ADVERTISEMENT

ಚಿಕ್ಕಲ್ಲೂರು ಜಾತ್ರೆ: ಸಾರ್ವಜನಿಕರು, ಭಕ್ತರಿಗೆ ಪ್ರವೇಶ ನಿರ್ಬಂಧ

ಕೋವಿಡ್‌ –19 ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮ: ಶಾಸಕರು, ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 14:20 IST
Last Updated 13 ಜನವರಿ 2021, 14:20 IST
ಚಿಕ್ಕಲ್ಲೂರು ಜಾತ್ರೆಗೆ ಸಂಬಂಧಿಸಿದ ಪೂರ್ವಭಾವಿ ಸಭೆ ಶಾಸಕರಾದ ಆರ್‌.ನರೇಂದ್ರ, ಎನ್‌.ಮಹೇಶ್‌ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ನಡೆಯಿತು
ಚಿಕ್ಕಲ್ಲೂರು ಜಾತ್ರೆಗೆ ಸಂಬಂಧಿಸಿದ ಪೂರ್ವಭಾವಿ ಸಭೆ ಶಾಸಕರಾದ ಆರ್‌.ನರೇಂದ್ರ, ಎನ್‌.ಮಹೇಶ್‌ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ನಡೆಯಿತು   

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನಚಿಕ್ಕಲ್ಲೂರಿನಲ್ಲಿ ಇದೇ 28ರಿಂದ ಫೆಬ್ರುವರಿ 1ರವರೆಗೆ ನಡೆಯಲಿರುವ ಸಿದ್ದಾಪ್ಪಾಜಿ ಜಾತ್ರಾ ಮಹೋತ್ಸವವನ್ನು ಕೋವಿಡ್ ಕಾರಣದಿಂದ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಜಾತ್ರೆಗೆ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್.‌ರವಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ವಾರ್ಷಿಕವಾಗಿ ನಡೆಯುವ ಐದು ದಿನಗಳ ಜಾತ್ರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಐದು ದಿನಗಳ ಕಾಲ ದೇವಾಲಯದ ಸುತ್ತಮುತ್ತ ಕುಟುಂಬ ಸಮೇತರಾಗಿ ಬಂದು ವಾಸ್ತವ್ಯ ಹೂಡುತ್ತಾರೆ.

ADVERTISEMENT

100 ಜನರಿಗಷ್ಟೇ ಅವಕಾಶ: ಜಾತ್ರೆಯ ಅಂಗವಾಗಿ ನಡೆಯುವ ಪೂಜಾ ಕೈಕಂಕರ್ಯ ಹಾಗೂ ವಿಶೇಷ ಸೇವೆಗಳನ್ನು ಸಾಂಪ್ರದಾಯಿಕವಾಗಿ ನಡೆಸುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸ್ಥಳೀಯ ಸಿದ್ದಾಪ್ಪಾಜಿ ದೇವಸ್ಥಾನದ ಟ್ರಸ್ಟ್ ಹಾಗೂ ಮಠಗಳಿಗೆ ಸೇರಿದ ಗರಿಷ್ಠ 100 ಮಂದಿ ಪಾಲ್ಗೊಂಡು ಸಾಂಪ್ರಾದಯಿಕ ಆಚರಣೆಗಳನ್ನು ನೆರವೇರಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಹೈಕೋರ್ಟ್ ನಿರ್ದೇಶನದಂತೆ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆಯೂ ಕಟ್ಟುನಿಟ್ಟಿನ ನಿಗಾ ಕ್ರಮಗಳು ಮುಂದುವರಿಸುವ ಬಗ್ಗೆಯೂ ಸಭೆ ನಿರ್ಧರಿಸಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಚಿಕ್ಕಲ್ಲೂರು ಜಾತ್ರೆಗೆ ಭಕ್ತಾದಿಗಳು ಬರುತ್ತಾರೆ. ಕೋವಿಡ್‌ ಕಾರಣದಿಂದ ಸಾರ್ವಜನಿಕರು ಹಾಗೂ ಭಕ್ತರ ಪ್ರವೇಶಕ್ಕೆ ಅವಕಾಶ ಇಲ್ಲ ಎಂಬುದನ್ನು ವ್ಯಾಪಕವಾಗಿ ಪ್ರಚುರ ಪಡಿಸಬೇಕು. ಕರಪತ್ರ, ಪೋಸ್ಟರ್‌ಗಳ ಮೂಲಕ ಮಾಹಿತಿ ನೀಡಬೇಕು. ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿಯೂ ಜಾತ್ರಾ ಮಹೋತ್ಸವಕ್ಕೆ ಭಕ್ತರಿಗೆ ಅವಕಾಶವಿಲ್ಲದಿರುವ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಯಿತು.

ಸಾಂಪ್ರದಾಯಿಕವಾಗಿ ಜಾತ್ರೆ ನಡೆಯುವ ಪ್ರದೇಶದಲ್ಲಿಕುಡಿಯುವ ನೀರು, ಸ್ವಚ್ಛತೆಯಂತಹ ವ್ಯವಸ್ಥೆಗಳಿಗೆ ಕೊರತೆಯಾಗಬಾರದು. ಪೊಲೀಸ್ ಬಂದೋಬಸ್ತ್ ಒದಗಿಸಬೇಕು, ಸಿಹಿ ಪ್ರಸಾದ ವಿತರಣೆಗೂ ಮೊದಲು ಆರೋಗ್ಯ ಸುರಕ್ಷತಾ ಅಧಿಕಾರಿಗಳು ಪರೀಕ್ಷಿಸಬೇಕು ಎಂದು ಶಾಸಕರು ಹಾಗೂ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ಸಿದ್ದಾಪ್ಪಾಜಿ ದೇವಸ್ಥಾನದ ಟ್ರಸ್ಟ್ ಹೊಸಮಠ, ಸಿದ್ದಾಪ್ಪಾಜಿ ಮಠದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.