ADVERTISEMENT

ಚಾಮರಾಜನಗರ: ದ್ವಿತೀಯ ಪಿಯು ಪರೀಕ್ಷೆಗೆ ಸಿದ್ಧತೆ, ಉತ್ತಮ ಫಲಿತಾಂಶದ ಗುರಿ

ಈ ಬಾರಿ ಪ್ರಶ್ನೆಪತ್ರಿಕೆ ಮಾದರಿ ಬದಲು; ವಿಜ್ಞಾನ ಪ್ರಾಯೋಗಿಕ ಪರೀಕ್ಷೆ ಶೀಘ್ರ

ಸೂರ್ಯನಾರಾಯಣ ವಿ
Published 9 ಫೆಬ್ರುವರಿ 2022, 5:17 IST
Last Updated 9 ಫೆಬ್ರುವರಿ 2022, 5:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಕೋವಿಡ್‌ ಮೂರನೇ ಹಾವಳಿ ನಡುವೆ ಶೈಕ್ಷಣಿಕ ವರ್ಷದ ಅಂತ್ಯ ಸಮೀಪಿಸುತ್ತಿದ್ದಂತೆಯೇ, ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ.

ಕಳೆದ ಬಾರಿ ಕೋವಿಡ್‌ ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿರಲಿಲ್ಲ. ಎಲ್ಲರನ್ನೂ ತೇರ್ಗಡೆಗೊಳಿಸಲಾಗಿತ್ತು. ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕದ ಆಧಾರದ ಮೇಲೆ ಅಂಕ ನೀಡಲಾಗಿತ್ತು.

ಈ ಬಾರಿ ಎಂದಿನಂತೆ ಪರೀಕ್ಷೆ ನಡೆಯಲಿದ್ದು, ಉತ್ತಮ ಫಲಿತಾಂಶ ದಾಖಲಿಸುವ ನಿಟ್ಟಿನಲ್ಲಿ ಇಲಾಖೆ ಪ್ರಯತ್ನ ಆರಂಭಿಸಿದೆ. 2020–21ನೇ ಸಾಲಿನಲ್ಲಿ ಜಿಲ್ಲೆಯು ಶೇ 69.29 ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ 12ನೇ ಸ್ಥಾನ ಗಳಿಸಿತ್ತು.

ADVERTISEMENT

ದ್ವಿತೀಯ ಪಿಯು ಪರೀಕ್ಷೆಯ ವೇಳಾ ಪಟ್ಟಿ ಪ್ರಕಟವಾಗಿದೆ. ಏಪ್ರಿಲ್‌ 16ರಿಂದ ಮೇ 6ರವರೆಗೆ ಪರೀಕ್ಷೆ ನಡೆಯಲಿವೆ.

ಇದೇ 17ರ ನಂತರ ತಿಂಗಳ ಒಳಗಾಗಿ ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚಿಸಿದೆ.

ಪ್ರಶ್ನೆ ಪತ್ರಿಕೆ ಮಾದರಿ ಬದಲು:ಕನ್ನಡ, ಇಂಗ್ಲಿಷ್‌ ಸೇರಿದಂತೆ ಇತರೆ ಭಾಷಾ ವಿಷಯಗಳ ಪಠ್ಯವನ್ನು ಈ ಬಾರಿ ಶೇ 30ರಷ್ಟು ಕಡಿತ ಮಾಡಲಾಗಿದೆ. ಕೋರ್‌ ವಿಷಯಗಳ ಪಠ್ಯದಲ್ಲಿ ಕಡಿತವಾಗಿಲ್ಲ.

ಇಲಾಖೆಯ ವೆಬ್‌ಸೈಟ್‌ನಲ್ಲಿ ಈ ಸಾಲಿನ ಪರೀಕ್ಷೆಗೆ ಮಾದರಿ ಪ್ರಶ್ನೆಪತ್ರಿಕೆಗಳನ್ನು ಪ್ರಕಟಿಸಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಶ್ನೆ ಪತ್ರಿಕೆಗಳ ಸ್ವರೂಪದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

‘ವಿದ್ಯಾರ್ಥಿಗಳಿಗೆ ಪ್ರಶ್ನೆಗಳ ಆಯ್ಕೆಗೆ ಅನುಕೂಲ ವಾಗುವಂತೆ ಪ್ರಶ್ನೆ ಪತ್ರಿಕೆಗಳಲ್ಲಿ ಹೆಚ್ಚುವರಿ ಪ್ರಶ್ನೆ ಕೇಳಲಾಗಿದೆ. ಉದಾಹರಣೆಗೆ ಹಿಂದೆ 12 ಪ್ರಶ್ನೆಗಳನ್ನು ಕೇಳಿ 10 ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು. ಈ ಬಾರಿಯೂ ವಿದ್ಯಾರ್ಥಿಗಳು 10 ಪ್ರಶ್ನೆಗಳಿಗೆ ಉತ್ತರಿಸಬೇಕು. ಆದರೆ, 15 ಪ್ರಶ್ನೆಗಳನ್ನು ಕೇಳಲಾಗುತ್ತದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಉ‍ಪ ನಿರ್ದೇಶಕ (ಡಿಡಿಪಿಯು) ನಾಗಮಲ್ಲೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರ್ವಭಾವಿ ಪರೀಕ್ಷೆ: ಸಾಮಾನ್ಯವಾಗಿ, ವಾರ್ಷಿಕ ಪರೀಕ್ಷೆಗೂ ಮುನ್ನ ನಡೆಸಲಾಗುವ ಪೂರ್ವಭಾವಿ ಪರೀಕ್ಷೆಗೆ ರಾಜ್ಯ ಮಟ್ಟದಿಂದಲೇ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ. ಹಿಂದಿನ ವರ್ಷದ ಅಂತಿಮ ಪರೀಕ್ಷೆಗಾಗಿ ಸಿದ್ಧಪಡಿಸಲಾಗಿದ್ದ ಮೂರು ಪ್ರಶ್ನೆಪತ್ರಿಕೆಗಳಲ್ಲಿ ಉಳಿದ ಎರಡು ಪ್ರಶ್ನೆ ಪತ್ರಿಕೆಗಳಲ್ಲಿ ಒಂದನ್ನು ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ.

‘ಈ ಬಾರಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾಗಿರುವುದ ರಿಂದ ಪೂರ್ವಭಾವಿ ಪರೀಕ್ಷೆಗೆ ಜಿಲ್ಲಾ ಮಟ್ಟದಲ್ಲೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರಿಗೆ ಕಾರ್ಯಾ ಗಾರ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ನಾಗಮಲ್ಲೇಶ್‌ ಮಾಹಿತಿ ನೀಡಿದರು.

ಕೈಪಿಡಿ ಪ್ರಕಟ: ವಿಶೇಷವಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಅನುಕೂಲವಾಗುವಂತೆ ಆಯಾ ವಿಷಯಗಳ ಉಪನ್ಯಾಸಕರ ಸಂಘ ಪರೀಕ್ಷಾ ಕೈಪಿಡಿ ಸಿದ್ಧಪಡಿಸಿದೆ. ಭೌತವಿಜ್ಞಾನ, ಜೀವವಿಜ್ಞಾನ, ರಸಾ ಯನ ವಿಜ್ಞಾನ ವಿಷಯಗಳ ಕೈಪಿಡಿಗಳು ಈಗಾಗಲೇ ಸಿದ್ಧಗೊಂಡಿವೆ.

ಅಡ್ಡಿಯಾಗದ ಕೋವಿಡ್‌
ಕೋವಿಡ್‌ ಮೂರನೇ ಅಲೆಯು ಪಿಯು ಮಕ್ಕಳನ್ನು ಹೆಚ್ಚು ಬಾಧಿಸಿಲ್ಲ. ಈ ಸಾಲಿನಲ್ಲಿ ಪ್ರಥಮ, ದ್ವಿತೀಯ ಪಿಯು ಸೇರಿದಂತೆ ಒಟ್ಟು 15,443 ಮಕ್ಕಳಿದ್ದಾರೆ.

‘ಇದುವರೆಗೆ 80 ವಿದ್ಯಾರ್ಥಿಗಳಲ್ಲಿ ಕೋವಿಡ್‌ ದೃಢಪಟ್ಟಿದೆ. ಆದರೆ, ಯಾರಲ್ಲೂ ರೋಗ ಲಕ್ಷಣ ಇರಲಿಲ್ಲ. ಕೊಳ್ಳೇಗಾಲದ ಒಂದು ಕಾಲೇಜಿಗೆ ಮಾತ್ರ ರಜೆ ನೀಡಬೇಕಾಗಿ ಬಂದಿತ್ತು. ಬೇರೆಲ್ಲೂ ಸಮಸ್ಯೆಯಾಗಿಲ್ಲ. ಬೋಧನೆ ಹಾಗೂ ವಿದ್ಯಾರ್ಥಿಗಳ ಕಲಿಕೆಗೂ ಕೋವಿಡ್‌ನಿಂದಾಗಿ ತೊಂದರೆಯಾಗಿಲ್ಲ’ ಎಂದು ಡಿಡಿಪಿಯು ನಾಗಮಲ್ಲೇಶ್‌ ತಿಳಿಸಿದರು.

ಶೇ 94ರಷ್ಟು ಮಂದಿಗೆ ಲಸಿಕೆ: ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ 14,425 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಶೇ 94ರಷ್ಟು ಪ್ರಗತಿಯಾಗಿದೆ.

*
ಕೋವಿಡ್‌ ನಡುವೆಯೇ ನಮ್ಮಲ್ಲಿ ಶೇ 80ರಷ್ಟು ಪಠ್ಯದ ಬೋಧನೆ ಪೂರ್ಣಗೊಂಡಿದೆ. ಪೂರ್ವಭಾವಿ ಪರೀಕ್ಷೆ ನಡೆಸಲು ಸಿದ್ಧತೆ ಆರಂಭಿಸಿದ್ದೇವೆ.
–ನಾಗಮಲ್ಲೇಶ್‌, ಡಿಡಿಪಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.