ಗುಂಡ್ಲುಪೇಟೆ: ತಾಲ್ಲೂಕಿನ ಓಂಕಾರ ಅರಣ್ಯ ವಲಯ ವ್ಯಾಪ್ತಿಯ ಹೊಸಪುರ ಸುತ್ತ ಕಾಡುಪ್ರಾಣಿಗಳ ಹಾವಳಿ ತಡೆಯಬೇಕು, ಮುಚ್ಚಿ ಹೋಗಿರುವ ಕಂದಕಗಳನ್ನು ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿ ರೈತ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.
ಬಂಡೀಪುರ ಅಭಯಾರಣ್ಯದ ಹೊಸಪುರ ಗ್ರಾಮದ ಅರಣ್ಯ ಇಲಾಖೆ ಕಟ್ಟಡದ ಮುಂದೆ ಜಮಾವಣೆಗೊಂಡ ರೈತ ಸಂಘ ಪ್ರಮುಖರು ಹಾಗೂ ಸುತ್ತಲಿನ ಗ್ರಾಮಗಳ ರೈತರು ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಪ್ರತಿಭಟನಾಕಾರ ಮಹದೇವಪ್ಪ ಮಾತನಾಡಿ , ಹೊಸಪುರ ಸುತ್ತ ಕಾಡಾನೆಗಳ ಹಾವಳಿ ನಿರಂತರವಾಗಿದೆ. ಓಣಕನಪುರ, ಶ್ರೀಕಂಠಪುರ ಮುಂತಾದೆಡೆ ಕಾಡಾನೆಗಳು ಫಸಲು ನಾಶ ಪಡಿಸುತ್ತಿವೆ. ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಓಂಕಾರ ವಲಯ ಅರಣ್ಯಾಧಿಕಾರಿಗಳು ಕೂಡಲೇ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.ಹೊಸಪುರ ಸುತ್ತಲಿನ ಕಂದಕಗಳಲ್ಲಿ ತುಂಬಿರುವ ಹೂಳು ತೆಗೆಸಿ, ಸೋಲಾರ್ ತಂತಿ ಮತ್ತು ರೈಲ್ವೆ ಕಂಬಿ ಬೇಲಿಗಳನ್ನು ನಿರ್ಮಿಸಬೇಕು. ಕಾಡಾನೆ ದಾಳಿಯಿಂದ ನಾಶವಾಗಿರುವ ಫಸಲಿಗೆ ಶೀಘ್ರ ಪರಿಹಾರ ಹಣ ನೀಡಬೇಕು ಎಂದು ಒತ್ತಾಯಿಸಿದರು. ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಅವರಿಗೆ ರೈತರು ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ರೈತ ಮುಖಂಡ , ಮರಿಸ್ವಾಮಿ, ಪ್ರಸಾದ್ , ಜಗದೀಶ್, ಉಮೇಶ್ , ರೈತ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.