ADVERTISEMENT

ಖಾದಿ ಧ್ವಜಕ್ಕೆ ಮಾತ್ರ ಅವಕಾಶಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 15:28 IST
Last Updated 7 ಆಗಸ್ಟ್ 2022, 15:28 IST
ಖಾದಿ ಧ್ವಜಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಚಾಮರಾಜನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು
ಖಾದಿ ಧ್ವಜಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಚಾಮರಾಜನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಪ್ರತಿ ಮನೆಯಲ್ಲೂ ತಿರಂಗಾ ಅಭಿಯಾನದಲ್ಲಿ ಖಾದಿ ಬಟ್ಟೆಯಲ್ಲಿ ಮಾಡಿರುವ ರಾಷ್ಟ್ರಧ್ವಜಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ಉದ್ಯಾನದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು, ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.

ಪಾಲಿಸ್ಟರ್‌ ಧ್ವಜ ಬೇಡ, ಸ್ವದೇಶಿಯ ಖಾದಿ ರಾಷ್ಟ್ರಧ್ವಜ ಹಾರಿಸಿ ಎಂದು ಘೋಷಣೆಗಳನ್ನು ಕೂಗಿದರು. ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವು‌ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದರು.

ADVERTISEMENT

ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನದುದ್ದಕ್ಕೂ ಖಾದಿ ಧರಿಸುತ್ತಿದ್ದರು. ಅದರ ಅಸ್ಮಿತೆಯಿಂದ ದೇಶದ ರಾಷ್ಟ್ರ ಧ್ವಜವನ್ನು ಖಾದಿಯಲ್ಲಿ ತಯಾರಿಸಿದ್ದಾರೆ. ದೇಶದಲ್ಲಿ ನಿರಂತರವಾಗಿ ಖಾದಿ ತ್ರಿವರ್ಣಧ್ವಜವನ್ನೇ ಬಳಸುತ್ತಾ ಬರಲಾಗಿದೆ. ಸಂಸತ್ತಿನಿಂದ ಹಿಡಿದು ಗ್ರಾಮ ಪಂಚಾಯಿತಿಗಳ ವರೆಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಖಾದಿ ಧ್ವಜವನ್ನೇ ಹಾರಿಸಲಾಗುತ್ತಿದೆ. ಕಡ್ಡಾಯವಾಗಿ ಖಾದಿ ಧ್ವಜ ಹಾರಿಸಬೇಕು ಎಂಬ ನಿಯಮ 2007ರಿಂದ ಜಾರಿಯಲ್ಲಿದೆ. ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್‌, ಕೃತಕ ನೂಲಿನ ಧ್ವಜವನ್ನೂ ಬಳಸಬಹುದು ಎಂದು ಹೇಳಿರುವುದು ನಾಚಿಗೇಡಿನ ಸಂಗತಿ’ ಎಂದು ದೂರಿದರು.

‘ಕೇಂದ್ರ ಸರ್ಕಾರ ರಾಷ್ಟ್ರ ವಿರೋಧಿ ಸರ್ಕಾರವಾಗಿದೆ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ. ಖಾದಿ ಉತ್ಪನ್ನಗಳನ್ನು ಪುನರ್ ಚೇತನಗೊಳಿಸಬೇಕಿದ್ದ ಕೇಂದ್ರ ಸರ್ಕಾರ ಪಾಲಿಸ್ಟರ್‌ ಬಟ್ಟೆಗೆ ಅವಕಾಶ ನೀಡಿ ದೇಶಕ್ಕೆ, ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾ.ಮುರಳಿ, ಚಾ.ವೆಂ.ರಾಜ್ ಗೋಪಾಲ್, ಚಾ.ರಾ.ಕುಮಾರ್, ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿ ರಾಜು, ಸಾಗರ್ ರಾವತ್, ಗು.ಪುರುಷೋತ್ತಮ್, ತಾಂಡವಮೂರ್ತಿ, ವೀರಭದ್ರ, ಶಿವಕುಮಾರ್, ಹೆಗ್ಗೋಠಾರ ಪಟೇಲ್, ಮರಿಯಾಲದಹುಂಡಿ ಕುಮಾರ್, ಆಟೊ ಅಶೋಕ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.