ADVERTISEMENT

ಚಾಮರಾಜನಗರ: ಬಿಎಸ್‌ವೈ ಬೆಂಬಲಿಸಿ ವೀರಶೈವ–ಲಿಂಗಾಯತ ಯುವ ವೇದಿಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 16:43 IST
Last Updated 20 ಜುಲೈ 2021, 16:43 IST
ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಬಾರದು ಎಂದು ಆಗ್ರಹಿಸಿ ವೀರಶೈವ–ಲಿಂಗಾಯತ ಯುವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಬಾರದು ಎಂದು ಆಗ್ರಹಿಸಿ ವೀರಶೈವ–ಲಿಂಗಾಯತ ಯುವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿ ವೀರಶೈವ–ಲಿಂಗಾಯತ ಯುವ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಹೈಕಮಾಂಡ್‌ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ಬಿಜೆಪಿ ರಾಜ್ಯದಲ್ಲಿ ಸರ್ವನಾಶವಾಗಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಗುರುಮಲ್ಲಪ್ಪ ಅವರು, ‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಲುಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕೆಲವು ಮುಖಂಡರು ಹುನ್ನಾರ ನಡೆಸುತ್ತಿದ್ದಾರೆ’ ಎಂದರು.

ADVERTISEMENT

‘ಕೋವಿಡ್‌ ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪ ಅವರು ಉತ್ತಮ ಆಡಳಿತ ನಡೆಸಿದ್ದಾರೆ. ಸರ್ವರಿಗೂ ಸಮಪಾಲು, ಸಮಬಾಳು ಎಂಬ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಹೊರಟರೆ ಗ್ರಾಮ ಗ್ರಾಮಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ವೀರೇಂದ್ರ ಪಾಟೀಲ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್‌ ತಪ್ಪು ಮಾಡಿತ್ತು. ಆ ಬಳಿಕ ಕಾಂಗ್ರೆಸ್‌ಗೆ ಲಿಂಗಾಯತರ ಮತ ಬೀಳುತ್ತಿಲ್ಲ. ಬಿಜೆಪಿಯವರು ಇಂತಹ ತಪ್ಪನ್ನು ಮಾಡಬಾರದು. ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ರಾಜ್ಯದಲ್ಲಿ ಪಕ್ಷ ನಾಶವಾಗಿ ಹೋಗಲಿದೆ. ಇದಕ್ಕೆ ಅವಕಾಶ ನೀಡಬಾರದು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡರು ಎಚ್ಚರಿಕೆ ಹಾಗೂ ಜಾಣ್ಮೆಯ ಹೆಜ್ಜೆ ಇಡಬೇಕು’ ಎಂದು ಅವರು ಒತ್ತಾಯಿಸಿದರು.

ವೇದಿಕೆ ಉಪಾಧ್ಯಕ್ಷ ಸಿ‌.ಡಿ.ಪ್ರಕಾಶ್, ಸದಸ್ಯರಾದ ಉಮೇಶ್, ಗಣೇಶ್, ಬಾಬು ಪಟೇಲ್, ದಿನೇಶ್, ಮಹೇಶ್, ರಘು, ವೀರಶೈವ ಮಹಾಸಭಾ ಕೋಶಾಧ್ಯಕ್ಷ ಸುರೇಶ್, ಮುಖಂಡರಾದ ಗುರು ಕಾವುದವಾಡಿ, ನಾಗಭೂಷಣ್, ಮಲ್ಲೇಶ್ ಪ್ರಭು, ಮಹೇಶ್, ಮನೋಜ್, ಆನಂದ್, ಗಿರೀಶ್, ಬಸವರಾಜು ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.