ ಸಂಖ್ಯಾತರಾಗಲಿದ್ದಾರೆ’ ಎಂದರು.

‘ಇಂತಹ ಕಿಡಿಗೇಡಿಗಳಿಂದಾಗಿ ಭಾರತದಲ್ಲಿ ಜೀವಿಸುತ್ತಿರುವವರಿಗೆ ಭೀತಿ ಉಂಟಾಗಿದೆ. ಬಡ ಟೈಲರ್ ಕನ್ಹಯ್ಯ ಲಾಲ್ ಕೊಲೆ ಮಾಡಿದ ಆರೋಪಿಗಳ ಕುಟುಂಬಕ್ಕೆ ಸರ್ಕಾರದ ಎಲ್ಲ ರೀತಿಯ ಸವಲತ್ತುಗಳನ್ನು ಸ್ಥಗಿತಗೊಳಿಸಬೇಕು. ಆಗ, ಹೇಯ ಕೃತ್ಯ ಎಸಗಿದವರಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ. ಇಲ್ಲದ್ದಿದ್ದಲ್ಲಿ ಇಂತಹವರ ಉಪಟಳ ಹೆಚ್ಚಾಗಲಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂತಹ ಕೃತ್ಯವನ್ನು ಮಾಡುವ ದೇಶದ್ರೋಹಿಗಳನ್ನು ಶಿಕ್ಷಿಸಲು ಕಠಿಣ ಕಾನೂನನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಶಿವು ವಿರಾಟ್‌, ನೂರೊಂದು ಶೆಟ್ಟಿ, ಕಿರಣ್, ಎಂ.ಎಸ್.ಚಂದ್ರಶೇಖರ್, ಬಾಬು, ರಮೇಶ್, ಕೃಷ್ಣಪ್ಪ, ಕೃಷ್ಣ, ಚಂದ್ರಶೇಖರ್, ಶಮಿತ್, ಶಿವಣ್ಣ, ಬುಲೆಟ್ ಚಂದ್ರು, ನಾಗೇಶ್ ನಾಯಕ, ಪೃಥ್ವಿ, ರಾಹುಲ್, ಸಂತೋಷ್, ಪ್ರಸನ್ನ, ಪಮ್ಮಿ, ಹರದನಹಳ್ಳಿ ರವಿ, ಮಂಜುನಾಥ್, ಬಂಗಾರು, ಮಲ್ಲ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.