ADVERTISEMENT

ಮಕ್ಕಳ ಹಕ್ಕು ರಕ್ಷಣೆಗೆ ಕಾನೂನು ಪರಿಣಾಮಕಾರಿ ಜಾರಿ ಅಗತ್ಯ

ಕಾರ್ಯಾಗಾರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 9:40 IST
Last Updated 5 ಡಿಸೆಂಬರ್ 2019, 9:40 IST
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಕಾರ್ಯಾಗಾರಕ್ಕೆ ಚಾಲನೆ ನೀಡಿದರು
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಕಾರ್ಯಾಗಾರಕ್ಕೆ ಚಾಲನೆ ನೀಡಿದರು   

ಚಾಮರಾಜನಗರ: ‘ಮಕ್ಕಳ ಹಕ್ಕುಗಳ ರಕ್ಷಣೆಗೆ ಸಮಾಜದ ಹೊಣೆ ಹಾಗೂ ಸರ್ಕಾರದ ಪರಿಣಾಮಕಾರಿ ಕಾನೂನು ಜಾರಿ ಅಗತ್ಯವಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸ್ಪಂದನ ಸಂಸ್ಥೆ, ಕೈಲಾಶ್ ಸತ್ಯಾರ್ಥಿ ಮಕ್ಕಳ ಸಂಸ್ಥೆ ಹಾಗೂ ಭೀಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ‘ಮಕ್ಕಳ ಸಾಗಾಣಿಕೆ ಮತ್ತು ಮಕ್ಕಳ ರಕ್ಷಣೆ’ ಕುರಿತ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ, ನ್ಯಾಯಯುತ ಹಕ್ಕುಗಳ ಸ್ವಾತಂತ್ರ್ಯವನ್ನು ನೀಡಿದೆ. ಅನುಚ್ಛೇದ 15ರಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಮೊಟಕುಗೊಳಿಸದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದೆ. ಆದರೂ ಮಕ್ಕಳ ಸಾಗಾಣಿಕೆ ಅವ್ಯಾಹವತವಾಗಿ ನಡೆಯುತ್ತಿರುವುದು ಆತಂಕದ ಸಂಗತಿ’ ಎಂದರು.

ADVERTISEMENT

ಹೊರ ದೇಶಕ್ಕೂ ಸಾಗಾಣಿಕೆ: ‘ಆರ್ಥಿಕ ಸಬಲತೆ, ಶಿಕ್ಷಣ ಇಲ್ಲದಿರುವುದು, ಉದ್ಯೋಗ ಆಮಿಷ ಇಂತಹ ಕಾರಣಗಳಿಂದ ಸಾಗಾಣಿಕೆ ನಡೆಯುತ್ತಿದೆ. ದೇಶದಲ್ಲಿ ಪ್ರತಿ 8 ನಿಮಿಷಕ್ಕೆ ಒಂದುಮಗು ಕಾಣೆಯಾಗುತ್ತಿದೆ. ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಮಕ್ಕಳ ಸಾಗಾಣಿಕೆಗೆ ಅಲ್ಲಿನಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸುವ ಅಗತ್ಯವಿದೆ’ ಎಂದ ಅವರು, ‘ದೇಶದಿಂದ ಹೊರದೇಶಗಳಿಗೂ ಮಕ್ಕಳ ಸಾಗಾಣಿಕೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರದ ಜವಾಬ್ದಾರಿ ಹೆಚ್ಚಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ವ್ಯಾಪಾರವಾಗಿಸಿಕೊಂಡಿರುವ ಮಕ್ಕಳ ಸಾಗಾಣಿಕೆ ತಡೆಗಟ್ಟುವಲ್ಲಿನಾಗರಿಕರ ಪಾತ್ರ ಅತ್ಯಮೂಲ್ಯ.ಪೊಲೀಸ್‌ ಇಲಾಖೆಗೆ ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ನಾಗರಿಕರು ಸಹಾಯ ಮಾಡಬೇಕಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಈ ಬಗ್ಗೆ ಅರಿವು ಪಡೆದುಕೊಳ್ಳಬೇಕು’ ಎಂದರು.

‘ಮಕ್ಕಳ ರಕ್ಷಣೆ, ಪೋಷಣೆ ಮತ್ತು ಸುರಕ್ಷತೆಗಾಗಿ ನಗರಸಭೆ ವಾರ್ಡ್‌ಗಳು ಸೇರಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಸಾಗಾಣಿಕೆ ತಡೆ ಕಾವಲು ಸಮಿತಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಈ ಮಹತ್ವದ ಕೆಲಸಕ್ಕೆ ಆರೋಗ್ಯ, ಶಿಕ್ಷಣ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಇಲಾಖೆಗಳು ಹೆಚ್ಚು ನಿಗಾ ವಹಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಸಿಇಒಬಿ.ಎಚ್.ನಾರಾಯಣರಾವ್,ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಕೋಶದ ನಿರ್ದೇಶಕ ಸ್ಟ್ಯಾನ್ಲಿ, ಸಾಧನಾ ಸಂಸ್ಥೆಯ ನಿರ್ದೇಶಕ ಟಿ.ಜೆ.ಸುರೇಶ್,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಜೆ.ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆಸರಸ್ವತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಇದ್ದರು.

ವಿಕೃತ ಕಾಮುಕರ ಸಮೀಕ್ಷೆಯಲ್ಲಿ ವಿಫಲ
‘5 ಮಕ್ಕಳನ್ನು ಹಿಂಡಿ ತಿನ್ನುವಂತಹ 500 ಕಾಮುಕರು ಇದ್ದಾರೆ. ಇಂತಹ ವಿಕೃತ, ಕ್ರೂರ ಮನಸ್ಸಿನ ಕಾಮುಕರ ಸಮೀಕ್ಷೆ ಆಗುತ್ತಿಲ್ಲ. ಈ ಮಕ್ಕಳನ್ನು ಬಳಸಿಕೊಳ್ಳುವ 20 ಕೋಟಿಗೂ ಹೆಚ್ಚು ವಿಕೃತರಿದ್ದಾರೆ ಎಂದು ಅಂಕಿಅಂಶ ಹೇಳುತ್ತದೆ. ಇವರನ್ನು ಕಾನೂನಿನ ಸುಪರ್ದಿಗೆ ತರುವಲ್ಲಿ ವಿಫಲರಾಗಿದ್ದೇವೆ’ ಎಂದುಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶಕ ಪರಶುರಾಮ್ ಕಳವಳ ವ್ಯಕ್ತಪಡಿಸಿದರು.

ಮಾನವ ಸಾಗಾಟ ಅವಮಾನ ಪ್ರಕ್ರಿಯೆ: ‘ಮಹಿಳೆಯರನ್ನು, ಮಕ್ಕಳನ್ನು ಸಾಗಾಟ ಮಾಡಿ ಅದರಲ್ಲಿ ಊಟ ಮಾಡುತ್ತಿರುವಂತಹ ಜನರು ನಮ್ಮ ಸುತ್ತ ಇರುವುದು ಅವಮಾನದ ಪ್ರಕ್ರಿಯೆ. ಮಾನವ ಸಾಗಾಣಿಕೆಯನ್ನು ಬಡಿದು ಆಚೆಗೆ ನೂಕಬೇಕಿತ್ತು. ಆದರೆ, ಯಾಕೋ ಅದು ಸಾಧ್ಯವಾಗುತ್ತಿಲ್ಲ’ ಎಂದು ಮರುಗಿದರು.

‘ಮಕ್ಕಳ ಹಕ್ಕುಗಳು ಕಾನೂನಾತ್ಮಕವಾಗಿಅನುಷ್ಠಾನಗೊಳ್ಳಬೇಕು.ಈ ನಿಟ್ಟಿನಲ್ಲಿ ಸಹಿಆಂದೋಲನನಡೆಸಲಾಗಿತ್ತು. ಲೋಕಸಭಾ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ ಬಳಿ ಆಂದೋಲನದ ಬೇಡಿಕೆಗಳನ್ನಿಟ್ಟು ಬಜೆಟ್‌ ಸಹಿತ ಮಕ್ಕಳ ಹಕ್ಕುಗಳನ್ನು ಅನುಷ್ಠಾನಗೊಳಿಸಬೇಕು ಎನ್ನುವುದು ಪ್ರಮುಖ ಉದ್ದೇಶವಾಗಿತ್ತು’ ಎಂದುಸ್ಪಂದನ ಸಂಸ್ಥೆಯ ನಿರ್ದೇಶಕಿ ಸುಶೀಲಹೇಳಿದರು.

ದೊಡ್ಡ ಉದ್ಯಮ: ‘ಮಾನವ ಸಾಗಾಣಿಕೆಯಲ್ಲಿ ಪ್ರಪಂಚದ 2ನೇ ದೊಡ್ಡ ವ್ಯಾಪಾರ ಉದ್ಯಮ ಭಾರತ. ಇದರಲ್ಲಿ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ. ಸುಮಾರು 3 ದಶಲಕ್ಷ ಮಕ್ಕಳು, ಮಹಿಳೆಯರು ಈ ಜಾಲಕ್ಕೆ ತುತ್ತಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.