ADVERTISEMENT

ರೈತ ದಸರಾ ವಿರುದ್ಧ ಪ್ರತಿಭಟನೆ

ನೆರೆ ಪರಿಹಾರ ನೀಡದ ಕೇಂದ್ರದ ವಿರುದ್ಧ ಆಕ್ರೋಶ, ಕೆರೆ ನೀರು ತುಂಬಿಸಲು ಮನವಿ

ಪ್ರಜಾವಾಣಿ ಚಿತ್ರ
Published 3 ಅಕ್ಟೋಬರ್ 2019, 16:26 IST
Last Updated 3 ಅಕ್ಟೋಬರ್ 2019, 16:26 IST
ಜಿಲ್ಲಾಧಿಕಾರಿಗಳೊಂದಿಗೆ ಪ್ರತಿಭಟನಾಕಾರರು ಮಾತುಕತೆಯಲ್ಲಿ ತೊಡಗಿರುವುದು
ಜಿಲ್ಲಾಧಿಕಾರಿಗಳೊಂದಿಗೆ ಪ್ರತಿಭಟನಾಕಾರರು ಮಾತುಕತೆಯಲ್ಲಿ ತೊಡಗಿರುವುದು   

ಚಾಮರಾಜನಗರ: ‘ರೈತರಸಂಕಷ್ಟಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ನೆರೆಹಾವಳಿ ನಡುವೆಯೂ ರೈತ ದಸರಾ ಅಗತ್ಯ ಇರಲಿಲ್ಲ’ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಗುರುವಾರ ನಗರದಲ್ಲಿಪ್ರತಿಭಟನೆನಡೆಸಿದರು.

ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ರೈತರು, ಸಂಘದ ಕಾರ್ಯಕರ್ತರು ಬಿ. ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದ ಗೇಟ್‌ ಬಳಿ ಸೇರಿದರು. ಆದರೆ, ಪೊಲೀಸರು ಗೇಟ್‌ಗೆ ಬೀಗ ಹಾಕಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಯಿತು.

ಅಲ್ಲಿ ಧರಣಿ ಕುಳಿತು ಕೇಂದ್ರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು.

ADVERTISEMENT

‘ಪ್ರವಾಹ ಸಂತ್ರಸ್ತರಿಗೆಬೆಳೆ ವಿಮೆ ಪರಿಹಾರಕೊಟ್ಟಿಲ್ಲ. ಸುಳ್ಳಾಡಿ ದುರಂತದ ಸಂತ್ರಸ್ತರು ಊಟವಿಲ್ಲದೆ ನರಳಾಡುತ್ತಿದ್ದಾರೆ. ಆಡಳಿತ ಪಕ್ಷದವರುಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಜಿಲ್ಲಾಧಿಕಾರಿಗಳು ನೀಡಿದ್ದ ಭರವಸೆ ಈಡೇರಿಸಿಲ್ಲ. ರೈತರನ್ನು ರೌಡಿಗಳು ಎಂದಿರುವ ಎಡಿಸಿ ಆನಂದ್ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ.ಶಾಸಕರು, ಸಂಸದರು ಸ್ಪಂದಿಸಿಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ದೂರಿದರು.

‘ಸಾರ್ವಜನಿಕ ಜಿಲ್ಲಾ ಆಸ್ಪತ್ರೆ ಕೊಳೆತು ನಾರುತ್ತಿದೆ. ಸಂಚಾರ ಪೊಲೀಸರು ಹುಚ್ಚರಂತೆ ದಂಡ ವಿಧಿಸುತ್ತಿರುವುದು ಸರಿಯಲ್ಲ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿಲ್ಲ. ಪಿಡಬ್ಲ್ಯೂಡಿ, ಆರ್‌ಟಿಒ ಕಮಿಷನ್‌ ದಂಧೆ ನಿಂತಿಲ್ಲ. ಹದಗೆಟ್ಟ ರಸ್ತೆ ದುರಸ್ತಿಯಾಗಿಲ್ಲ. ಕುಡಿಯುವ ನೀರು ಬೆಳೆ ವಿಮೆ ಯಾವುದನ್ನೂ ನೀಡದ ಸರ್ಕಾರಕ್ಕೆ‘ರೈತ ದಸರಾ’ ಯಾಕೆ’ ಎಂದು ಪ್ರಶ್ನಿಸಿದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರವಾಹಪೀಡಿತರಿಗೆ ನಯಾಪೈಸೆ ಕೊಟ್ಟಿಲ್ಲ. ಚುನಾವಣೆ ಸಮಯದಲ್ಲಿ ಒಂದೊಂದು ಜಿಲ್ಲೆಗೂ ಬಂದು ವೈಮಾನಿಕ ಸಮೀಕ್ಷೆ ಮಾಡಿ ಕೈಬೀಸಿಕೊಂಡು ಹೊರಟು ಹೋದರು. ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಪರಿಹಾರವನ್ನೂ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತಲು ರಾಜ್ಯದ 25 ಬಿಜೆಪಿ ಸಂಸದರಿಗೆ ಸಾಧ್ಯವಾಗಿಲ್ಲ. ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಸ್ವಲ್ಪ ತಡವಾಗಿ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ‘ತಾಂತ್ರಿಕ ಕಾರಣಗಳಿಗಾಗಿ ಕೆಲವು ಕೆಲಸಗಳು ಬಾಕಿಯಾಗಿವೆ. ನಾವು ಸುಮ್ಮನೆ ಕೂತಿಲ್ಲ. ರೈತರ ಹಾಗೂ ಜನರ ಸಂಕಷ್ಟಗಳು ಅರ್ಥವಾಗುತ್ತವೆ. ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು. ನಂತರ ರೈತ ಸಂಘದ ಸದಸ್ಯರು ಪ್ರತಿಭಟನೆ ಕೈ ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.