
ಗುಂಡ್ಲುಪೇಟೆ: ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ತೆರಳಿದ್ದ ಮಾಲಾಧಾರಿಗಳ ವಾಹನಗಳನ್ನು ತಡೆದು ಪುಂಡಾಟ ಮೆರೆದಿರುವ ತಮಿಳುನಾಡಿನ ಕೆಲ ಪುಂಡರ ವರ್ತನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ನಿರ್ಮಿಸಿದರು. ತಮಿಳುನಾಡು ಸರ್ಕಾರ ಮತ್ತು ವಾಹನ ತಡೆದ ಪುಂಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ನಂತರ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ವಿ.ನಾಯಕ್, ಇತ್ತೀಚಿಗೆ ತಾಲ್ಲೂಕಿನ ಅಯ್ಯಪ್ಪಸ್ವಾಮಿ ಭಕ್ತರು ಶಬರಿಮಲೆ ಯಾತ್ರೆ ಮುಗಿಸಿಕೊಂಡು ತಮಿಳುನಾಡಿಗೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ತಮಿಳುನಾಡಿನ ಕೆಲ ಕಿಡಿಗೇಡಿಗಳು ಕನ್ನಡ ಬಾವುಟ ತೆರವುಗೊಳಿಸಿ ಎಂದು ಹಲ್ಲೆ ಮಾಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದಿನಿಂದಲೂ ನಮ್ಮ ರಾಜ್ಯದಲ್ಲಿ ಹಲವು ತಮಿಳಿಗರು ಸ್ವತಂತ್ರವಾಗಿ ಭಯರಹಿತ ವಾತಾವರಣದಲ್ಲಿ ಬದುಕುತಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಮಾಡುವ ಇಂತಹ ಕೃತ್ಯದಿಂದ ರಾಜ್ಯ ರಾಜ್ಯಗಳ ನಡುವೆ ಕಲಹ ಉಂಟಾಗುವ ಸಂಭವವಿದೆ. ಅಲ್ಲದೆ ನಮ್ಮ ರಾಜ್ಯದ ಕನ್ನಡಿಗರು ತಮಿಳುನಾಡಿನ ಪ್ರವಾಸದ ಸಮಯದಲ್ಲಿ ಇಂತಹ ಕೃತ್ಯಗಳು ಇದೇ ಮೊದಲೇನಲ್ಲ. ನಾವು ಕನ್ನಡಿಗರು ಶಾಂತಿ ಪ್ರಿಯರು, ಇಲ್ಲಿ ಸರ್ವಧರ್ಮ ಪ್ರಿಯರಂತೆ ಮಾನವೀಯತೆ ಮೆರೆದು ಬದುಕುತ್ತಿದ್ದೇವೆ. ರಾಜ್ಯದಲ್ಲಿ ನೆಲೆಸಿರುವ ಹಲವಾರು ಭಾಷಿಗರು ಕನ್ನಡವನ್ನು ಒಪ್ಪಿಕೊಳ್ಳದಿದ್ದರೂ ಅವರು ಇಲ್ಲಿ ಜೀವಿಸಲು ಸಹಕಾರ ನೀಡಿದ್ದೇವೆ. ಇದನ್ನೆ ತಪ್ಪಾಗಿ ಅರ್ಥೈಸಿಕೊಂಡರೆ ಕನ್ನಡಿಗರು ಎಲ್ಲವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.
ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಯಾವುದೇ ಸಂಧರ್ಭದಲ್ಲಿ ಅಪಾಯ ಉಂಟಾದಾಗ ಕರ್ನಾಟಕ ರಕ್ಷಣಾ ವೇದಿಕೆ ಎಂದಿಗೂ ಸಹಿಸುವುದಿಲ್ಲ. ಭಾಷೆ, ನೆಲ, ಜಲ ರಕ್ಷಣೆಗೆ ಸದಾ ಸಿದ್ಧವಿದ್ದು, ಈಗಾಗಲೇ ಹಲವು ಹೋರಾಟ ಮಾಡಲಾಗಿದೆ. ಕರ್ನಾಟಕ ಸರ್ಕಾರ ಈ ಕೂಡಲೇ ಕನ್ನಡಿಗರ ಮೇಲೆ ಹಲ್ಲೆ ಮಾಡಿ ಕನ್ನಡ ಬಾವುಟಕ್ಕೆ ಅವಮಾನ ಮಾಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕನ್ನಡಿಗರ ರಕ್ಷಣೆಗೆ ನಿಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ತಹಶೀಲ್ದಾರ್ ತನ್ಮಯ್ ಅವರಿಗೆ ಮನವಿ ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕರವೇ ಗೌರವ ಅಧ್ಯಕ್ಷ ಮಾಧು, ಟೌನ್ ಅಧ್ಯಕ್ಷ ರಮೇಶ್ ನಾಯಕ್, ನಾಗರಾಜು, ವಸಂತ, ಜವರಶೆಟ್ಟಿ, ಸತೀಶ್, ಸ್ವಾಮಿ, ಮಂಜುನಾಥ್ ಶೆಟ್ಟಿ, ಕುನಾಲ್ ಗೌಡ, ಪ್ರೀತಂ, ಹಂಗಳ ಬಸವ, ಮಣಿಕಂಠ, ಗೋಂವಿದ, ಸುರೇಶ್ ಸೇರಿದಂತೆ ಹಲವು ಮಂದಿ ಕರವೇ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.